ಕೊಪ್ಪಳ: ಚಿರತೆ ದಾಳಿಗೆ ಯುವಕನೋರ್ವ ಬಲಿಯಾಗಿರುವ ಹೃದಯವಿದ್ರಾವಕ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ವ್ಯಾಪ್ತಿಯಲ್ಲಿ ಬರುವ ದುರ್ಗಾದೇವಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಹುಲಗೇಶ್ ಚಿರತೆಗೆ ಬಲಿಯಾದ ಯುವಕನಾಗಿದ್ದಾನೆ. ಮೃತ ಹುಲಗೇಶ್ ದುರ್ಗಾದೇವಿ ದೇವಸ್ಥಾನದಲ್ಲಿ ಹಲವಾರು ವರ್ಷಗಳಿಂದ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ. ಎಂದಿನಂತೆ ಬುಧವಾರ ಸಹ ದೇವಸ್ಥಾನದ ಕೆಲಸ ಕಾರ್ಯಗಳನ್ನ ಮುಗಿಸಿ ರಾತ್ರಿ ಬಹಿರ್ದೆಸೆಗೆ ಹೋಗಿದ್ದ ಸಂದರ್ಭದಲ್ಲಿ ಏಕಾಏಕಿ ಚಿರತೆ ದಾಳಿ ಮಾಡಿದೆ.
Advertisement
Advertisement
ಯುವಕನನ್ನು ಎಳೆದುಕೊಂಡು ಹೋಗಿ ನರಭಕ್ಷಕ ಚಿರತೆ ಇಡೀ ದೇಹವನ್ನ ತುಂಡು ತುಂಡು ಮಾಡಿದೆ. ವಿಷಯ ತಿಳಿದ ಸ್ಥಳೀಯರು ಕೂಡಲೇ ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲಿಸ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದು. ದೇಹದ ಅವಶೇಷಗಳು ಪತ್ತೆಯಾಗಿದೆ.
Advertisement
Advertisement
ಕೆಲ ದಿನಗಳ ಹಿಂದೆಯಷ್ಟೆ ಮಗುವಿನ ಮೇಲೆ ಮತ್ತು ವೃದ್ಧೆಯ ಮೇಲೆ ಚಿರತೆ ದಾಳಿ ಮಾಡಿತ್ತು. ಅದೃಷ್ಟವಶಾತ್ ಅವರು ಬದುಕುಳಿದಿದ್ದರು. ಈ ಘಟನೆಗಳು ಮಾಸುವ ಮುನ್ನವೆ ಈಗ ಯುವಕನನ್ನೆ ಬಲಿಪಡೆದಿದ್ದು, ಸುತ್ತಮುತ್ತಲಿನ ಗ್ರಾಮಸ್ಥರನ್ನು ಬೆಚ್ಚಿಬೀಳುವಂತೆ ಮಾಡಿದೆ. ನರಭಕ್ಷಕ ಚಿರತೆಯನ್ನು ಸೆರೆಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.