Connect with us

Corona

ಬಾಂಗ್ಲಾ ಕ್ರಿಕೆಟರ್ ಮುಶ್ರಫೆ ಮೊರ್ತಾಜಾಗೆ ಕೊರೊನಾ

Published

on

– ಒಂದೇ ದಿನ ಬಾಂಗ್ಲಾದ ಇಬ್ಬರು ಕ್ರಿಕೆಟಿಗರಿಗೆ ಸೋಂಕು ದೃಢ

ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ, ವೇಗದ ಬೌಲರ್ ಮುಶ್ರಫೆ ಮೊರ್ತಾಜಾ ಅವರಿಗೆ ಕೋವಿಡ್-119 ವೈರಸ್ ತಗುಲಿರುವುದು ದೃಢಪಟ್ಟಿದೆ.

ಮುಶ್ರಫೆ ಮೊರ್ತಾಜಾ ಅವರಿಗೆ ಕೊರೊನಾ ತಗುಲಿರುವ ವಿಚಾರವನ್ನ ಸ್ವತಃ ಅವರ ಸಹೋದರ, ಮೊರ್ಸಾಲಿನ್ ಬಿನ್ ಮೊರ್ತಾಜಾ ಸ್ಪಷ್ಟ ಪಡಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರಿಗೆ ಕೋವಿಡ್-19 ಟೆಸ್ಟ್ ಮಾಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ.

36 ವರ್ಷದ ಮುಶ್ರಫೆ ಮೊರ್ತಾಜಾ ಅವರು ಪ್ರಸ್ತುತ ಮನೆಯ ಪ್ರತ್ಯೇಕತೆಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಂಗ್ಲಾದೇಶದ ಸಂಸತ್ತಿನ ಸದಸ್ಯರಾದ ಮೊರ್ತಾಜಾ ಈವರೆಗೂ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿಲ್ಲ. ಬಾಂಗ್ಲಾದೇಶದಲ್ಲಿ ಈವರೆಗೂ 1.05 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ದೃಢಪಟ್ಟಿದ್ದು, ಸುಮಾರು 43,000 ಜನರು ಗುಣಮುಖರಾದರೆ 1,300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕಾಗಿ ಮುಶ್ರಫೆ ಮೊರ್ತಾಜಾ ಅವರು ತಮ್ಮ ನೆಚ್ಚಿನ ಕಡಗವನ್ನು ಹರಾಜು ಹಾಕಿದ್ದರು. ಅದರ ಮೂಲ ಬೆಲೆಯನ್ನು 5 ಲಕ್ಷ ರೂ. ನಿಗದಿಗೊಳಿಸಲಾಗಿತ್ತು. ಆದರೆ ಭಾರೀ ಬೇಡಿಕೆ ಉಂಟಾಗಿ ಕಡಗವು 37 ಲಕ್ಷ ರೂ.ಕ್ಕೆ ಹರಾಜಾಗಿತ್ತು.

ತಮ್ಮ ಶ್ರೇಷ್ಠ ವೃತ್ತಿಜೀವನದಲ್ಲಿ 220 ಏಕದಿನ, 36 ಟೆಸ್ಟ್ ಮತ್ತು 54 ಟಿ20 ಪಂದುಗಳನ್ನು ಆಡಿದ ಮೊರ್ತಾಜಾ ಅವರು, ಕೋವಿಡ್-19 ಸಮಯದಲ್ಲಿ ಜನರ ಸಹಾಯಕ್ಕೆ ನಿಂತಿದ್ದರು. ಮಾರ್ಚ್ ನಲ್ಲಿ ಅವರು ಕೋವಿಡ್-19ನಿಂದ ಬಳಲುತ್ತಿದ್ದ 300 ಕುಟುಂಬಗಳಿಗೆ ಸಹಾಯ ಮಾಡಿದ್ದರು.

ನಫೀಸ್ ಇಕ್ಬಾಲ್:
ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ಆಟಗಾರ, ಬಾಂಗ್ಲಾ ಏಕದಿನ ತಂಡದ ನಾಯಕ ತಮೀಮ್ ಇಕ್ಬಾಲ್ ಅವರ ಅಣ್ಣ ನಫೀಸ್ ಇಕ್ಬಾಲ್ ಅವರಿಗೂ ಕೊರೊನಾ ವೈರಸ್ ತಗುಲಿದೆ. ಸ್ವತಃ ನಫೀಸ್ ಇಕ್ಬಾಲ್ ಅವರು ತಮಗೆ ಹೆಮ್ಮಾರಿ ಕೋವಿಡ್-19 ದೃಢಪಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಅವರು ಈಗ ಚಿತ್ತಗಾಂಗ್‍ನ ತಮ್ಮ ನಿವಾಸದಲ್ಲಿ ಐಸೊಲೇಶನ್‍ನಲ್ಲಿದ್ದಾರೆ ಎನ್ನಲಾಗಿದೆ.

ಬಲಗೈ ಆರಂಭಿಕ ಬ್ಯಾಟ್ಸ್‍ಮನ್ ಆಗಿದ್ದ ನಫೀಸ್ ಇಕ್ಬಾಲ್, ಬಾಂಗ್ಲಾದೇಶ ಪರ 2003ರಲ್ಲಿ ಪಾದಾರ್ಪಣೆ ಮಾಡಿದ್ದರು. ಆದರೆ 2006ರಿಂದಲೂ ನಫೀಸ್ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿಲ್ಲ. 34 ವರ್ಷದ ಹರೆಯದ ನಫೀಸ್, ಬಾಂಗ್ಲಾ ಪರ 11 ಟೆಸ್ಟ್, 16 ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 518 ಮತ್ತು 309 ರನ್ ಗಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *