ಶಿವಮೊಗ್ಗ: ಏಳು ದಶಕಗಳಿಂದಲೂ ಸಾಗುವಳಿ ಮಾಡಿಕೊಂಡು ಬರುತ್ತಿದ್ದ ಖರಾಬು ಭೂಮಿಯಿಂದ ಬಡ ರೈತರನ್ನು ಒಕ್ಕಲೆಬ್ಬಿಸಲು ಖಾಸಗಿ ವ್ಯಕ್ತಿಯೊಬ್ಬರು ಮುಂದಾಗಿದ್ದು, ಇದನ್ನು ತಡೆದ ರೈತರು, ಜೆಸಿಬಿ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.
ಶಿವಮೊಗ್ಗದ ತಟ್ಟೆಕೆರೆ ಗ್ರಾಮದ ಸರ್ವೆ ನಂ. 176 ರಲ್ಲಿ ಸುಮಾರು 40.19 ಎಕರೆ ಸರ್ಕಾರಿ ಖರಾಬು ಭೂಮಿಯನ್ನು 40ಕ್ಕೂ ಹೆಚ್ಚು ದಲಿತರು 70 ವರ್ಷಗಳಿಗೂ ಹಿಂದಿನಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಬಗರ್ಹುಕುಂ ಸಾಗುವಳಿ ಚೀಟಿ ಮಂಜೂರಾತಿಗಾಗಿ ಅರ್ಜಿಯನ್ನೂ ಸಲ್ಲಿಸಿದ್ದಾರೆ. ಆದರೆ ಈ ನಡುವೆ ಬಲಾಢ್ಯ ವ್ಯಕ್ತಿಯೊಬ್ಬರು ಪ್ರಭಾವ ಬಳಸಿ ಭೂಮಿ ತಮ್ಮದೆಂದು ನಕಲಿ ದಾಖಲೆ ಸೃಷ್ಟಿಸಿ, 31 ಎಕರೆ ಭೂಮಿಯನ್ನು ತಮ್ಮ ಒಡೆತನಕ್ಕೆ ಪಡೆದಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
Advertisement
Advertisement
ಇಂದು ಬೆಳಗ್ಗೆ ಜಮೀನನ್ನು ವಶಕ್ಕೆ ಪಡೆಯಲು ಜೆಸಿಬಿ, ಲಾರಿಗಳ ಮೂಲಕ ಗ್ರಾಮಕ್ಕೆ ಬಂದ ವ್ಯಕ್ತಿಗಳನ್ನು ಗ್ರಾಮಸ್ಥರು ಅಡ್ಡಗಟ್ಟಿದ್ದು, ಜಮೀನನ್ನು ವಶಪಡಿಸಿಕೊಂಡರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ, ಕ್ರಿಮಿನಾಶಕ ಬಾಟಲಿಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ನಕಲಿ ದಾಖಲೆಗಳ ಮೂಲಕ ಜಮೀನು ಕಬಳಿಸಲು ಕೆಲವರು ಪ್ರಯತ್ನಿಸಿದ್ದು, ಇದರಲ್ಲಿ ಕೆಲ ಅಧಿಕಾರಿಗಳು ಶಾಮೀಲಾಗಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ತನಿಖೆ ನಡೆಸಿ ಬಡ ರೈತರ ಭೂಮಿ ಉಳಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.