ಕಲಬುರಗಿ: ಮೃತಪಟ್ಟ ಕೂಲಿ ಕಾರ್ಮಿಕ ಮಹಿಳೆಯ ಮೃತದೇಹವನ್ನು ಬೆಂಗಳೂರಿನಿಂದ ಕಲಬುರಗಿಗೆ ಸಾಗಿಸಲು ಹಾಗೂ ಮೃತರ ಬಂಧುಗಳ ಪ್ರಯಾಣಕ್ಕೆ ಪೊಲೀಸ್ ಇಲಾಖೆಯ ಅನುಮತಿ ಕೊಡಿಸುವ ಮೂಲಕ ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಅವರು ಮಾನವೀಯತೆ ಮೆರೆದಿದ್ದಾರೆ.
Advertisement
ಗುರುವಾರ ಬೆಳಗ್ಗೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ವಾಸವಾಗಿದ್ದ 56 ವರ್ಷದ ದ್ರೌಪದಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಕಲಬುರಗಿಯ ಬಸವನಗರಕ್ಕೆ ಮೃತದೇಹ ಸಾಗಿಸಲು ಬೆಳಗ್ಗೆಯಿಂದ ಅನುಮತಿಗಾಗಿ ಅವರ ಸಂಬಂಧಿಕರು ಕಸರತ್ತು ನಡೆಸಿದ್ದರು. ಈ ಸಂದರ್ಭದಲ್ಲಿ ಸಂಸದ ಜಾಧವ್ ಅವರಿಗೆ ವಿಷಯ ತಿಳಿದು ಸಂಜೆ 6 ಗಂಟೆಗೆ ಸ್ಥಳಕ್ಕೆ ತೆರಳಿ, ಬೆಂಗಳೂರಿನ ಈಶಾನ್ಯ ವಲಯ ಡೆಪ್ಯೂಟಿ ಪೊಲೀಸ್ ಕಮೀಷನರ್ ಅವರಿಂದ ಮೃತದೇಹ ಸಾಗಿಸಲು ಅಂಬ್ಯುಲೆನ್ಸ್ ನಲ್ಲಿ ಸಂಬಂಧಿಕರಿಗೆ ಪ್ರಯಾಣಿಸಲು ಅನುಮತಿ ಕೊಡಿಸಿದ್ದಾರೆ. ಮೃತರ ಮಗ ಮಿಲಿಂದು, ಪುತ್ರಿ ಶೋಭಾ ಹಾಗೂ ಅಳಿಯ ಗಣೇಶ್ ಅವರಿಗೆ ಅಂಬ್ಯುಲೆನ್ಸ್ ಜೊತೆ ತೆರಳಲು ಅನುಮತಿ ದೊರೆತಿದೆ. ಅಂಬ್ಯುಲೆನ್ಸ್ ಬೆಂಗಳೂರಿಂದ ಹೊರಟಿದ್ದು, ಶುಕ್ರವಾರ ಬೆಳಗ್ಗೆ ಕಲಬುರಗಿ ತಲುಪಲಿದೆ.
Advertisement
Advertisement
ಅಂಬ್ಯುಲೆನ್ಸ್ ಬಾಡಿಗೆ ಪಾವತಿ: ಮೊದಲೇ ಲಾಕ್ಡೌನ್ ನಿಂದ ಸಂಕಷ್ಟಕ್ಕೀಡಾಗಿದ್ದ ಕಾರ್ಮಿಕರ ಪರಿಸ್ಥಿತಿಯನ್ನು ಅರಿತ ಸಂಸದ ಉಮೇಶ್ ಜಾಧವ್ ಅವರು ಅಂಬ್ಯುಲೆನ್ಸ್ ಬಾಡಿಗೆ ವೆಚ್ಚವನ್ನು ಭರಿಸಿ, ಮೃತದೇಹ ಹಾಗೂ ಸಂಬಂಧಿಕರನ್ನು ಕಲಬುರಗಿ ಕಳುಹಿಸಲು ನೆರವಾಗಿದ್ದಾರೆ.
Advertisement
ಕೃತಜ್ಞತೆ ಸಲ್ಲಿಕೆ: ಪ್ರಸಕ್ತ ಕಷ್ಟದಲ್ಲಿದ್ದ ಸಂದರ್ಭದಲ್ಲಿ ನೆರವಾಗಿದ್ದಕ್ಕೆ ಮೃತರ ಸಂಬಂಧಿಕರು ಕೃತಜ್ಞತೆ ಸಲ್ಲಿಸಿದ್ದು, ಸಕಾಲಕ್ಕೆ ಆಗಮಿಸಿ ಅಂತ್ಯಸಂಸ್ಕಾರ ಮಾಡಲು ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇವರ ಋಣ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.