LatestMain PostNational

ಬಾಹ್ಯಾಕಾಶಕ್ಕೆ ಮೋದಿ ಫೋಟೋ, ಭಗವದ್ಗೀತೆ – ಇಸ್ರೋ ರಾಕೆಟ್‌ ಮೂಲಕ ಉಪಗ್ರಹ ಉಡಾವಣೆ

– ಸ್ಪೇಸ್‌ ಕಿಡ್ಜ್‌ ಇಂಡಿಯಾ ಅಭಿವೃದ್ಧಿ ಪಡಿಸಿದ ಉಪಗ್ರಹ
– 25 ಸಾವಿರ ಜನರ ಹೆಸರು ಬಾಹ್ಯಾಕಾಶಕ್ಕೆ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ವರ್ಷ ತನ್ನ ಮೊದಲ ಉಡಾವಣೆಯನ್ನು ಫೆ.28ರಂದು ನಡೆಸಲಿದೆ.

ಪಿಎಸ್‌ಎಲ್‌ವಿ -51 ರಾಕೆಟ್‌ 20 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದ್ದು, ಈ ಪೈಕಿ ಒಂದು ಖಾಸಗಿ ಉಪಗ್ರಹದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವ ಚಿತ್ರ, ಪವಿತ್ರ ಗ್ರಂಥ ಭಗವದ್ಗೀತೆಯ ಪ್ರತಿ ಹಾಗೂ 25 ಸಾವಿರ ನಾಗರಿಕರ ಹೆಸರನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ.

ಭಾರತದ ಖಾಸಗಿ ಸಂಸ್ಥೆಗಳು ಅಭಿವೃದ್ಧಿಪಡಿಸಿದ ‘ಆನಂದ್’, ‘ಸತೀಶ್ ಧವನ್’ ಹಾಗೂ ‘ಯೂನಿಟಿಶಾಟ್’ ಉಪಗ್ರಹಗಳ ಜೊತೆ ಬ್ರೆಜಿಲ್ ದೇಶಕ್ಕೆ ಸೇರಿದ ಅಮೆಜೋನಿಯಾ-1 ಉಪಗ್ರಹವನ್ನು ಇಸ್ರೋ ರಾಕೆಟ್‌ ಕಕ್ಷೆಗೆ ಸೇರಿಸಲಿದೆ.

ಭಾರತೀಯ ಉಪಗ್ರಹಗಳಾದ ‘ಆನಂದ್’ ಅನ್ನು ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಸಂಸ್ಥೆ ‘ಪಿಕ್ಸೆಲ್’ ಅಭಿವೃದ್ದಿಪಡಿಸಿದೆ. ‘ಸತೀಶ್ ಧವನ್’ ಅನ್ನು ಚೆನ್ನೈ ಮೂಲದ ‘ಸ್ಪೇಸ್ ಕಿಡ್ಜ್‌ ಇಂಡಿಯಾ ಅನ್ನು ಜಿಟ್ ಶಾಟ್ (ಶ್ರೀಪೆರಂಬುದೂರ್), ಜಿಹೆಚ್ಆರ್ ಸಿ ಈ ಶಾಟ್ (ನಾಗ್ಪುರ), ಶ್ರೀ ಶಕ್ತಿ ಶಾಟ್ (ಕೊಯಮತ್ತೂರು) ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.

