ಬೆಂಗಳೂರು: ಎಲ್ಲದ್ದಕ್ಕೂ 7ನೇ ತಾರೀಖಿನವರೆಗೆ ಕಾಯಿರಿ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಸರ್ಕಾರ ಲಾಕ್ಡೌನ್ ಮಾಡುತ್ತಾ ಎಂಬ ಪ್ರಶ್ನೆ ಎದ್ದರೂ ಲಾಕ್ಡೌನ್ ಬದಲು ಹಾಫ್ ಲಾಕ್ಡೌನ್ ಮಾಡುವ ಸಾಧ್ಯತೆಯಿದೆ.
ಹೌದು. 7ನೇ ತಾರೀಖಿನನವರೇ ಕಾಯಿರಿ. ನಂತರ ಮುಖ್ಯಮಂತ್ರಿಗಳು ಹಲವಾರು ಬದಲಾವಣೆಗಳನ್ನು ತೆಗೆದುಕೊಳ್ಳಲಿದ್ದಾರೆ. 7ರ ನಂತರ ಮತ್ತಷ್ಟು ಕಠಿಣ ಕ್ರಮಗಳನ್ನು ಪ್ರಕಟಿಸುತ್ತೇವೆ ಎಂಬುದಾಗಿ ಆರ್.ಅಶೋಕ್ ತಿಳಿಸಿದ ಬೆನ್ನಲ್ಲೇ ಮತ್ತೆ ಲಾಕ್ಡೌನ್ ಕುರಿತ ಚರ್ಚೆ ಆರಂಭವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಪೂರ್ಣವಾಗಿ ಲಾಕ್ಡೌನ್ ಮಾಡುವುದು ಅನುಮಾನ ಎನ್ನಲಾಗುತ್ತಿದ್ದು ಸೀಮಿತವಾಗಿ ಲಾಕ್ಡೌನ್ ಮಾಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.
Advertisement
Advertisement
ಹಾಫ್ ಲಾಕ್ಡೌನ್ ಸಾಧ್ಯತೆ ಹೇಗಿರಬಹುದು?
ಶನಿವಾರ, ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಜನ ರಸ್ತೆಗೆ ಇಳಿಯುತ್ತಾರೆ. ಜನ ಸಂಚಾರವನ್ನು ಕಡಿಮೆ ಮಾಡಿದರೆ ಕೊರೊನಾ ಹರಡುವ ವೇಗ ಕಡಿಮೆ ಮಾಡಬಹುದು ಎಂದು ತಜ್ಞರು ಸಲಹೆ ನೀಡಿದ್ದರು. ಈಗಾಗಲೇ ಭಾನುವಾರ ಲಾಕ್ಡೌನ್ ನಿರ್ಧಾರ ಪ್ರಕಟವಾಗಿದೆ. ಈಗ ಶನಿವಾರವೂ ಲಾಕ್ಡೌನ್ ಮಾಡುವ ನಿರ್ಧಾರ ಪ್ರಟವಾಗುವ ಸಾಧ್ಯತೆಯಿದೆ.
Advertisement
ಬೆಂಗಳೂರಿಗೆ ಹೊಂದಿಕೊಂಡಿರುವ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ ರಸ್ತೆಗಳನ್ನು ಬಂದ್ ಮಾಡಿ. ಜಿಲ್ಲೆಗಳಿಂದ ಬೆಂಗಳೂರಿಗೆ ಉದ್ಯೋಗ, ಇನ್ನಿತರೆ ಕೆಲಸಕ್ಕೆ ಜನ ಜಾಸ್ತಿ ಬರುತ್ತಾರೆ. ಮೊದಲು ಬೆಂಗಳೂರಿನ ವಾಹನ ದಟ್ಟಣೆ ಜನ ದಟ್ಟಣೆ ಕಡಿಮೆ ಮಾಡಬೇಕು. ಇದು ತಕ್ಷಣ ಆಗಬೇಕು. ಬೆಂಗಳೂರಿಗೆ ಮೂರು ವಾರ ಹೊರ ಜಿಲ್ಲೆಯಿಂದ ಬರುವವರನ್ನು ಬಿಡಬೇಡಿ . ಅಂತರ್ ರಾಜ್ಯ ಓಡಾಟಕ್ಕೆ 3 ವಾರ ಕಡಿವಾಣ ಹಾಕಿದರೆ ಕೊರೊನಾ ಹರಡುವ ಪ್ರಮಾಣ ಕಡಿಮೆಯಾಗಬಹುದು ಎಂದು ತಜ್ಞರು ಸಿಎಂಗೆ ಸಲಹೆ ನೀಡಿದ್ದರು. ಈ ಸಲಹೆಯಂತೆ ಸರ್ಕಾರ ಅಂತರ್ ಜಿಲ್ಲಾ ವಾಹನ ಸಂಚಾರಕ್ಕೆ ನಿರ್ಬಂಧ ಹೇರುವ ಸಾಧ್ಯತೆ ಹೆಚ್ಚಿದೆ.
