ಬಿಜೆಪಿ ಬಗ್ಗೆ ಎಚ್‍ಡಿಕೆ ಸಾಫ್ಟ್ ಕಾರ್ನರ್ ಹೊಂದಿರುವುದು ಸತ್ಯ: ಬಸವರಾಜ್ ಹೊರಟ್ಟಿ

– ಬಿಜೆಪಿಗೆ ಬೆಂಬಲ ನೀಡುವ ಕುರಿತು ಸಭೆ ಕರೆದು ಸ್ಪಷ್ಟಪಡಿಸಲಿ

ಹುಬ್ಬಳ್ಳಿ: ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೇಳಿಕೆ ಕುರಿತು ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಕುರಿತು ಸಾಫ್ಟ್ ಕಾರ್ನರ್ ಹೊಂದಿರುವುದು ಸತ್ಯ. ಈ ಕುರಿತು ಕುಮಾರಸ್ವಾಮಿ ಹಾಗೂ ಎಚ್.ಡಿ.ದೇವೇಗೌಡರು ಸಭೆ ಕರೆದು ಸ್ಪಷ್ಟಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.

- Advertisement -

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಸವರಾಜ್ ಹೊರಟ್ಟಿ, ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರ ಮೇಲೆ ಸಾಫ್ಟ್ ಕಾರ್ನರ್ ಹೊಂದಿರುವುದು ಸತ್ಯ. ಆದರೆ ಅವರು ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ ಎಂಬುದಕ್ಕೆ ಅವರೇ ಸ್ಪಷ್ಟನೆ ನೀಡಬೇಕು. ಕುಮಾರಸ್ವಾಮಿಯವರ ಮೇಲೆ ಬಂದಿರುವ ಈ ಆರೋಪಕ್ಕೆ ಅವರೇ ಪ್ರತಿಕ್ರಿಯೆ ನೀಡಲಿ. ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ. ಹೀಗಾಗಿ ಕುಮಾರಸ್ವಾಮಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಬರುವಂತೆ ಎಚ್‍ಡಿಕೆಗೆ ನೇರ ಆಹ್ವಾನ ನೀಡಿದ ಸಿಪಿ ಯೋಗೇಶ್ವರ್

ಬಿಜೆಪಿ ಸರ್ಕಾರ ಬಂದ ಮೇಲೆ ನೆರೆ ಪ್ರವಾಹ, ಕೋವಿಡ್ ಹಾವಳಿ ಹೆಚ್ಚಾಗಿತ್ತು. ಹೀಗಾಗಿ ಕುಮಾರಸ್ವಾಮಿ ಬಿಜೆಪಿ ಸರ್ಕಾರ ಮೇಲೆ ಸಾಪ್ಟ್ ಕಾರ್ನರ್ ಹೊಂದಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ. ಕುಮಾರಸ್ವಾಮಿ ಹಾಗೂ ದೇವೇಗೌಡರು ಸಭೆ ಕರೆಯಲಿ. ಸಭೆಯ ಮೂಲಕ ಕುಮಾರಸ್ವಾಮಿ ತಮ್ಮ ಸ್ಪಷ್ಟ ನಿಲುವು ತಿಳಿಸಲಿ. ಸಿ.ಪಿ.ಯೋಗೇಶ್ವರ್ ಸದುದ್ದೇಶದಿಂದ ಬಿಜೆಪಿಗೆ ಆಹ್ವಾನ ನೀಡರಬಹುದು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇದ್ದಾಗ ಕಾಂಗ್ರೆಸ್ ನಮ್ಮ ಸರ್ಕಾರ ಕೆಡವಿತು. ಅದು ಸತ್ಯ ಸಹ, ಹೀಗಾಗಿ ಕುಮಾರಸ್ವಾಮಿ ಸಾಫ್ಟ್ ಕಾರ್ನರ್ ಹೊಂದಿರಬಹುದು ಎಂದು ತಿಳಿಸಿದ್ದಾರೆ.

- Advertisement -

ಹೊಸ ಸರ್ಕಾರ ಬಂದ ಮೇಲೆ ಪ್ರವಾಹ, ಕೊರೊನಾ ಬಂತು ಹೀಗಾಗಿ ವಿನಾಕಾರಣ ತೊಂದರೆ ಕೊಡಬಾರದು ಎಂಬ ಉದ್ದೇಶದಿಂದ ಸಾಫ್ಟ್ ಕಾರ್ನರ್ ಹೊಂದಿದ್ದೇವೆ. ಒಂದೊಂದು ಸಲ ಪ್ರೀತಿ ಜಾಸ್ತಿಯಾಗುತ್ತೆ. ಅದೇ ರೀತಿ ಇದೀಗ ಬಿಜೆಪಿ ಮೇಲೆ ಸ್ವಲ್ಪ ಲವ್ ಆಗಿದೆ. ರಾಜಕಾರಣದಲ್ಲಿ ಯಾವುದನ್ನೂ ಊಹಿಸಲು ಸಾಧ್ಯವಿಲ್ಲ. ಇಂದಿನ ರಾಜಕೀಯ ಸನ್ನಿವೇಶದಲ್ಲಿ ತತ್ವ ಸಿದ್ಧಾಂತಗಳಿಲ್ಲ. ಪರಿಸ್ಥಿತಿ ಹೇಗಿರುತ್ತದೆಯೋ ಆ ರೀತಿ ಬದಲಾಗುತ್ತಾರೆ ಹೊರಟ್ಟಿ ಹೇಳಿದ್ದಾರೆ.

- Advertisement -