ಬೆಳಗ್ಗೆ ಆಶಾ ಕಾರ್ಯಕರ್ತೆ, ಮಧ್ಯಾಹ್ನ ನಂತರ ಆಟೋ ಚಾಲಕಿ

– ಹೆರಿಗೆಗೆ ದಿನದ 24 ಗಂಟೆಯೂ ಸೇವೆ
– ಸಾಮಾಜಿಕ ಜಾಲತಾಣದಲ್ಲಿ ರಾಜೀವಿಗೆ ಪ್ರಶಂಸೆ

ಉಡುಪಿ: ಹತ್ತು ಆಸ್ಪತ್ರೆ ಸುತ್ತಿದರೂ ಚಿಕಿತ್ಸೆ ಸಿಗಲಿಲ್ಲ. ವೈದ್ಯರನ್ನು ಕಂಡು ಮನಸ್ಸು ರೋಸಿ ಹೋದಾಗ, ಉಡುಪಿಯಲ್ಲಿ ನಡೆದ ಈ ಘಟನೆ ಮಾನವೀಯತೆ ಸತ್ತಿಲ್ಲ. ಬದುಕಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ಕಾಸಿನ ಮುಂದೆ ಕರುಣೆ ಕಣ್ಮರೆಯಾಗಿರುವ ಕಾಲದಲ್ಲಿ ಆಶಾ ಕಾರ್ಯಕರ್ತೆಯೊಬ್ಬರು ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

- Advertisement -

ಉಡುಪಿಯ ಪೆರ್ಣಂಕಿಲದ ಆಶಾ ಕಾರ್ಯಕರ್ತೆ ರಾಜೀವಿ ಅವರು ಮಹಿಳೆಯನ್ನು ಹೆರಿಗೆಗೆ ಆಟೋದಲ್ಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ರಾಜೀವಿ ಇದಕ್ಕೂ ಮೊದಲು ಆಟೋ ಚಾಲಕಿಯಾಗಿದ್ದರು. ಇವರಿಗೆ ರಾತ್ರಿ 3.15 ಕರೆ ಬಂದಿದೆ. ದಿನಪೂರ್ತಿ ದುಡಿದು ಸುಸ್ತಾಗಿದ್ದ ಇವರು ಪೋನ್ ಬಂದ್ ಮಾಡಿ ಮಲಗಬಹುದಿತ್ತು. ಆದರೆ ರಾಜೀವಿ ಫೋನ್ ಸ್ವೀಕರಿಸಿ ಮಾತನಾಡಿರೆ. ಆಗ ಮಹಿಳೆ ಹೆರಿಗೆ ನೋವು ಕೇಳಿ ಎದ್ದು ಕೂತಿದ್ದಾರೆ. ನಂತರ ಒಂದೆರಡು ನಿಮಿಷಕ್ಕೆ ಆಟೋ ರಸ್ತೆಗೆ ಇಳಿಸಿದ್ದಾರೆ.

ತನ್ನದೇ ಊರಿನ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಶಾ ಕಾರ್ಯಕರ್ತೆಯೂ ಆಗಿರುವುದರಿಂದ ರಾಜೀವಿಯ ಆಟೋ ಗರ್ಭಿಣಿ ಮನೆ ಮುಂದೆ ನಿಂತಿತು. ಮಹಿಳೆಯನ್ನು ತಕ್ಷಣ ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲ ಹೆರಿಗೆ ಆಸ್ಪತ್ರೆಗೆ ಕರೆದುಕೊಂಡು ಹೊರಟಿತು.

- Advertisement -

ಸೂಕ್ತ ಸಾರಿಗೆ ಸೌಲಭ್ಯಗಳಿಲ್ಲದ ಪೆರ್ಣಂಕಿಲ ಗ್ರಾಮದಿಂದ ಸುಮಾರು 20 ಕಿ.ಮೀ ದೂರದ ಉಡುಪಿ ನಗರಕ್ಕೆ ಆ ಹೊತ್ತಲ್ಲಿ ಬರೋದಕ್ಕೆ ಯಾವ ವಾಹನವೂ ಸಿಗಲ್ಲ. ರಾಜೀವಿ ಗರ್ಭಿಣಿಯನ್ನು ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ. ಎರಡು ಜೀವ ಉಳಿಸಿದ್ದಾರೆ. ಶ್ರೀಲತಾಗೆ ಹೆಣ್ಣುಮಗು ಜನಿಸಿದೆ. ತಾಯಿ, ಮಗು ಆರೋಗ್ಯವಾಗಿದ್ದಾರೆ.

ಗರ್ಭಿಣಿಯರಿಗೆ ರಾಜೀವಿಯ ಉಚಿತ ಆಟೋ ಸೇವೆ ಇಂದು ನೆನ್ನೆ ಶುರುವಾದದ್ದಲ್ಲ. ಬಹಳ ವರ್ಷಗಳ ಹಿಂದೆನಿಂದಲೇ ಈ ಕಾಳಜಿ ತೋರುತ್ತಿದ್ದಾರೆ. ಬೋರ್ಡ್ ಹಾಕಿದಂತೆ 24/7 ಸಹಾಯಕ್ಕೆ ಬರುತ್ತಾರೆ.

ಎರಡು ಮಕ್ಕಳ ತಾಯಿ ಹವ್ಯಾಸಕ್ಕಾಗಿ ಪತಿಯ ಸಹಕಾರದಿಂದ ಆಟೊ ಚಾಲನೆ ಕಲಿತಿದ್ದರು. 20 ವರ್ಷದಿಂದ ಆಟೊ ಓಡಿಸುತ್ತಿರುವ ಈಕೆಯ ಪತಿ, ಐದು ವರ್ಷದ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಜೀವನ ನಿರ್ವಹಣೆಗೆ ಅರ್ಧ ದಿನ ಆಶಾ ಕಾರ್ಯಕರ್ತೆಯಾಗಿ, ಉಳಿದ ಅರ್ಧ ದಿನ ಆಟೊ ಚಾಲಕಿಯಾಗಿ ರಾಜೀವಿ ದುಡಿಯುತ್ತಾರೆ. ಚಿಕಿತ್ಸೆ ಕೊಡಲು ಮೀನ ಮೇಷ ಎಣಿಸುವ, ಮಾನವೀಯತೆ ಮರೆತಿರುವ ವೈದ್ಯರಿಗೆ ರಾಜೀವಿ ಮಾದರಿಯಾಗಲಿ ಎಂದು ಸ್ಥಳೀಯರು ಕೊಂಡಾಡುತ್ತಿದ್ದಾರೆ.

- Advertisement -