– ಐಷಾರಾಮಿ ಜೀವನ ನಡೆಸ್ತಿದ್ದ ಕಳ್ಳ ಅಂದರ್
ರಾಮನಗರ: ಕುಖ್ಯಾತ ಮನೆಗಳ್ಳನನ್ನ ಬಂಧಿಸಿ, ಬಂಧಿತನಿಂದ 25 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನ ವಶಪಡಿಸಿಕೊಳ್ಳುವಲ್ಲಿ ರಾಮನಗರ ಜಿಲ್ಲೆ ಮಾಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಉದಯ್‍ಕುಮಾರ್ ಅಲಿಯಾಸ್ ಅಶೋಕ ಬಂಧಿತ ಆರೋಪಿಯಾಗಿದ್ದು, ಈತ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದವನಾಗಿದ್ದಾನೆ. ಈ ಆರೋಪಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಮಾರು 18 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಬಂಧಿತನಿಂದ 560 ಗ್ರಾಂ ಚಿನ್ನಾಭರಣಗಳು, 3 ಕೆ.ಜಿ ಬೆಳ್ಳಿ ಸಾಮಾಗ್ರಿಗಳು, ಕೃತ್ಯಕ್ಕೆ ಬಳಸುತ್ತಿದ್ದ ಒಂದು ಕಾರು, ಎರಡು ದ್ವಿಚಕ್ರ ವಾಹನಗಳನ್ನ ವಶಪಡಿಸಿಕೊಳ್ಳಲಾಗಿದೆ.
Advertisement
Advertisement
ಬಂಧಿತ ಆರೋಪಿ ಮಾರ್ಚ್ ತಿಂಗಳಲ್ಲಿ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಹರ್ತಿ ಗ್ರಾಮದ ರೇಣುಕಮ್ಮ ಮನೆ ಒಡೆದು 1,20,000 ಬೆಲೆ ಬಾಳುವ ಚಿನ್ನಾಭರಣಗಳನ್ನ ಕಳವು ಮಾಡಿ ಪರಾರಿಯಾಗಿದ್ದ. ಈ ಸಂಬಂದ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಸಿಪಿಐ ಮಂಜುನಾಥ್ ಹಾಗೂ ಅವರ ತಂಡ ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಇನ್ನಷ್ಟು ಕಳ್ಳತನದ ಪ್ರಕರಣಗಳು ಹೊರ ಬಂದಿವೆ.
Advertisement
Advertisement
ಮಾಗಡಿ ಸರಹದ್ದಿನಲ್ಲಿ 2, ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ 15 ಮನೆ ಕಳ್ಳತನದ ಪ್ರಕರಣಗಳು ಹಾಗೂ ತುಮಕೂರು ಜಿಲ್ಲೆಯ 9 ಪ್ರಕರಣಗಳು ಬೆಳಕಿಗೆ ಬಂದಿವೆ. ಬಂಧಿತ ಆರೋಪಿ ಈ ಹಿಂದೆ ತುಮಕೂರು ಜಿಲ್ಲೆಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣದಲ್ಲಿ ಬಂಧನವಾಗಿ ಕಾರಗೃಹದಲ್ಲಿದ್ದು, 2019ರಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು ಹೊರ ಬಂದಿದ್ದನು.
ಜೈಲಿನಿಂದ ಹೊರ ಬಂದ ಮೇಲೂ ಈತ ತನ್ನ ಹಳೇ ಚಾಳಿಯನ್ನ ಬಿಟ್ಟಿರಲಿಲ್ಲ. ಈ ಆರೋಪಿ ಹಗಲು ಸಮಯದಲ್ಲೇ ಬೀಗ ಹಾಕಿದ ಮನೆಗಳನ್ನ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ. ಕಳ್ಳತನದಿಂದ ಬಂದ ಹಣದಲ್ಲಿ ಐಷರಾಮಿ ಜೀವನ ನಡೆಸುತ್ತಿದ್ದನು. ಇಂತಹ ಖತನಾರ್ಕ್ ಮನೆಗಳ್ಳನನ್ನ ಬಂಧಿಸಿದ ಮಾಗಡಿ ಪೊಲೀಸರಿಗೆ ಎಸ್‍ಪಿ ಅನೂಪ್ ಎ.ಶೆಟ್ಟಿ ಅಭಿನಂದಿಸಿದ್ದಾರೆ.