Bengaluru CityDistrictsKarnatakaLatestMain Post

ಬೆಳ್ಳಂಬೆಳಗ್ಗೆ ರೈಲು, ವಿಮಾನ ನಿಲ್ದಾಣಕ್ಕೆ ಕರವೇ ಮುತ್ತಿಗೆ – ಕಾರ್ಯಕರ್ತರ ಬಂಧನ

ಬೆಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ಇಂದು ಕರ್ನಾಟಕ ಬಂದ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ರೈತರು ಆಕ್ರೋಶ ಶುರು ಮಾಡಿದ್ದು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆಗೆ ಯತ್ನಿಸಿದ್ದಾರೆ. ಪರಿಣಾಮ 50ಕ್ಕೂ ಹೆಚ್ಚು ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕರವೇ ಮಹಿಳಾ ಕಾರ್ಯಕರ್ತೆಯರು ಏರ್‌ಪೋರ್ಟಿಗೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಈ ವೇಳೆ ಪೊಲೀಸರು 30ಕ್ಕೂ ಹೆಚ್ಚು ಮಹಿಳಾ ಪ್ರತಿಭಟನಕಾರರನ್ನ ಬಂಧಿಸಿದ್ದಾರೆ. ಇತ್ತ ಮೆಜೆಸ್ಟಿಕ್‍ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕರವೇ ಕಾರ್ಯಕರ್ತರು ರೈಲ್ವೆ ಸ್ಟೇಷನ್ ಮುತ್ತಿಗೆಗೆ ಯತ್ನಿಸಿದ್ದಾರೆ. ಆಗ ಫ್ಲಾಟ್ ಫಾರಂಗೆ ಬಿಡದೆ ಎಲ್ಲಾ ಕರವೇ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದಾರೆ. ಅಲ್ಲದೇ ಕೋಡಿಹಳ್ಳಿ ಚಂದ್ರಶೇಖರ್, ಟಿ.ಎ.ನಾರಾಯಣಗೌಡ ಸೇರಿದಂತೆ ರೈಲ್ವೆ ನಿಲ್ದಾಣದಲ್ಲಿ ಕರವೇ ಕಾರ್ಯಕರ್ತರ ಪೊಲೀಸರು ಬಂಧಿಸಿದ್ದಾರೆ.

ಅರೆಸ್ಟ್ ಆಗಿದ್ದ ಕರವೇ ಕಾರ್ಯಕರ್ತರು ಬಸ್ಸಿನಿಂದ ಕೆಳಗಿಳಿದು ಆನಂದ್ ರಾವ್ ಫ್ಲೈ ಓವರ್ ಮೇಲೆ ರಸ್ತೆ ತಡೆದು ಪ್ರತಿಭಟನೆಗೆ ಮುಂದಾಗಿದ್ದರು. ಆಗ ಮತ್ತೆ ಕಾರ್ಯಕರ್ತರನ್ನು ಬಸ್ಸಿಗೆ ತುಂಬಿ ಪೊಲೀಸರು ಕಳುಹಿಸಿದ್ದಾರೆ. ಬೆಂಗಳೂರಿನ ಅಷ್ಟದಿಕ್ಕೂಗಳಲ್ಲೂ ಸಾಲು ಸಾಲು ಪ್ರತಿಭಟನೆ ಮಾಡುತ್ತಿದ್ದು, ಹಲವೆಡೆ ರೈತರ ಮೆರವಣಿಗೆ, ಬೈಕ್ ರ‍್ಯಾಲಿ, ರಸ್ತೆ ತಡೆ ಮಾಡುವ ಸಾಧ್ಯತೆ ಇದೆ.

ಬೆಂಗಳೂರಲ್ಲಿ ಎಲ್ಲೆಲ್ಲಿ ಬಂದ್ ಬಿಸಿ
* ಟೌನ್ ಹಾಲ್ – ಐಕ್ಯ ಸಮಿತಿ ಹಾಗೂ ರೈತ ಹೋರಾಟಗಾರರ ಪ್ರತಿಭಟನೆ (ಟೌನ್‍ಹಾಲ್‍ನಿಂದ ಫ್ರೀಡಂ ಪಾರ್ಕ್ ವರೆಗೆ ರ‍್ಯಾಲಿ)
* ಮೈಸೂರು ಬ್ಯಾಂಕ್ ಸರ್ಕಲ್ – ಬಡಗಲಪುರ ನಾಗೇಂದ್ರ ಮುಂದಾಳತ್ವದ ರೈತ ಸಂಘಟನೆ (ಕೆಜಿ ರೋಡ್, ಗಾಂಧಿನಗರ, ಮೆಜೆಸ್ಟಿಕ್ ಸುತ್ತಮುತ್ತ ಮೆರವಣಿಗೆ)
* ಮೌರ್ಯ ಸರ್ಕಲ್ – ಕೋಡಿಹಳ್ಳಿ ಚಂದ್ರಶೇಖರ್ ಸಾರಥ್ಯದ ರಾಜ್ಯ ರೈತ ಸಂಘ ಹಸಿರು ಸೇನೆ


* ಮೆಜೆಸ್ಟಿಕ್‍ನಲ್ಲಿ ಬಸ್ ತಡೆ – ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಚಳವಳಿ ಸಂಘಟನೆ

* ಮೆಜೆಸ್ಟಿಕ್‍ನಲ್ಲಿ ರೈಲು ತಡೆ – ನಾರಾಯಣಗೌಡ ನೇತೃತ್ವದ ಕರವೇ
* ಸುಮನಹಳ್ಳಿ ಸರ್ಕಲ್ – ಗಿರೀಶ್ ಗೌಡ ನೇತೃತ್ವದ ರಾಜ್ಯ ರೈತ ಸಂಘಟನೆ
* ಡಾ. ರಾಜಕುಮಾರ್ ಸಮಾಧಿ (ಲಗ್ಗರೆ ಜಂಕ್ಷನ್) – ಜಯರಾಜ್ ನಾಯ್ಡು ನಾಯಕತ್ವದ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ
* ಕೆಪಿಸಿಸಿ ಕಚೇರಿ – ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ( ಮನೋಹರ್)

Leave a Reply

Your email address will not be published.

Back to top button