ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಸಫಾರಿ, ಕಾಟೇಜ್ ದರ ಏರಿಸಲಾಗಿದೆ. ಸಫಾರಿ ದರ ಡಬಲ್ ಮಾಡಿದ್ದು ವನ್ಯಪ್ರಿಯರು, ಪ್ರವಾಸಿಗರಿಂದ ಇದಕ್ಕೆ ವಿರೋಧ ವ್ಯಕ್ತವಾಗಿದೆ.
ಹುಲಿಗಳ ಸಂಖ್ಯೆಯಲ್ಲಿ ರಾಜ್ಯದಲ್ಲೆ ಎರಡನೇ ಸ್ಥಾನದಲ್ಲಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯ. ಕಾಡು ಪ್ರಾಣಿಗಳ ವೀಕ್ಷಣೆಗೆ ಸಫಾರಿ ಮಾಡಲೆಂದೇ ದೇಶ-ವಿದೇಶಗಳಿಂದ ನಿತ್ಯ ನೂರಾರು ಮಂದಿ ಪ್ರವಾಸಿಗರು ಬರುತ್ತಾರೆ. ಕಳೆದ ನಾಲ್ಕು ವರ್ಷಗಳಿಂದ ಸಫಾರಿ, ಕೊಠಡಿ ಬಾಡಿಗೆ, ಪಾರ್ಕಿಂಗ್ ಶುಲ್ಕ ಹೀಗೆ ಯಾವುದೇ ರೀತಿಯ ದರಗಳಲ್ಲೂ ಬದಲಾವಣೆ ಮಾಡಿರಲಿಲ್ಲ. ಇದೀಗ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿಗಳು ದರ ಹೆಚ್ಚಳ ಮಾಡುವ ಬಗ್ಗೆ ಕಳೆದ ಜನವರಿ 29 ರಂದು ಬರೆದಿರುವ ಪತ್ರವನ್ನು ಉಲ್ಲೇಖಿಸಿ ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಅವರು ಸಫಾರಿ ಮತ್ತಿತರ ದರಗಳನ್ನು ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದಾರೆ.
Advertisement
Advertisement
ಬಂಡೀಪುರದಲ್ಲಿ ಮಾರ್ಚ್ 31 ರ ತನಕ ಒಬ್ಬರಿಗೆ ಪ್ರವೇಶ ಶುಲ್ಕ 250 ರೂಪಾಯಿ ಮತ್ತು ಸಫಾರಿಗೆ 100 ರೂಪಾಯಿ ಇತ್ತು. ಆದರೆ ಏಪ್ರಿಲ್ 1 ರಿಂದ ಪ್ರವೇಶ ಶುಲ್ಕ 300 ರೂಪಾಯಿ ಹಾಗೂ ಸಫಾರಿಗೆ 300 ರೂಪಾಯಿ ದರ ನಿಗದಿಪಡಿಸಲಾಗಿದೆ. ಹಾಗಾಗಿ ಪ್ರವಾಸಿಗರು ಇನ್ನು ಮುಂದೆ 600 ರೂಪಾಯಿ ಕೊಟ್ಟು ಸಫಾರಿ ಹೋಗಬೇಕಾಗಿದೆ. ಹಾಗೆಯೇ ಮಕ್ಕಳು ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ ಹಾಗೂ ಸಫಾರಿ ಸೇರಿದಂತೆ 300 ರೂಪಾಯಿ, ವಿದೇಶಿ ಪ್ರವಾಸಿಗರಿಗೆ 1,000 ರೂಪಾಯಿ ದರ ನಿಗದಿಪಡಿಸಲಾಗಿದೆ.
Advertisement
Advertisement
ಸಫಾರಿ ಜಿಪ್ಸಿ ಬಾಡಿಗೆ ಭಾರತೀಯರಿಗೆ 3,500 ರೂಪಾಯಿ, ವಿದೇಶಿಯರಿಗೆ 5,000 ರೂಪಾಯಿ, 9 ಸೀಟಿನ ಕ್ಯಾಂಪರ್ ಗೆ ಭಾರತೀಯರಿಗೆ 5,000 ರೂಪಾಯಿ, ವಿದೇಶಿಯರಿಗೆ 7,000 ರೂಪಾಯಿ ನಿಗದಿಪಡಿಸಲಾಗಿದೆ.
