ಮಂಡ್ಯ: ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಮಂಡ್ಯ ಜಿಲ್ಲಾಡಳಿತದಿಂದ ಸಂಪೂರ್ಣ ಬ್ರೇಕ್ ಬಿದ್ದಿದೆ. ಹಳೆ ಮೈಸೂರು ಭಾಗದ ರೈತರ ಜೀವನಾಡಿಯಾಗಿರುವ ಕೆಆರ್ಎಸ್ ಡ್ಯಾಂಗೆ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಅಪಾಯ ಉಂಟಾಗುತ್ತಿದೆ ಎಂಬ ತಜ್ಞರ ಮನವಿಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
Advertisement
ಬೇಬಿ ಬೆಟ್ಟದಲ್ಲಿ ನಡೆಯುವ ಗಣಿಗಾರಿಕೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಡ್ಯಾಂ ಅಪಾಯ ಎದುರಾಗುತ್ತದೆ ಎಂದು ಹಲವು ತಜ್ಞರು ರಾಜ್ಯ ಸರ್ಕಾರಕ್ಕೆ ವರದಿಯನ್ನು ನೀಡಿದ್ದರು. ಆದರೂ ಸಹ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆಯನ್ನು ತಡೆಯಲು ಸಾಧ್ಯವಾಗಿರಲಿಲ್ಲ. ಕಳೆದ ಒಂದು ವರ್ಷದ ಹಿಂದೆ ಗಣಿಗಾರಿಕೆಯನ್ನು ಬಂದ್ ಮಾಡುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿತ್ತು. ಆದರೆ ಮತ್ತೆ ಕೆಲದಿನಗಳ ನಂತರ ಬೇಬಿ ಬೆಟ್ಟದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿತ್ತು. ಪ್ರಭಾವಿಗಳ ಕೈವಾಡದಿಂದಾಗಿ ರಾತ್ರಿ ವೇಳೆ ಬ್ಲಾಸ್ಟಿಂಗ್ ಮಾಡಿ ಗಣಿಗಾರಿಕೆಯನ್ನು ನಡೆಸುತ್ತ ಇದ್ದಾರೆ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬರುತ್ತಿತ್ತು. ಆದರೂ ಜಿಲ್ಲಾಡಳಿತ ಈ ಅಕ್ರಮ ಕ್ವಾರಿಯ ಬಗ್ಗೆ ಕ್ರಮ ಕೈಗೊಂಡಿರಲಿಲ್ಲ.
Advertisement
Advertisement
Advertisement
ಕಳೆದ ಕೆಲದಿನಗಳ ಹಿಂದೆ ಶಿವಮೊಗ್ಗದಲ್ಲಿ ನಡೆದ ಘಟನೆಯಿಂದ ಮಂಡ್ಯ ಜಿಲ್ಲಾಡಳಿತ ಈಗಲಾದರೂ ಬೇಬಿ ಬೆಟ್ಟದಲ್ಲಿ ಸಂಪೂರ್ಣವಾಗಿ ಗಣಿಗಾರಿಕೆಯನ್ನು ತಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕೆಆರ್ಎಸ್ ಅಣೆಕಟ್ಟೆಗೆ ಅಪಾಯ ಎದುರಾಗುತ್ತದೆ ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿತ್ತು. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಿಲ್ಲಾಡಳಿತ ಇದೀಗ ಬೇಬಿ ಬೆಟ್ಟದಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯನ್ನು ಸಂಪೂರ್ಣವಾಗಿ ಬಂದ್ ಮಾಡಿದೆ. ಅಲ್ಲದೇ ಕದ್ದು ಮುಚ್ಚಿ ಗಣಿಗಾರಿಕೆ ಮಾಡುವುದನ್ನು ತಡೆಗಟ್ಟಲು, ಡ್ರೋಣ್ ಮೂಲಕ ನಿಗಾ ವಹಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.