– ಸಿಎಂ ಸ್ಥಾನಕ್ಕೆ ಮೂವರ ಹೆಸರನ್ನ ಸೂಚಿಸಿದ ವಿಶ್ವನಾಥ್
– ಯಡಿಯೂರಪ್ಪನವರ ರಾಜೀನಾಮೆ ನಿರ್ಧಾರ ಅನಿರೀಕ್ಷಿತವೇನಲ್ಲ
ಮೈಸೂರು: ಹೈಕಮಾಂಡ್ ಸೂಚಿಸಿದರೆ ಪದತ್ಯಾಗ ಮಾಡಲು ಸಿದ್ಧ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿರುವುದು ಸರಿ ಇದೆ. ಆದರೆ ಯಡಿಯೂರಪ್ಪನವರ ಬಳಿಕ ಉತ್ತರ ಕರ್ನಾಟಕದ ವೀರಶೈವ ನಾಯಕರೇ ಮುಖ್ಯಮಂತ್ರಿಯಾದರೆ ಸೂಕ್ತ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿಳಿಸಿದ್ದಾರೆ.
Advertisement
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇದೀಗ ವೀರಶೈವ ಸಮುದಾಯದ ಮುಖ್ಯಮಂತ್ರಿ ನಿರ್ಗಮಿಸುತ್ತಿರುವುದರಿಂದ ಮತ್ತೆ ಅದೇ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡುವುದು ಸೂಕ್ತ. ಅದರಲ್ಲೂ ಉತ್ತರ ಕರ್ನಾಟಕದವರಿಗೇ ನೀಡಬೇಕು. ಬಸವರಾಜ್ ಬೊಮ್ಮಾಯಿ, ಬಸನಗೌಡ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿ ಇಲ್ಲವೇ ವೀರಶೈವರಲ್ಲಿ ಯಾವದೇ ನಾಯಕರಿಗೆ ಸಿಎಂ ಸ್ಥಾನ ಕೊಟ್ಟರೂ ಸರಿಯಾಗುತ್ತದೆ ಎಂದರು.
Advertisement
ಇದು ಯಡಿಯೂರಪ್ಪನವರು ತೆಗೆದುಕೊಂಡಿರುವ ತೀರ್ಮಾನ, ರಾಜೀನಾಮೆ ಕುರಿತು ಸಿ.ಪಿ.ಯೋಗೇಶ್ವರ್ ಇಲ್ಲವೇ ಇನ್ನೊಬ್ಬರಾಗಲಿ ಕೇವಲ ಕಾಕತಾಳೀಯ ಮಾತ್ರ. ಇದು ಯಡಿಯೂರಪ್ಪನವರ ನಿರ್ಧಾರವೇ ಆಗಿದೆ. ಯೋಗೇಶ್ವರ್ ಸೇರಿದಂತೆ ಇನ್ಯಾರಿಗೇ ಆಗಲಿ ಯಡಿಯೂರಪ್ಪನವರನ್ನು ತೆಗೆಯುವ ಶಕ್ತಿ ಇಲ್ಲವೇ ಇಲ್ಲ ಎಂದು ಹೇಳಿದರು.
Advertisement
Advertisement
ಅನಿರೀಕ್ಷಿತವೇನಲ್ಲ, ನಿರೀಕ್ಷಿತ:
ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವರ ಕುರಿತು ಹೇಳಿಕೆ ನೀಡಿರುವುದು ಅನಿರೀಕ್ಷಿತವೇನಲ್ಲ, ನಿರೀಕ್ಷಿತವೇ. ಹೈ ಕಮಾಂಡ್ ಸೂಚನೆ ನೀಡಿದರೆ ನಾನು ಪದತ್ಯಾಗ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿರುವುದು ನಿಜ. ಬಿಜೆಪಿ ಹೈಕಮಾಂಡ್ ಆಧಾರಿತ ಪಕ್ಷ, ಅವರ ಮಾತುಗಳೇ ನಡೆಯುವುದು. ದೆಹಲಿ ಹೈಕಮಾಂಡ್ ಹೇಳಿದ್ದನ್ನು ನಾವು ಕೇಳಲೇಬೇಕು. ಇಂದಿನ ಪರಿಸ್ಥಿತಿಯಲ್ಲಿ ಬಿ.ಎಸ್.ಯಡಿಯೂರಪ್ಪನವರು ತೆಗೆದುಕೊಂಡಿರುವ ನಿರ್ಧಾರ ತುಂಬಾ ಸಮಂಜಸವಾಗಿದೆ. ಕೊರೊನಾ ಅಟ್ಟಹಾಸ, ಆರ್ಥಿಕ ಸಂಕಷ್ಟ, ಅತಿವೃಷ್ಟಿ ಸೇರಿದಂತೆ ನೂರಾರು ಸಂಕಷ್ಟಗಳು ಎದುರಾಗಿವೆ. ಇದೆಲ್ಲದರ ನಡುವೆ ಯಡಿಯೂರಪ್ಪನವರು ಯೋಚಿಸಿರುವುದು ಸರಿ ಇದೆ. ರಾಜ್ಯದ ಶಕ್ತಿ ಪೀಠ ಯಾಕೋ ಮುಸುಕಾಗುತ್ತಿದೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಇದನ್ನೂ ಅರ್ಥೈಸಿಕೊಂಡು ರಾಜ್ಯದ ಅಭಿವೃದ್ಧಿ, ಬಿಜೆಪಿ ಸಂಘಟನೆಯ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದು ಸಂತೋಷ ತಂದಿದೆ ಎಂದರು.
