– ಯಾವ ಅಪಾರ್ಟ್ಮೆಂಟ್ನಲ್ಲಿ ಏನಾಗುತ್ತೋ ಗೊತ್ತಾಗಲ್ಲ
ಬೆಳಗಾವಿ: ಬೆಂಗಳೂರಿನಲ್ಲಿ ಡ್ರಗ್ಸ್ ಪತ್ತೆಯಾಗಿದ್ದು ಕೇವಲ ಸ್ಯಾಂಪಲ್ ಅಷ್ಟೆ, ಜಾಲ ಇನ್ನೂ ದೊಡ್ಡದಿದೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರ ಗಮನಕ್ಕೆ ಬಂದ ತಕ್ಷಣ ರೇಡ್ ಮಾಡಿದ್ದಾರೆ. ಬೆಂಗಳೂರಿನಲ್ಲಿ 1.30 ಕೋಟಿ ಜನಸಂಖ್ಯೆ ಇದೆ. ಯಾವ ಏರಿಯಾ, ಅಪಾರ್ಟ್ಮೆಂಟ್ ನಲ್ಲಿ ಏನಾಗುತ್ತೆ ಗೊತ್ತಾಗಲ್ಲ. ಹೀಗಾಗಿ ಅದಕ್ಕೆ ಕಣ್ಗಾವಲು ಇಡಬೇಕು. ಇಂದು ನಡೆಯುತ್ತಿರುವ ಸಭೆಯಲ್ಲಿ ಇದನ್ನು ಹೈಲೇಟ್ ಮಾಡುತ್ತೇನೆ. ಇಂದು ಸಭೆಯಲ್ಲಿ ನೀಡುವ ನಿರ್ದೇಶನ ಇಡೀ ರಾಜ್ಯಕ್ಕೆ ರವಾನೆಯಾಗಬೇಕು ಎಂದು ಹೇಳಿದ್ದಾರೆ.
Advertisement
ಡ್ರಗ್ಸ್ ದಂಧೆ ತಡೆಯದಿದ್ದರೆ ಅಮಾಯಕರ ಬಲಿಯಾಗಿ, ಜೀವನ ಹಾಳಾಗುತ್ತೆ. ಶಾಲೆಗೆ ಹೋಗುವ ಮಕ್ಕಳು, ಅಮಾಯಕರ ಜೀವನ ಹಾಳಾಗುತ್ತೆ. ಆರೋಗ್ಯ, ಸಮಾಜದ ದೃಷ್ಟಿಯಲ್ಲಿ ಇಲಾಖೆ ಹೆಸರು ಹಾಳಾಗಬಾರದು. ಈ ನಿಟ್ಟಿನಲ್ಲಿ ಪೊಲೀಸ್ ಹಾಗೂ ಅಬಕಾರಿ ಇಲಾಖೆ ಒಟ್ಟಾಗಿ ಕಾರ್ಯಾಚರಣೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಬೆಂಗಳೂರಿನಲ್ಲಿ ಡ್ರಗ್ಸ್ ಅಡ್ಡೆಗಳ ಮೇಲೆ ದಾಳಿ ಮಾಡುವ ಮುನ್ಸೂಚನೆಯನ್ನು ಸಚಿವರು ಕೊಟ್ಟಿದ್ದಾರೆ.
Advertisement
Advertisement
ಡ್ರಗ್ಸ್ ಜಾಲದಲ್ಲಿ ಚಿತ್ರರಂಗ ಹಾಗೂ ರಾಜಕಾರಣಿಗಳ ಮಕ್ಕಳ ಹೆಸರು ಕೇಳಿ ಬರುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಅದರ ದರ ಹೆಚ್ಚಿರುವುದರಿಂದ ದುಡ್ಡು ಇದ್ದವರು ಬಲೆಗೆ ಬೀಳುತ್ತಾರೆ. ದುಡ್ಡಿದ್ದವರು, ಸ್ಥಿತಿವಂತರು ಡ್ರಗ್ಸ್ ಜಾಲದ ಬಲೆಗೆ ಬೀಳುತ್ತಿದ್ದಾರೆ. ಶಾಲಾ, ಕಾಲೇಜುಗಳ ಆರಂಭ ಬಳಿಕ ದಂಧೇಕೋರರ ಚಲನವಲನ ಪರಿಶೀಲಿಸುತ್ತೇವೆ. ಶಾಲಾ ಕಾಲೇಜುಗಳ ಕಾಂಪೌಂಡ್ಗಳ ಹಿಂದೆ ದಂಧೆ ನಡೆಯುತ್ತೆ ಎಂದು ಗೊತ್ತಾಗಿದೆ. ಮಫ್ತಿಯಲ್ಲಿ ಸಿಬ್ಬಂದಿ ಕಳುಹಿಸಿ ಪರೀಕ್ಷಿಸುತ್ತೇವೆ ಎಂದರು.
ಬೆಳಗಾವಿಯಲ್ಲಿ ಶೇ.50ರಷ್ಟು ಮದ್ಯದಂಗಡಿಗಳು ಮಾತ್ರ ತೆರೆದಿವೆ. ಆದರೂ ಕಲೆಕ್ಷನ್ ಚೆನ್ನಾಗಿದೆ. ಎಣ್ಣೆ ವಹಿವಾಟು ಚೆನ್ನಾಗಿ ಆಗುತ್ತಿದೆ ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ತಿಳಿಸಿದ್ದಾರೆ.