LatestMain PostNational

ಬಾಬಾ ರಾಮ್‍ದೇವ್ ಬಹಿರಂಗ ಚರ್ಚೆಗೆ ಬರಲಿ- ಐಎಂಎ ಸವಾಲು

– ದಿನ ಅವರು ನಿಗದಿಪಡಿಸಲಿ, ಸ್ಥಳ ನಾವು ಹುಡುಕುತ್ತೇವೆ

ಡೆಹ್ರಾಡೂನ್: ಯೋಗ ಗುರು ಬಾಬಾ ರಾಮ್‍ದೇವ್ ಬಹಿರಂಗ ಚರ್ಚೆಗೆ ಆಗಮಿಸಲಿ ಎಂದು ಭಾರತೀಯ ವೈದ್ಯಕೀಯ ಮಂಡಳಿ (ಐಎಂಎ)ಯ ಉತ್ತರಾಖಂಡ್ ವಿಭಾಗ ಆಹ್ವಾನಿಸಿದೆ.

ಅಲೋಪತಿ ಹಾಗೂ ವೈಜ್ಞಾನಿಕ ವೈದ್ಯಕೀಯ ಪದ್ಧತಿ ವಿರುದ್ಧ ಬಾಬಾ ರಾಮ್‍ದೇವ್ ಹೇಳಿಕೆ ನೀಡಿದ್ದರು. ಬಳಿಕ ಅವರ ಮಾತನ್ನು ಹಿಂಪಡೆದಿದ್ದರು. ಆದರೆ ಸುಮ್ಮನಾಗದ ಐಎಂಎ, ಬಾಬಾ ರಾಮ್‍ದೇವ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಲಿಖಿತ ರೂಪದಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿತ್ತು. ಇದೀಗ ಬಹಿರಂಗ ಚರ್ಚೆಗೆ ಆಗಮಿಸುವಂತೆ ರಾಮ್‍ದೇವ್ ಅವರನ್ನು ಆಹ್ವಾನಿಸಿದೆ. ಇದನ್ನೂ ಓದಿ: ಬಾಬಾ ರಾಮ್‍ದೇವ್ ಅವರಿಗೆ 1000 ಕೋಟಿ ರೂ. ಮಾನನಷ್ಟ ನೋಟಿಸ್ ನೀಡಿದ ಐಎಂಎ

ಬಾಬಾ ರಾಮ್‍ದೇವ್ ಅವರಿಗೆ ಬಹಿರಂಗ ಪತ್ರ ಬರೆದಿರುವ ಉತ್ತರಾಖಂಡ್‍ನ ವಿಭಾಗದ ಐಎಂಎ ಅಧ್ಯಕ್ಷ ಡಾ.ಅಜಯ್ ಖನ್ನಾ, ಯೋಗಗುರುವಿನ ಹೇಳಿಕೆ ಉದ್ಧಟತನ, ಬೇಜವಾಬ್ದಾರಿ ಹಾಗೂ ಸ್ವಾರ್ಥದಿಂದ ಕೂಡಿದೆ. ಹೀಗಾಗಿ ಮಾಧ್ಯಮ ಮಿತ್ರರ ಸಮ್ಮುಖದಲ್ಲಿ ಐಎಂಎ ಹಾಗೂ ಯೋಗಪೀಠದ ನಡುವೆ ಬಹಿರಂಗ ಚರ್ಚೆ ನಡೆಯಲಿ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಆರೋಗ್ಯಕರ ಚರ್ಚೆಯ ದಿನಾಂಕ ಹಾಗೂ ಸಮಯವನ್ನು ನೀವೇ ನಿರ್ಧರಿಸಿ, ಚರ್ಚೆಯ ಸ್ಥಳವನ್ನು ನಾವು ನಿರ್ಧರಿಸುತ್ತೇವೆ. ಬಾಬಾ ರಾಮ್‍ದೇವ್ ಅವರ ಹೇಳಿಕೆಯಿಂದಾಗಿ ಅಲೋಪತಿ ಹಾಗೂ ಆಯುರ್ವೇದದ ನಡುವಿನ ಸಾಮರಸ್ಯಕ್ಕೆ ಧಕ್ಕೆಯಾಗಿದೆ. ಇದನ್ನು ಮರುಸ್ಥಾಪಿಸುವ ಉದ್ದೇಶದಿಂದ ಬಹಿರಂಗ ಚರ್ಚೆ ನಡೆಯಬೇಕಿದೆ ಎಂದು ಐಎಂಎ ಹೇಳಿದೆ. ಅಲ್ಲದೆ ಪತಂಜಲಿ ಔಷಧಿಯನ್ನು ಆಸ್ಪತ್ರೆಗಳಲ್ಲಿ ಬಳಸಿದ್ದೇವೆ ಎಂಬುದಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಸಹ ಮತ್ತೊಂದು ಪತ್ರದಲ್ಲಿ ಕೋರಲಾಗಿದೆ.

Leave a Reply

Your email address will not be published. Required fields are marked *

Back to top button