– ಸಹೋದರ, ಸೋದರ ಮಾವನಿಂದ ಕೃತ್ಯ
– ಮುಖವನ್ನೇ ವಿರೂಪಗೊಳಿಸೋ ಪ್ಲಾನ್ ಮಾಡಿದ್ರು
ಮೀರತ್: ಬೇರೆ ಜಾತಿಯವನ ಜೊತೆ ಇರುವ ಸಹೋದರಿಯ ಪ್ರೇಮ ಸಂಬಂಧ ತಿಳಿದುಕೊಂಡ ಸಹೋದರ ಆಕೆಯನ್ನು ಹತ್ಯೆ ಮಾಡಲು ಮುಂದಾದ ಘಟನೆ ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ.
ಸ್ಥಳೀಯರ ಮಧ್ಯಪ್ರವೇಶದಿಂದ ಯುವತಿಯ ಜೀವ ಉಳಿದಿದೆ. ಸದ್ಯ ಯುವತಿ ಮೀರತ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಮೀರತ್ ನ ಕಿಥೋರೆ ಪ್ರದೇಶದಲ್ಲಿ ಇಬ್ಬರು ಯುವಕರು ಹಾಗೂ ಯುವತಿ ಇರುವುದನ್ನು ಗ್ರಾಮಸ್ಥರು ನೋಡಿದ್ದಾರೆ. ಸ್ವಲ್ಪ ಸಮಯದ ಬಳಿಕ ಜೊತೆಗಿದ್ದ ಇಬ್ಬರು ಯುವಕರು ಯುವತಿ ಮೇಲೆ ಚಾಕುವಿನಿಂದ ಇರಿಯುತ್ತಿರುವುದನ್ನು ಕೆಲ ಗ್ರಾಮಸ್ಥರು ನೋಡಿದ್ದಾರೆ. ಇದನ್ನು ಗಮನಿಸಿದ ಕೂಡಲೇ ಅವರು ಸ್ಥಳಕ್ಕೆ ದೌಡಾಯಿಸಿದಾಗ, ಯುವತಿ ನೋವಿನಿಂದ ಕಿರುಚಾಡುತ್ತಿದ್ದಳು. ಇತ್ತ ಗ್ರಾಮಸ್ಥರು ಹತ್ತಿರ ಬರುತ್ತಿದ್ದಂತೆಯೇ ಯುವಕರು ಸ್ಥಳದಿಂದ ಬೈಕ್ ಏರಿ ಕಾಲ್ಕಿತ್ತಿದ್ದಾರೆ.
Advertisement
ಯುವತಿ ಮೈ ಮೇಲೆ ಚಾಕುವಿನಿಂದ ಇರಿಯಲಾಗಿದ್ದು, ಅಲ್ಲದೆ ಮುಖದ ಮೇಲೆಯೂ ಗಂಭೀರ ಗಾಯಗಳಾಗಿತ್ತು. ತಾನು ಹಪುರ್ ನಿವಾಸಿಯಾಗಿದ್ದು, ಅದೇ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದೇನೆ. ಆದರೆ ಆತ ಬೇರೆ ಜಾತಿಯವನಾಗಿರುವುದರಿಂದ ಮನೆಯಲ್ಲಿ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾಳೆ.
Advertisement
ಯುವತಿಯ ಸಹೋದರ ಹಾಗೂ ಸೋದರ ಮಾವ ಸೋಮವಾರ, ಪ್ರೇಮಿಯೊಂದಿಗೆ ಭೇಟಿ ಮಾಡಿಸುವ ನೆಪದಲ್ಲಿ ಆಕೆಯನ್ನು ಕಿಥೋರ್ ಪ್ರದೇಶದ ಕಾಲುವೆಗೆ ಕರೆದೊಯ್ದಿದ್ದಾರೆ. ಹೀಗೆ ಕರೆದೊಯ್ದ ಬಳಿಕ ಆಕೆಯ ಮುಖವನ್ನು ವಿರೂಪ ಮಾಡುವ ಪ್ಲಾನ್ ಮಾಡಿದ್ದರು. ಆದರೆ ಗ್ರಾಮಸ್ಥರು ಸರಿಯಾದ ಸಮಯಕ್ಕೆ ಬಂದ ಕಾರಣ ವಿಫಲರಾದರು.
ತನ್ನ ಪ್ರಿಯತಮನಿಂದ ಬೇರ್ಪಡಿಸುವ ಸಲುವಾಗಿ ಮೀರತ್ ನಲ್ಲಿ ವಾಸವಾಗಿರುವ ಚಿಕ್ಕಮ್ಮನ ಮನೆಯಲ್ಲಿ ಇರುವಂತೆ ಕುಟುಂಬದವರು ಒತ್ತಾಯಿಸುತ್ತಿದ್ದಾರೆ ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ.
ಮಾರಣಾಂತಿಕ ಹಲ್ಲೆಯ ಬಳಿಕದ ಯುವತಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಆಸ್ಪತ್ರೆಗೆ ಕರೆದೊಯ್ಯುವ ಮುನ್ನ ಗ್ರಾಮಸ್ಥರು ಈ ವಿಡಿಯೋ ಮಾಡಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.