ಸ್ಪೇಸ್‌ಕಿಡ್ಜ್ ಇಂಡಿಯಾ ಭಾರತದ ಪ್ರಸಿದ್ಧ ಬಾಹ್ಯಕಾಶ ವಿಜ್ಞಾನಿ ಸತೀಶ್ ಧವನ್ ಅವರ ಹೆಸರಿನಲ್ಲಿ ʼಸತೀಶ್ ಧವನ್ʼ ಉಪಗ್ರಹವನ್ನು ಅಭಿವೃದ್ಧಿ ಪಡಿಸಿದೆ. ತನ್ನ ಮೊದಲ ಉಪಗ್ರಹ ಇದಾಗಿರುವ ಕಾರಣ ಇದರಲ್ಲಿ ಪ್ರಧಾನಿ ಮೋದಿಯವರ ಭಾವ ಚಿತ್ರವನ್ನು ಉಪಗ್ರಹದಲ್ಲಿ ಕಳುಹಿಸುವುದಾಗಿ ಸಂಸ್ಥೆಯ ಸಿಇಓ ಡಾ.ಶ್ರೀಮತಿ ಕೇಸನ್ ಹೇಳಿದ್ದಾರೆ. ಉಪಗ್ರಹದ ಪ್ಯಾನೆಲ್‌ಗೆ ಮೋದಿಯವರ ಫೋಟೋ ಇರಲಿದೆ. ಜೊತೆಗೆ ‘ಆತ್ಮನಿರ್ಭರ್ ಮಿಷನ್’ ವಾಕ್ಯಗಳ ಜೊತೆಗೆ ಧರ್ಮಗ್ರಂಥ ಭಗವದ್ಗೀತೆಯ ಪ್ರತಿ, 25000 ಮಂದಿಯ ಹೆಸರುಗಳನ್ನು ಕೊಂಡೊಯ್ಯಲಿದೆ ಎಂದು ಅವರು ವಿವರಿಸಿದ್ದಾರೆ.

ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ಹೆಸರುಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ನಾವು ಮನವಿ ಮಾಡಿದ್ದೆವು. ಒಂದು ವಾರದಲ್ಲಿ 25 ಸಾವಿರ ಹೆಸರುಗಳು ನೋಂದಣಿಯಾದವು. ಈ ಪೈಕಿ 1 ಸಾವಿರ ವಿದೇಶಿಯರು ನೊಂದಣಿ ಮಾಡಿದ್ದಾರೆ. ಚೆನ್ನೈನ ಒಂದು ಶಾಲೆಯ ತನ್ನ ಎಲ್ಲ ವಿದ್ಯಾರ್ಥಿಗಳ ಹೆಸರನ್ನು ಕಳುಹಿಸಿದೆ. ಈ ಹೆಸರುಗಳೊಂದಿಗೆ ನಾವು ಮೋದಿಯವರ ಫೋಟೋವನ್ನು ಕಳುಹಿಸುತ್ತಿದ್ದೇವೆ. ಕೆಲ ವಿದೇಶಿ ಪ್ರಯೋಗಗಳಲ್ಲಿ ಆಯಾ ದೇಶಗಳು ಬೈಬಲ್‌ನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ್ದವು. ಹಾಗಾಗಿ ನಮ್ಮ ದೇಶದ ಪವಿತ್ರ ಗ್ರಂಥ ಭಗವದ್ಗೀತೆಯನ್ನು ನಭಕ್ಕೆ ಕಳುಹಿಸಲು ನಾವು ಮುಂದಾಗಿದ್ದೇವೆ ಎಂದು ಡಾ. ಶ್ರೀಮತಿ ಮಾಹಿತಿ ನೀಡಿದ್ದಾರೆ.

ಪ್ಯಾನೆಲ್‌ ಕೆಳಗಡೆ ಇಸ್ರೋ ಅಧ್ಯಕ್ಷ ಶಿವನ್‌ ಮತ್ತು ವೈಜ್ಞಾನಿಕ ಕಾರ್ಯದರ್ಶಿ ಡಾ.ಆರ್.ಉಮಾಮಹೇಶ್ವರನ್ ಅವರ ಹೆಸರು ಇರಲಿದೆ. ಉಪಗ್ರಹದಲ್ಲಿರುವ ಎಲೆಕ್ಟ್ರಾನಿಕ್ಸ್ ಮತ್ತು ಸರ್ಕ್ಯೂಟ್‌ ಸೇರಿದಂತೆ ಸೇರಿದಂತೆ ಎಲ್ಲವನ್ನೂ ಭಾರತದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ತಿಳಿಸಿದರು.

Leave a Reply

Your email address will not be published.

Back to top button