Advertisement
ಸುದ್ದಿಗೋಷ್ಠಿಯಲ್ಲಿ ಆರ್.ಅಶೋಕ್, ಪಾರ್ಕ್ಗಳಿಗೆ ಜನ ಜಾಸ್ತಿ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ವಾಕಿಂಗ್ ಮಾಡುವ ಜೊತೆ ಅಲ್ಲೇ ಕುಳಿತುಕೊಳ್ಳುತ್ತಾರೆ. ಹೀಗಾಗಿ ಪಾರ್ಕ್ಗಳನ್ನು ಬಂದ್ ಮಾಡಿ ಎಂಬ ಸಲಹೆ ಬಂದಿದೆ ಎಂದು ತಿಳಿಸಿದ್ದರು. ಹೀಗಾಗಿ ಜುಲೈ 7ರ ನಂತರ ಪಾರ್ಕ್ ಸೇರಿದಂತೆ ಹೆಚ್ಚು ಜನದಟ್ಟಣೆ ಸೇರುವ ಜಾಗಗಳನ್ನು ಬಂದ್ ಮಾಡುವ ಸಾಧ್ಯತೆಯಿದೆ.
ಜುಲೈ 7ರಿಂದ ಯಾಕೆ?
ಈಗಾಗಲೇ ಆರಂಭಗೊಂಡಿರುವ ಎಸ್ಎಸ್ಎಲ್ಸಿ ಪರೀಕ್ಷೆ ಜುಲೈ 3 ಶುಕ್ರವಾರಕ್ಕೆ ಕೊನೆಯಾಗಲಿದೆ. ಭಾನುವಾರ ಹೇಗೂ ಲಾಕ್ಡೌನ್ ಇದೆ. ಹೀಗಾಗಿ ಜುಲೈ 7 ಮಂಗಳವಾರಿಂದ ಬೆಂಗಳೂರಿನಲ್ಲಿ ಮಾತ್ರ ಹಾಫ್ ಲಾಕ್ಡೌನ್ ಜಾರಿ ಬಗ್ಗೆ ಚರ್ಚೆ ನಡೆಯುತ್ತಿದೆ.
ಲಾಕ್ಡೌನ್ ಯಾಕಿಲ್ಲ?
ಬೆಂಗಳೂರಿನಲ್ಲಿ ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ಪ್ರಕರಣ ವರದಿಯಾದರೆ ಲಾಕ್ಡೌನ್ ಮಾಡಿ ಎಂದು ತಜ್ಞರು ಸಲಹೆ ನೀಡಿದ್ದರು. ಈ ಸಲಹೆಗೆ ಪೂರ್ಣವಾಗಿ ಲಾಕ್ಡೌನ್ ಮಾಡಿದರೆ ಸರ್ಕಾರಕ್ಕೆ ಆದಾಯ ಬರುವುದು ನಿಂತು ಹೋಗುತ್ತದೆ. ಸರ್ಕಾರ ನಡೆಸುವುದೇ ಕಷ್ಟವಾಗಬಹುದು. ಯಾವುದೇ ಕಾರಣಕ್ಕೂ ಪೂರ್ಣವಾಗಿ ಲಾಕ್ಡೌನ್ ಮಾಡುವುದಿಲ್ಲ ಎಂದು ಸಿಎಂ ಬೆಂಗಳೂರಿನ ಶಾಸಕರ ಜೊತೆಗಿನ ಸಭೆಯನ್ನು ತಿಳಿಸಿದ್ದರು. ಈ ಕಾರಣಕ್ಕೆ ಸರ್ಕಾರ ಹಾಫ್ಲಾಕ್ಡೌನ್ ಮಾಡುವ ಸಾಧ್ಯತೆ ಹೆಚ್ಚಿದೆ.