ಪರಿಸ್ಥಿತಿ ತುಂಬಾ ವಿಷಮವಾಗುತ್ತಿದೆ:
ಹೈಕಮಾಂಡ್ ಒತ್ತಡವೇನಿಲ್ಲ, ತುಂಬಾ ಸೂಕ್ಷ್ಮವಾಗಿ ನಿಭಾಯಿಸುತ್ತಿದೆ. 75 ವರ್ಷಗಳ ನಂತರ ಜವಾಬ್ದಾರಿ ಸ್ಥಾನದಲ್ಲಿ ಇರುವುದು ಬೇಡ ಎಂಬುದು ಪಕ್ಷದ ನಿಯಮ. ಅಡ್ವಾಣಿಯವರಿಗೂ ಇದೇ ರೀತಿ ಗೆರೆ ಹಾಕಿದ್ದರು. ಆದರೆ ರಾಜ್ಯದಲ್ಲಿ ಬಿಜೆಪಿ ಬೆಳೆಸಿದ ಕೀರ್ತಿ ಯಡಿಯೂರಪ್ಪನವರಿಗೆ ಇದೆ. ಇಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದಕ್ಕೆ ಕಾರಣ ಯಡಿಯೂರಪ್ಪನವರು. ಈ ಎಲ್ಲ ಸಂಶಗಳನ್ನು ಮನಗಂಡು 75 ವರ್ಷಗಳು ಆದರೂ ಪರವಾಗಿಲ್ಲ, ಸಿಎಂ ಆಗಿ ನೀವೇ ಮುಂದುವರಿಯಿರಿ ಎಂದು ಪಕ್ಷ ಹೇಳಿತು. ಆದರೆ ಈಗ ಪರಿಸ್ಥಿತಿ ತುಂಬಾ ವಿಷಮವಾಗುತ್ತಿದೆ. ಅವರ ವಯಸ್ಸು, ಆರೋಗ್ಯ, ಮನಸ್ಸಿನ ಸಂಘರ್ಷ ನಿಭಾಯಿಸುವ ಸ್ಪಿರಿಟ್ ಕಡಿಮೆಯಾಗಿದೆ ಎಂದು ತಮ್ಮ ಅನಿಸಿಕೆ ತಿಳಿಸಿದರು.
ನಾವೆಲ್ಲ ಪರಿಸ್ಥಿತಿಯ ಶಿಶುಗಳು, ಹೀಗಾಗಿ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂಬ ಸಂದೇಶವನ್ನು ಹೈಕಮಾಂಡ್ಗೆ ರವಾನಿಸಿದ್ದಾರೆ. ಎಲ್ಲ ನಾಯಕರಿಗೂ ತಮ್ಮ ತಪ್ಪುಗಳು ಕಾಣುತ್ತವೆ. ಆ ತಪ್ಪುಗಳನ್ನು ಒಪ್ಪಿಕೊಂಡು ಮುಂದುವರಿಯಬೇಕಿರುವುದು ತುಂಬಾ ಮುಖ್ಯ. ಈ ದೊಡ್ಡತನವನ್ನೇ ಯಡಿಯೂರಪ್ಪನವರು ಇಂದು ಪ್ರದರ್ಶಿಸುತ್ತಿದ್ದಾರೆ ಎಂದು ತಿಳಿಸಿದರು.
ಎಲ್ಲವನ್ನು ಎದುರಿಸುವ ನಾಯಕ ಬರಬೇಕು:
ಮುಖ್ಯಮಂತ್ರಿಗಳ ಜೊತೆಗೆ ಸಚಿವರೂ ಬದಲಾಗಬೇಕೆಂಬುದು ಹೊಸ ಮುಖ್ಯಮಂತ್ರಿ ಬಂದ ನಂತರದ ವಿಚಾರ. ಮುಂದೆ ಬರುವ ಮುಖ್ಯಮಂತ್ರಿ ಸರಿಯಾದ ಸಚಿವರನ್ನು ಆಯ್ಕೆ ಮಾಡಿಕೊಂಡು ಇಂದು ನಡೆಯುತ್ತಿರುವ ಯುದ್ಧವನ್ನು ಎದುರಿಸಬೇಕು. ಮಲ್ಲಯುದ್ಧಕ್ಕೆ ಯಾರನ್ನು ಬಿಡಬೇಕು, ಬಿಲ್ಲು, ಬಾಣ ಯಾರಿಗೆ ಕೊಡಬೇಕು, ಸೈನಿಕರನ್ನು ಯಾರು ನಿರ್ವಹಿಸಬೇಕು ಎಂಬುದನ್ನು ಕೃಡೀಕರಿಸಿ, ಎಲ್ಲವನ್ನು ಎದುರಿಸುವ ನಾಯಕ ಬರಬೇಕು ಎಂದು ತಿಳಿಸಿದರು.