ಹಾಸನ: ಹಾಸನ ಮತ್ತು ಅರಸೀಕೆರೆ ಎರಡೂ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಜೆಡಿಎಸ್ ಮತ್ತು ಬಿಜೆಪಿ ನಡುವೆ ಗುದ್ದಾಟಕ್ಕೆ ಕಾರಣವಾಗಿದ್ದು, ಇಂದು ನಿಗದಿಯಾಗಿದ್ದ ಅರಸೀಕೆರೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯನ್ನು ಕೋರಂ ಕೊರತೆಯಿಂದ ಮುಂದೂಡಲಾಗಿದೆ.
ಹಾಸನ ಮತ್ತು ಅರಸೀಕೆರೆ ಎರಡೂ ನಗರಸಭೆಯ ಅಧ್ಯಕ್ಷ ಸ್ಥಾನ ಎಸ್‍ಟಿಗೆ ಮೀಸಲಾಗಿದ್ದು, ಬಿಜೆಪಿಯಿಂದ ಮಾತ್ರ ಎಸ್‍ಟಿ ಅಭ್ಯರ್ಥಿ ಜಯಗಳಿಸಿದ್ದಾರೆ. ಹೀಗಾಗಿ ಜೆಡಿಎಸ್ ಹೆಚ್ಚು ಸ್ಥಾನ ಗೆದ್ದಿದ್ದರೂ ಎರಡೂ ನಗರಸಭೆಯ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲಾಗಲಿದೆ. ಹೀಗಾಗಿ ಮೀಸಲಾತಿ ಕಾನೂನು ಬಾಹಿರ ಎಂದು ಜೆಡಿಎಸ್ ನ್ಯಾಯಾಲಯದ ಮೆಟ್ಟಿಲೇರಿದ್ದು ಚುನಾವಣೆ ನಡೆದರೂ ಮುಂದಿನ ಆದೇಶ ಬರುವವರೆಗೂ ಫಲಿತಾಂಶ ಪ್ರಕಟಿಸದಂತೆ ಕೋರ್ಟ್ ಆದೇಶ ನೀಡಿದೆ.
Advertisement
Advertisement
ಈ ನಡುವೆ ನಿನ್ನೆ ಹಾಸನ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಿಗದಿಯಾಗಿತ್ತು. ಆದರೆ ಉಪಾಧ್ಯಕ್ಷ ಚುನಾವಣೆ ಬಗ್ಗೆ ನಮಗೆ ಮಾಹಿತಿಯೇ ಇರಲಿಲ್ಲ. ಹೀಗಾಗಿ ನಾವು ನಾಮಪತ್ರ ಸಲ್ಲಿಸಿಲ್ಲ. ಬೇರೆ ದಿನ ಮತ್ತೆ ಉಪಾಧ್ಯಕ್ಷ ಚುನಾವಣೆ ನಡೆಸಬೇಕು ಎಂದು ಜೆಡಿಎಸ್ ಪಟ್ಟು ಹಿಡಿದು ಇಂದು ಹಾಸನ ಉಪವಿಭಾಗಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಆದರೆ ಒಮ್ಮೆ ನಿಗದಿಯಾದ ಚುನಾವಣೆಯನ್ನು ಮತ್ತೊಮ್ಮೆ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಕಾನೂನು ಹೋರಾಟಕ್ಕೆ ಮುಂದಾಗಿದೆ.
Advertisement
Advertisement
ಇತ್ತ ಇಂದು ನಡೆಯಬೇಕಿದ್ದ ಅರಸೀಕೆರೆ ನಗರಸಭೆ ಚುನಾವಣೆಯಲ್ಲೂ ಹೈಡ್ರಾಮಾ ನಡೆದಿದ್ದು, ಕೋರಂ ಕೊರತೆಯಿಂದ ಚುನಾವಣೆ ಸೋಮವಾರಕ್ಕೆ ಮುಂದೂಡಲ್ಪಟ್ಟಿದೆ. ಅರಸೀಕೆರೆ ನಗರಸಭೆಯಲ್ಲಿ ಜೆಡಿಎಸ್ ಬಹುಮತ ಪಡೆದಿದೆ. ಆದರೆ ಮೀಸಲಾತಿಯಿಂದಾಗಿ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲಾಗುವುದನ್ನು ವಿರೋಧಿಸಿ ಜೆಡಿಎಸ್ ಸದಸ್ಯರು ಇಂದು ಅರಸೀಕೆರೆ ನಗರಸಭೆ ಚುನಾವಣೆಗೆ ಸಾಮೂಹಿಕ ಗೈರಾಗಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಅರಸೀಕೆರೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.