ಬೆಂಗಳೂರು: ಸರ್ಕಾರಕ್ಕೆ ಮತ್ತೊಂದು ಸವಾಲು ಎದುರಾಗಿದೆ. ಕುರುಬ ಸಮುದಾಯದ ಎಸ್ಟಿ ಮೀಸಲು ಹೋರಾಟ ಅಂತಿಮ ಹಂತಕ್ಕೆ ಬಂದಿದೆ. ಕಳೆದ 20 ದಿನಗಳಿಂದ ನಡೆದ ಪಾದಯಾತ್ರೆಯ ಅಂತಿಮ ಹಂತವಾಗಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶದ ಮೂಲಕ ರಾಜಕೀಯ ಸಂದೇಶ ರವಾನೆಗೂ ವೇದಿಕೆ ಸಿದ್ಧವಾಗಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಸಮಾವೇಶ ಕುರುಬ ಸಮುದಾಯದ ಹಕ್ಕೊತ್ತಾಯಕ್ಕೆ ಸಾಕ್ಷಿ ಆಗಲಿದೆ.
Advertisement
ಮೀಸಲಾತಿ ವಿಚಾರವಾಗಿ ಸರ್ಕಾರಕ್ಕೆ ದೊಡ್ಡ ತಲೆನೋವು ಶುರುವಾಗಿದೆ. ವೀರಶೈವ ಲಿಂಗಾಯತರ ಮೀಸಲಾತಿ ಹೋರಾಟದ ಜೊತೆ ಜೊತೆಗೆ ಎಸ್ಟಿ ಮೀಸಲಾತಿ ಸ್ಥಾನಮಾನಕ್ಕಾಗಿ ಆಗ್ರಹಿಸಿ ಕುರುಬ ಸಮುದಾಯ ಬೃಹತ್ ಸಮಾವೇಶ ನಡೆಸ್ತಿದೆ. ಬೆಂಗಳೂರು ಹೊರವಲಯ ನೆಲಮಂಗಲದ ಮಾದವಾರ ಬಳಿಯ ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಸಮಾವೇಶಕ್ಕೆ ಚಾಲನೆ ನೀಡಲಿದ್ದು, ಕನಕ ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ಈಶ್ವರಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದು, ಕುರುಬ ಸಮುದಾಯದ ಸಚಿವರು, ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಈ ಮೂಲಕ ಮೀಸಲಾತಿ ಹಕ್ಕೋತ್ತಾಯದ ಜೊತೆಗೆ ಕುರುಬ ಸಮುದಾಯದ ಬಲಪ್ರದರ್ಶನ ನಡೆಯಲಿದೆ.
Advertisement
Advertisement
ಬೆಂಗಳೂರಿನಲ್ಲಿ ನಡೆಯುವ ಕುರುಬರ ಸಮಾವೇಶ ಇತಿಹಾಸ ಪುಟದಲ್ಲಿ ಸೇರಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದ್ದು, ರಾಜ್ಯದ ಮೂಲೆಮೂಲೆಯಿಂದ ಕುರುಬ ಸಮಾಜದ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ.
Advertisement
ಕುರುಬ ಸಮಾವೇಶ ಸಮುದಾಯದ ಹಕ್ಕೊತ್ತಾಯವಾಗಿದ್ದರೂ, ತೆರೆಮರೆಯಲ್ಲಿ ಕುರುಬ ಸಮುದಾಯದ ನಾಯಕತ್ವಕ್ಕಾಗಿ ಈಶ್ವರಪ್ಪ ಹಾಗೂ ಸಿದ್ದರಾಮಯ್ಯ ನಡುವಿನ ಫೈಟ್ ಅಂತಲೆ ಬಿಂಬಿತವಾಗಿದೆ. ಎಸ್ಟಿ ಮೀಸಲಾತಿಗೆ ಸಹಮತ ಇದ್ದರು ಇದುವರೆಗೆ ಸಿದ್ದರಾಮಯ್ಯ ಎಲ್ಲೂ ಸಹ ಬಹಿರಂಗವಾಗಿ ಹೋರಾಟದಲ್ಲಿ ಭಾಗವಹಿಸಿಲ್ಲ. ಈಶ್ವರಪ್ಪರನ್ನ ಆರ್ಎಸ್ಎಸ್ ಮುಂದೆ ಬಿಟ್ಟು ತಮ್ಮ ಬಲ ತಗ್ಗಿಸುವ ಪ್ರಯತ್ನ ಮಾಡುತ್ತಿದೆ ಎಂದು ತಮ್ಮ ಅಸಮಧಾನವನ್ನು ಹೊರ ಹಾಕಿದ್ರು. ಅಲ್ಲದೆ ಹೋರಾಟದ ನೇತೃತ್ವ ವಹಿಸಿದ್ದ ಈಶ್ವರಪ್ಪಗೆ ತಮ್ಮದೇ ಸರ್ಕಾರದ ಮೂಲಕ ಕೇಂದ್ರಕ್ಕೆ ಶಿಫಾರಸ್ಸು ಮಾಡಿಸಬೇಕಾದ ಸವಾಲು ಎದುರಾಗಿದೆ.
ಇಬ್ಬರು ನಾಯಕರ ಜಿದ್ದಾಜಿದ್ದಿನ ಹೊರತಾಗಿಯು ಕುರುಬ ಸಮುದಾಯದ ಎಸ್ಟಿ ಹೋರಾಟ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಮಹತ್ವದ ಬೆಳವಣಿಗೆಗೆ ವೇದಿಕೆಯಾಗುವ ಸಾಧ್ಯತೆ ಇದೆ.