ಬಂಡೀಪುರ ಕ್ಯಾಂಪಸ್ ನಲ್ಲಿರುವ ಕೊಠಡಿ ಬಾಡಿಗೆ ಒಂದು ದಿನಕ್ಕೆ 2,000 ರೂಪಾಯಿ, ವಿದೇಶಿಯರಿಗೆ 4,000 ರೂಪಾಯಿ, ಗಜೇಂದ್ರ ವಿಐಪಿ ಕೊಠಡಿ(1) ಬಾಡಿಗೆ 3,000 ರೂಪಾಯಿಯಿಂದ 6000 ರೂಪಾಯಿ ಗೆ ಏರಿಗೆ ಮಾಡಲಾಗಿದೆ. ಗಜೇಂದ್ರ ವಿಐಪಿ ಕೊಠಡಿ (2)ರ ಬಾಡಿಗೆಯನ್ನು 2,500 ಹಾಗೂ ವಿದೇಶಿಯರಿಗೆ 5,000 ರೂ. ನಿಗದಿ ಮಾಡಲಾಗಿದೆ.
ಗಜೇಂದ್ರ ವಿಐಪಿ ಕೊಠಡಿ(3)ರ ಬಾಡಿಗೆಯನ್ನು 2,000 ರೂಪಾಯಿ ವಿದೇಶಿಯರಿಗೆ 4,000 ರೂಪಾಯಿ ನಿಗದಿ ಮಾಡಲಾಗಿದೆ. 10 ಬೆಡ್ ಗಳ ಡಾರ್ಮೆಟರಿ ಬಾಡಿಗೆಯನ್ನು 2,500 ವಿದೇಶಿಯರಿಗೆ 5000 ರೂಪಾಯಿ, 20 ಬೆಡ್ ಗಳ ಡಾರ್ಮೆಟರಿ ಬಾಡಿಗೆಯನ್ನು 5000 ರೂಪಾಯಿ, ವಿದೇಶಿಯರಿಗೆ 10,000 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದರ ಜೊತೆಗೆ ಕ್ಯಾಮೆರಾ ಹಾಗೂ ವಾಹನಗಳ ಪಾರ್ಕಿಂಗ್ ಶುಲ್ಕವನ್ನು ಸಹ ಹೆಚ್ಚಳ ಮಾಡಲಾಗಿದೆ.
ಒಟ್ನಲ್ಲಿ ದರ ಏರಿಕೆ ಕ್ರಮ ಸರಿಯಾದುದಲ್ಲ, ಜನಸಾಮಾನ್ಯರಿಗೆ ಕೈಗೆಟುಕವ ದರದಲ್ಲಿ ಹೆಚ್ಚಳ ಮಾಡಲಾಗಿಲ್ಲ. ಇಷ್ಟೊಂದು ದರ ಭರಿಸಲಾಗದೆ ಬಡವರು, ಮಧ್ಯಮ ವರ್ಗದವರು, ಶಾಲಾ ಮಕ್ಕಳು ಸಫಾರಿಯಿಂದ ದೂರ ಉಳಿಯುವಂತಾಗುತ್ತದೆ. ಕಾಡಿನ ಸೊಬಗನ್ನು ಸವಿಯುವುದರಿಂದ ವಂಚಿತರಾಗಬೇಕಾಗುತ್ತದೆ. ಉಳ್ಳವರಿಗೆ ಬೇಕಾದರೆ ದರ ಏರಿಕೆ ಮಾಡಲಿ, ಆದರೆ ಸ್ಥಳೀಯರಿಗೆ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಶುಲ್ಕ ಕಡಿಮೆ ಮಾಡಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.