– ಯಾರಿಗೆ ಸಮಸ್ಯೆ ಇದೆಯೋ, ಇಲ್ಲೆಗೇ ಬರಲು ಹೇಳಿ ಎಂದ ಶಾಸಕ
– ಶಾಸಕರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ಪ್ರತಿಭಟನೆ
– ಶಾಸಕ ದುರ್ಯೋಧನ ಐಹೊಳೆಗೆ ಘೇರಾವ್ ಹಾಕಿ ತರಾಟೆ ತೆಗೆದುಕೊಂಡ ಜನ
ಚಿಕ್ಕೋಡಿ: ಜನರ ಸಮಸ್ಯೆ ಕೇಳಲು ಬಂದು ಬೆಂಬಲಿಗರ ಮನೆಯಲ್ಲಿ ಕುಳಿತ ಶಾಸಕರ ನಡೆಯಿಂದ ಬೇಸತ್ತು ಜನರು ರಾಯಬಾಗ ಕ್ಷೇತ್ರದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆಯರನ್ನು ತರಾಟೆಗೆ ತೆಗೆದುಕೊಂಡು, ಘೇರಾವ್ ಹಾಕಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕಂಕನವಾಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಗೈರಾಣು ಜಮೀನಿನ ಸಮಸ್ಯೆ ಆಲಿಸಲು ಬಂದಿದ್ದ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಕಂಕನವಾಡಿ ಗ್ರಾಮದ ತಮ್ಮ ಬೆಂಬಲಿಗರ ಮನೆಯಲ್ಲೆ ಕುಳಿತು, ಜನರನ್ನು ಅಲ್ಲಿಗೇ ಕರೆಸಿ ಎಂದಿದ್ದಾರೆ. ಇದಕ್ಕೆ ಗರಂ ಆದ ಗ್ರಾಮಸ್ಥರು ಶಾಸಕರನ್ನು ತರಾಟೆಗೆ ತೆಗೆದುಕೊಂಡು, ಘೇರಾವ್ ಹಾಕಿದ್ದಾರೆ.
Advertisement
Advertisement
ಕಂಕಣವಾಡಿ ಗ್ರಾಮದ ಸರ್ಕಾರಿ ಜಾಗ ಒತ್ತುವರಿ ವ್ಯಾಜ್ಯದ ಕುರಿತು ಕಳೆದ ಹಲವು ದಿನಗಳಿಂದ ಸರ್ಕಾರ ಮತ್ತು ಗ್ರಾಮಸ್ಥರ ನಡುವೆ ಸಂಘರ್ಷ ನಡೆದಿದ್ದು, ಗ್ರಾಮಸ್ಥರು ಹಲವು ಬಾರಿ ಪ್ರತಿಭಟನೆ ನಡೆಸಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಕಳೆದ 30 ವರ್ಷಗಳಿಂದ ಕಂಕನವಾಡಿ ಗ್ರಾಮದ ಗೈರಾಣ ಜಮೀನಿನಲ್ಲಿ ವಾಸವಿದ್ದ 2 ಸಾವಿರ ಕುಟುಂಬಗಳಿಗೆ ಸರ್ಕಾರವೇ ಮೂಲಭೂತ ಸೌಕರ್ಯಗಳನ್ನು ನೀಡಿ ಆಶ್ರಯ ಯೋಜನೆಯಲ್ಲೂ ಮನೆ ನಿರ್ಮಿಸಿ ಕೊಟ್ಟಿದೆ. ಆದರೆ ಈಗ ಏಕಾಏಕಿ ಗೈರಾಣು ಜಮೀನಿನನ್ನು ಖಾಲಿ ಮಾಡುವಂತೆ ಆದೇಶ ಹೊರಡಿಸಿದೆ.
Advertisement
ಮನೆಗಳನ್ನು ಖಾಲಿ ಮಾಡಿಸುವಂತೆ ರಾಯಬಾಗ ತಾಲೂಕಾಡಳಿತ ಸೂಚನೆ ನೀಡಿದೆ. ಹೀಗಾಗಿ ಕಂಕನವಾಡಿ ಗ್ರಾಮದ ಶೇ.85 ರಷ್ಟು ಕುಟುಂಬಗಳು ಬೀದಿಗೆ ಬರುವ ಸ್ಥಿತಿ ಗ್ರಾಮದಲ್ಲಿ ನಿರ್ಮಾಣ ವಾಗಿದೆ. ಸರ್ಕಾರದ ನಿರ್ಧಾರ ಖಂಡಿಸಿ ಗ್ರಾಮಸ್ಥರು ಕಳೆದ 4 ದಿನಗಳ ಹಿಂದೆ ಗ್ರಾಮವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ಆದರೆ ಅಂದು ಗ್ರಾಮಸ್ಥರ ಅಳಲು ಕೇಳಲು ಬಾರದ ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಘಟನೆ ನಡೆದು ನಾಲ್ಕು ದಿನಗಳ ಬಳಿಕ ಕಂಕಣವಾಡಿ ಗ್ರಾಮಕ್ಕೆ ಬಂದಿದ್ದಾರೆ.
Advertisement
ಶಾಸಕ ಐಹೊಳೆ ಗ್ರಾಮಸ್ಥರಿರುವಲ್ಲಿಗೆ ಹೋಗುವುದನ್ನು ತಮ್ಮ ಬೆಂಬಲಿಗರ ಮನೆಗೆ ತೆರಳಿದ್ದಾರೆ. ಅಲ್ಲಿಂದಲೇ ಯಾರಿಗೆ ಸಮಸ್ಯೆ ಇದೆಯೋ ಅವರನ್ನು ಇಲ್ಲಿಗೇ ಕರೆಸಿ ಎಂದಿದ್ದಾರೆ. ಶಾಸಕರ ದರ್ಪದ ಮಾತಿಗೆ ಗರಂ ಆದ ಸ್ಥಳೀಯರು ಶಾಸಕ ಐಹೊಳೆ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ನಿಪ್ಪಾಣಿ ಮುಧೋಳ ರಾಜ್ಯ ಹೆದ್ದಾರಿ ತಡೆದು ಶಾಸಕರ ವಿರುದ್ಧ ಘೋಷಣೆ ಕೂಗುತ್ತಿದ್ದಂತೆ ಬೆಂಬಲಿಗನ ಮನೆಯಿಂದ ಶಾಸಕ ಐಹೊಳೆ ಕಾಲ್ಕಿತ್ತು ಜನರ ಬಳಿ ಬಂದಿದ್ದಾರೆ.
ಶಾಸಕರು ಆಗಮಿಸುತ್ತಿದ್ದಂತೆ ಜನರು ಮತ್ತು ಶಾಸಕ ದುರ್ಯೋಧನ ಐಹೊಳೆ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಜನ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರ ಆಕ್ರೋಶವನ್ನು ನೋಡಿ ಪೊಲೀಸರ ಸಹಾಯದಿಂದ ಶಾಸಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ.