KarnatakaLatestMain PostUttara Kannada

ಬಿಡುವಿನ ವೇಳೆ ಗೋಕರ್ಣದಲ್ಲಿ ತರಕಾರಿ ಬೆಳೆದ ವಿದೇಶಿ ಜೋಡಿ

ಕಾರವಾರ: ಪ್ರವಾಸಕ್ಕೆ ಆಗಮಿಸಿದಾಗ ಲಾಕ್‍ಡೌನ್ ನಿಂದಾಗಿ ತಮ್ಮ ದೇಶಕ್ಕೆ ಮರಳಿ ತೆರಳಲಾಗದೇ ಗೋಕರ್ಣದಲ್ಲೇ ಉಳಿದುಕೊಂಡಿದ್ದ ಜೋಡಿ ಸಾವಯವ ಪದ್ಧತಿಯಿಂದ ಕೃಷಿ ಮಾಡಿ ತರಕಾರಿ ಬೆಳೆದು ಇತರರಿಗೆ ಮಾದರಿಯಾಗಿದೆ.

ಇಟಲಿಯ ಮೌರಿಯಾ ಹಾಗೂ ಪೊಲಾಂಡ್ ದೇಶದ ಜಾಸ್ಮಿನ್ ಜೋಡಿ ಲಾಕ್‍ಡೌನ್‍ನಲ್ಲಿ ಬಿಡುವಿನ ವೇಳೆ ತಾವು ಉಳಿದುಕೊಂಡಿರುವ ಗೋಕರ್ಣದ ರುದ್ರಪಾದದ ವಸತಿ ಗೃಹದ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ತರಕಾರಿ ಬೆಳೆದಿದ್ದು, ಇವರ ಆಸಕ್ತಿಗೆ ಸ್ಥಳೀಯರೇ ಬೆರಗಾಗಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲಿ ಈ ಜೋಡಿ ಅವರ ದೇಶಕ್ಕೆ ತೆರಳಬೇಕಿತ್ತು. ಆದರೆ ವಿಸಾ ಸಮಸ್ಯೆಯಿಂದ ಸಾಧ್ಯವಾಗಿರಲಿಲ್ಲ. ಹೀಗಾಗಿ ಸಮಯ ವ್ಯರ್ಥ ಮಾಡದೆ ತಾವು ಉಳಿದುಕೊಂಡಿರುವ ವಸತಿ ಗೃಹದ ಬಳಿಯ ಜಾಗದಲ್ಲಿ ಮಾಲೀಕರಿಗೆ ವಿನಂತಿಸಿ ಸಾವಯವ ಪದ್ಧತಿಯಿಂದ ತರಕಾರಿ ಬೆಳೆದಿದ್ದಾರೆ.

ಇಟಲಿಯ ಪ್ರವಾಸಿಗ ಮೌರಿಯಾ ಕಳೆದ ಆರು ವರ್ಷಗಳಿಂದ ಗೋಕರ್ಣಕ್ಕೆ ಬರುತ್ತಿದ್ದಾರೆ. ಅದೇ ರೀತಿ ಕಳೆದ ವರ್ಷ ಬಂದಿದ್ದು, ಮೂರು ತಿಂಗಳು ವಸತಿ ಹೂಡಿದ್ದರು. ಇನ್ನೇನು ತಮ್ಮ ದೇಶಕ್ಕೆ ಹೊರಡಬೇಕಿದ್ದ ಇವರನ್ನು ಲಾಕ್‍ಡೌನ ತಡೆದಿತ್ತು. ಲಾಕ್‍ಡೌನ್ ಅವಧಿಯ ನಂತರ ಹಲವು ವಿದೇಶಿ ಪ್ರವಾಸಿಗರು ಇಲ್ಲಿನ ವಿವಿಧ ಇಲಾಖೆಗಳ ಸಹಾಯದಿಂದ ಸ್ವದೇಶಕ್ಕೆ ತೆರಳಿದ್ದರು. ಆದರೆ ಇವರು ತಾಂತ್ರಿಕ ತೊಂದರೆಯಿಂದ ಗೋಕರ್ಣದಲ್ಲೇ ಉಳಿಯುವ ಪರಿಸ್ಥಿತಿ ಬಂದಿತ್ತು.

ಇಲ್ಲಿ ಉಳಿದು ಕೇವಲ ತಿಂಡಿ, ಊಟ ಮಾಡಿದರೆ ಏನು ಪ್ರಯೋಜನ ಎಂದು ಯೋಚಿಸಿ, ಈ ಭಾಗದಲ್ಲಿ ತರಕಾರಿ ಬೆಳೆಯ ಮಾಸ ಪ್ರಾರಂಭವಾಗಿದ್ದು, ಅದರಂತೆ ತರಕಾರಿ ಬೆಳೆದರೆ ಹೇಗೆ ಎಂದು ಯೋಚಿಸಿದ್ದಾರೆ. ತಾವು ಉಳಿದುಕೊಂಡಿದ್ದ ಮನೆಯ ಪಕ್ಕದ ಚಿಕ್ಕ ಜಾಗದಲ್ಲಿ ವಿವಿಧ ಜಾತಿಯ ತರಕಾರಿ ಬೆಳಯಲು ಪ್ರಾರಂಭಿಸಿದ್ದು, ಸ್ವತಃ ಓಳಿ ಕಡಿದು ಬೀಜ ಬಿತ್ತಿ ವಿವಿಧ ರೀತಿಯ ತರಕಾರಿ ಬೆಳೆದಿದ್ದು ಇನ್ನೆರಡು ತಿಂಗಳಲ್ಲಿ ಫಸಲು ಬರಲಿದೆ.

ಟೊಮೆಟೊ, ಪಾಲಕ್ ಸೊಪ್ಪು, ಹರಿಗೆ ಮೆಣಸು ಸೇರಿದಂತೆ ವಿವಿಧ ಜಾತಿಯ ತರಕಾರಿಗಳನ್ನು ತನ್ನ ಗೆಳತಿಯ ಸಹಾಯದಿಂದ ಬೆಳೆದಿದ್ದಾರೆ. ಈ ಕುರಿತು ಮಾತನಾಡಿರುವ ಮೌರಿಯಾ, ವೃತ್ತಿಯಲ್ಲಿ ಶಿಕ್ಷಕನಾಗಿದ್ದು, ಹವ್ಯಾಸವಾಗಿ ಕೃಷಿ ಚಟುವಟಿಕೆಯನ್ನು ನನ್ನ ದೇಶದಲ್ಲಿ ಮಾಡುತ್ತಿದ್ದೆ. ಈ ವರ್ಷ ನಿಗದಿತ ಸಮಯಕ್ಕೆ ಸ್ವದೇಶಕ್ಕೆ ತೆರಳಾಗದ ಕಾರಣ ಈ ಕಾರ್ಯದಲ್ಲಿ ನಿರತನಾಗಿದ್ದೇನೆ. ಸ್ವದೇಶಕ್ಕೆ ತೆರಳಲಾಗದ ಬಗ್ಗೆ ಬೇಸರವಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿ, ತುಂಬಾ ನೋವಿದೆ. ತಿಂಗಳಿಗೊಮ್ಮೆ ವೀಸಾ ಮುಂದುವರಿಸಬೇಕು, ಪೊಲೀಸರು ವಿಚಾರಿಸುತ್ತಾರೆ. ಆತಂಕವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದೆಲ್ಲವನ್ನು ಮರೆಯಲು ಈ ಕೆಲಸ ಮಾಡುತ್ತಿದ್ದು, ಇಲ್ಲಿ ಬೆಳೆಯುವ ಬೆಳೆಗೆ ಸಾವಯವ ಗೊಬ್ಬರವನ್ನೇ ಬಳೆಸುತ್ತಿದ್ದೇನೆ. ನಮ್ಮ ಮನೆಯಲ್ಲಿ ಬಳಸಿದ ವಸ್ತುಗಳಿಂದ ಉಳಿದ ಹಸಿಕಸವನ್ನು ಒಂದೆಡೆ ಸೇರಿಸಿ ಗೊಬ್ಬರ ತಯಾರಿಸಿ ಗಿಡಗಳಿಗೆ ಹಾಕಿ ಬೆಳೆಸಿದ್ದೇನೆ ಎಂದು ತಿಳಿಸಿದರು.

ಗೆಳತಿಯ ಸಾಥ್!
ಇಟಲಿಯ ಈ ಪ್ರಜೆಯೊಂದಿಗೆ ಪೊಲೆಂಡ್ ದೇಶದ ಜಾಸ್ಮಿನ್ ಇವರ ಕಾಯಕಕ್ಕೆ ಸಾಥ್ ನೀಡಿದ್ದಾರೆ. ತಾವು ನೆಟ್ಟ ತರಕಾರಿ ಗಿಡಗಳಿಗೆ ನೀರುಣಿಸುವುದು, ಗೊಬ್ಬರ ಹಾಕುವುದು ಸೇರಿದಂತೆ ವಿವಿಧ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಇವರು, ವೃತ್ತಿಯಲ್ಲಿ ಫೀಜೀಯೋಥೆರಿಪಿ ಮತ್ತು ಯೋಗ ಶಿಕ್ಷಕಿಯಾಗಿದ್ದಾರೆ.

