ಉಡುಪಿ: ರಾಮಮಂದಿರ ಶಿಲಾನ್ಯಾಸ ಸಂದರ್ಭ ತಮ್ಮ ಮಂದಿರ ಹೋರಾಟದ ನೆನಪುಗಳನ್ನು ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಬಿಚ್ಚಿಟ್ಟಿದ್ದಾರೆ.
ಅನೇಕ ದಶಕಗಳಿಂದ ನಾವೆಲ್ಲರೂ ಒಂದುಗೂಡಿ ಭಾವನಾತ್ಮಕವಾಗಿ ಯಾವ ಹೋರಾಟವನ್ನು ಮಾಡಿದ್ದೇವೊ ಅದೀಗ ಕೈಗೂಡಿದೆ. ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗುತ್ತಿದೆ. ದಶಕಗಳಿಂದ ರಾಮ ಮಂದಿರದ ಚಳುವಳಿಯಲ್ಲಿ ನಾವು ಸಕ್ರಿಯವಾಗಿ ಭಾಗವಹಿಸಿದ್ದೆವು.
Advertisement
Advertisement
ರಾಮಲಲ್ಲಾನ ವಿಗ್ರಹ ಬೀಗಮುದ್ರೆಯೊಂದಿಗೆ ಬಂಧಿಯಾಗಿತ್ತು. ಆ ಬೀಗಮುದ್ರೆ ಒಡೆಯುವ ವೇಳೆ ನಾನೂ ಪೇಜಾವರ ಶ್ರೀವಿಶ್ವೇಶತೀರ್ಥರ ಜೊತೆ ಹಾಜರಿದ್ದೆ. ಕಲ್ಲಿನಿಂದ ಬೀಗ ಒಡೆಯಲು ಜಜ್ಜುವಾಗ ತಪ್ಪಿ ಹೋಗುತ್ತಿತ್ತು. ಕೊನೆಗೆ ನಾನು ಕೈಯಲ್ಲಿ ಬೀಗ ಹಿಡಿದೆ. ಯಾರೋ ಭಕ್ತರು ಒಡೆದರು, ರಾಮ ದೇವರು ಬಂಧಮುಕ್ತರಾದರು. ಇದನ್ನು ಕಣ್ತುಂಬಿಕೊಂಡ ಕ್ಷಣ ಈಗಲೂ ಹಚ್ಚ ಹಸುರಾಗಿದೆ. ಆಗ ಮೊಳಗಿದ ರಾಮ ಘೋಷ ಮತ್ತೆಂದೂ ಕೇಳಿಲ್ಲ ಎಂದರು.
Advertisement
Advertisement
ಅಯೋಧ್ಯೆಯಲ್ಲಿ ಮುಂದೆ ರಾಮನ ವಿಗ್ರಹ ಪ್ರತಿಷ್ಠಾಪನೆಯ ವೇಳೆಯಲ್ಲೂ ಪೇಜಾವರ ಶ್ರೀಗಳೊಂದಿಗೆ ಇದ್ದೆ. ಅನೇಕ ದಶಕಗಳಿಂದ ಭಾವನಾತ್ಮಕ ಹೋರಾಟ ಈಗ ಫಲಿಸುತ್ತಿದೆ. ಭವ್ಯವಾದ ರಾಮಮಂದಿರ ನಿರ್ಮಾಣವಾಗುತ್ತಿದೆ. ಪುತ್ತಿಗೆ ಮಠದಲ್ಲೂ ರಾಷ್ಟ್ರೀಯ ವಿಚಾರ ಸಂಕೀರಣ, ರಾಮಮಂದಿರ ಕುರಿತಾದ ಅನೇಕ ಸಭೆಗಳು ನಡೆದಿತ್ತು. ರಾಮಮಂದಿರ ನಿರ್ಮಾಣ ಅನೇಕ ಕಾಲದ ಆಕಾಂಕ್ಷೆ, ಸಂಕಲ್ಪ ಈಡೇರುತ್ತಿರುವುದು ಸಂತಸವಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಾವು ಭಗವಂತನಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು. ಭೂಮಿ ಪೂಜೆ ನಡೆಯುವಾಗ ರಾಮ ದೇವರ ವಿಶೇಷ ಅರ್ಚನೆ ಮಾಡುತ್ತೇವೆ. ಲಕ್ಷ ತುಳಸಿ ಅರ್ಚಿಸುವ ಮೂಲಕ ರಾಮನ ಪೂಜೆ ನಡೆಸ್ತೇವೆ ಎಂದು ಮಾಹಿತಿ ನೀಡಿದರು.
ಅಳಿಲು ಕೂಡ ರಾಮಸೇತು ನಿರ್ಮಾಣದಲ್ಲಿ ಸೇವೆ ಸಲ್ಲಿಸಿದ್ದಂತೆ, ರಾಮ ಮಂದಿರ ನಿರ್ಮಾಣದಲ್ಲಿ ಪ್ರತಿಯೊಬ್ಬರು ಕೂಡ ತಮ್ಮ ಸೇವೆಯನ್ನು ಅರ್ಪಿಸಬೇಕು. ರಾಮಮಂದಿರ ಭಕ್ತರ ಭಕ್ತಿಯ ಪ್ರತೀಕವಾಗಿ ವಿರಾಜಮಾನವಾಗಲಿ ಎಂದು ಶ್ರೀ ಸುಗುಣೇಂದ್ರ ತೀರ್ಥರು ಹೇಳಿದರು.