ಕೃಷಿಗಾಗಿ ಹವಾಮಾನದ ವೇಳಾಪಟ್ಟಿ!
ಕಾಲ ಕಾಲಕ್ಕೆ ನಕ್ಷತ್ರ, ಗೃಹಗಳು, ಚಂದ್ರ ಯಾವ ರೀತಿಯಲ್ಲಿ ಬದಲಾಗುತ್ತಾನೆ ಆ ವೇಳೆಯಲ್ಲಿನ ನಮ್ಮ ಹವಾಮಾನದ ಕುರಿತು ಸಚಿತ್ರವಾಗಿ ವೇಳಾ ಪಟ್ಟಿಯನ್ನು ಈ ಜೋಡಿ ತಯಾರಿಸಿಕೊಂಡಿದೆ. ವರ್ಷದಲ್ಲಿನ ಬದಲಾವಣೆಗಳ ಸಂಪೂರ್ಣ ಮಾಹಿತಿ ಇದರಲ್ಲಿದ್ದು, ಹವಮಾನ ಬದಲಾವಣೆಗೆ ಯಾವ ತರಕಾರಿ ಬೆಳೆಯಬೇಕು ಎಂಬ ಮಾರ್ಗವನ್ನು ಅನುಸರಿಸಿ ಬೆಳೆಯುತಿದ್ದಾರೆ.

ಭಾರತ ಅಚ್ಚುಮೆಚ್ಚಿನ ದೇಶ, ಗೋಕರ್ಣವೆಂದರೆ ಪ್ರಾಣ: ಹಲವು ವರ್ಷಗಳಿಂದ ಭಾರತದ ವಿವಿಧ ಪೌರಾಣಿಕ, ಪ್ರವಾಸಿ, ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇನೆ. ಉತ್ತರ, ದಕ್ಷಿಣ ಭಾತದ ಹಲವೆಡೆ ಭೇಟಿ ನೀಡಿದ್ದು, ಇಲ್ಲಿನ ಆಚಾರ, ವಿಚಾರ, ಸಂಸ್ಕೃತಿ ನಮ್ಮ ಜೀವನಕ್ಕೆ ಮಾದರಿಯಾಗಿದೆ. ಇದು ನನ್ನ ನೆಚ್ಚಿನ ದೇಶ. ಪುರಾಣ ಪ್ರಸಿದ್ಧ ಕ್ಷೇತ್ರ, ಸುಂದರ ಕಡಲತೀರ ಆತ್ಮೀಯತೆ ಸ್ಥಳೀಯ ಜನ ಗೋಕರ್ಣ ನನ್ನ ಪ್ರಾಣವಿದ್ದಂತೆ ಎಂದು ಈ ಇಬ್ಬರು ಪ್ರವಾಸಿಗರು ಹೆಮ್ಮೆಯಿಂದ ನುಡಿಯುತ್ತಾರೆ.

ವಾರಾಂತ್ಯದ ರಜೆ ಬಂತೆಂದರೆ ಗೋಕರ್ಣದ ಕಡಲತೀರಗಳಿಗೆ ಮುಗಿಬೀಳುವ ಯುವ ಸಮೂಹದ ಪ್ರವಾಸಿಗರು, ಮೋಜು ಮಸ್ತಿ ಮಾಡುತ್ತ ಕುಡಿದು ತೂರಾಡುತ್ತಾರೆ. ಪುಣ್ಯ ಕ್ಷೇತ್ರಕ್ಕೆ ವಿದೇಶಿಗರು ಬಂದು ಅವರ ಸಂಸ್ಕೃತಿಯನ್ನು ಬಿಟ್ಟು, ನಮ್ಮ ಸಂಸ್ಕೃತಿಯನ್ನು ಅದೆಷ್ಟೂ ಜನ ಅಳವಡಿಸಿಕೊಳ್ಳುತ್ತಿದ್ದು, ಇದು ಇಂದಿನ ಯುವ ಪೀಳಿಗೆಗೆ ಮಾದರಿಯಾಗಬೇಕಿದೆ.

ಸದ್ಯ ಈ ಜೋಡಿ ಬರಡು ಭೂಮಿಯಲ್ಲಿ ಸಾವಯವ ಕೃಷಿಯ ಮೂಲಕ ತರಕಾರಿ ಬೆಳೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದೆ. ಕೆಲವೇ ದಿನಗಳಲ್ಲಿ ಫಸಲು ಕೈಗೆ ಬರಲಿದೆ. ಈ ಫಸಲನ್ನು ತಮ್ಮ ಉಪಯೋಗಕ್ಕೆ ಬಳಸಿಕೊಳ್ಳುವ ಜೊತೆಗೆ ಬೆಳೆ ಬೆಳೆಯಲು ಭೂಮಿ ನೀಡಿದ ಮಾಲೀಕನ ಋಣ ತೀರಿಸುವ ಔದಾರ್ಯ ತೋರಿದ್ದಾರೆ.

Leave a Reply

Your email address will not be published.

Back to top button