– ನಮ್ಮ ವಿರುದ್ಧ ಆಧಾರ ರಹಿತ ಆರೋಪ
– ನಾವು ಯಾವುದೇ ಅಕ್ರಮ ಹಣಕಾಸು ವ್ಯವಹಾರ ನಡೆಸಿಲ್ಲ
ಬೆಂಗಳೂರು: ಸಾಮಾಜಿಕ ಕಾರ್ಯಕರ್ತ, ಚಿತ್ರ ವಿತರಕ ಪ್ರಶಾಂತ್ ಸಂಬರಗಿ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ನೀಡಿದೆ.
ದೂರು ನೀಡಿದ ನಂತರ ಮಾತನಾಡಿದ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು, ನಮ್ಮ ವಿರುದ್ಧ ಸಂಬರಗಿ ಸುಳ್ಳು ಆರೋಪ ಮಾಡಿದ್ದಾರೆ. ಡ್ರಗ್ ಕಿಂಗ್ ಪಿನ್ ರಾಹುಲ್ ಹಾಗೂ ಯಾವುದೋ ಹುಡುಗಿ ಜೊತೆ ಸಂಬರಗಿ ಇರುವ ಫೋಟೋ ಪ್ರಕಟವಾಗಿದೆ. ಹಾಗಾದ್ರೆ ಸಂಬರಗಿ ಯಾರು? ರಾಹುಲ್ಗೂ ಇವರಿಗೂ ಏನೂ ಸಂಬಂಧ ಇದರ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿ ದೂರು ನೀಡಿದ್ದೇವೆ ಎಂದು ತಿಳಿಸಿದರು.
Advertisement
Advertisement
Advertisement
ದೂರಿನಲ್ಲಿ ಏನಿದೆ?
ವಾಣಿಜ್ಯ ಮಂಡಳಿ ಆರಂಭಗೊಂಡು ಇಂದಿನವರೆಗೆ ಯಾವುದೇ ರೀತಿಯ ಅಕ್ರಮ ಹಣಕಾಸು ವ್ಯವಹಾರ ನಡೆಸಿಲ್ಲ. ಆದರೆ ಪ್ರಶಾಂತ್ ಸಂಬರಗಿ ವಾಣಿಜ್ಯ ಮಂಡಳಿಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
Advertisement
ವಾಣಿಜ್ಯ ಮಂಡಳಿ ಸದಸ್ಯರಲ್ಲ ಪ್ರಶಾಂತ್ ಸಂಬರಗಿ ಅವರು ಸೆ.3ರಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ನಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯ ವಿಡಿಯೋವನ್ನು ಸರಿ ಸುಮಾರು 1 ಕೋಟಿಗೂ ಅಧಿಕ ವೀಕ್ಷಕರು ವೀಕ್ಷಿಸಿದ್ದು, ಹೇಳಿಕೆಯಿಂದ ವಾಣಿಜ್ಯ ಮಂಡಳಿಗೆ ಧಕ್ಕೆ ತಂದಿದ್ದಾರೆ. ಈ ಹೇಳಿಕೆ ಕಾನೂನುಬಾಹಿರವಾಗಿದ್ದು ಆಧಾರವಿಲ್ಲದ ಆರೋಪ ಮಾಡಿ ಸಂಸ್ಥೆಗೆ ಕಪ್ಪು ಚುಕ್ಕೆಯನ್ನು ತರಲು ಯತ್ನಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಂಡಳಿ ಮನವಿ ಮಾಡಿಕೊಂಡಿದೆ.
ಸಂಬರಗಿ ಹೇಳಿದ್ದು ಏನು?
ಬಾಹುಬಲಿ ಚಿತ್ರಕ್ಕೆ ಸಾ.ರಾಗೋವಿಂದು ರೋಲ್ ಕಾಲ್ ಪಡೆದಿದ್ದಾರೆ. ಹೀಗಾಗಿ ಬಾಹುಬಲಿ ಭಾಗ-1 ಮತ್ತು ಬಾಹುಬಲಿ ಭಾಗ 2 ಚಿತ್ರದಲ್ಲಿ ಗೋವಿಂದು ಅವರು ವಿಭಿನ್ನ ನಿಲುವು ಹೊಂದಿದ್ದರು. ರೋಲ್ಕಾಲ್ ಪಡೆದ ಬಗ್ಗೆ ಪ್ರಸ್ತಾಪ ಮಾಡಿದ್ದರಿಂದ ಸಾ.ರಾ ಗೋವಿಂದ್ ಮತ್ತು ಅವರ ಪಡೆದ ತಮ್ಮ ವಿರುದ್ದ ತಿರುಗಿ ಬಿದ್ದಿದೆ. ಈ ಬಗ್ಗೆ ಅವರು ಉತ್ತರ ನೀಡಲಿ. ವಾಣಿಜ್ಯ ಮಂಡಳಿ ಹಾಗೂ ಚಿತ್ರರಂಗ ಗಬ್ಬೆದ್ದು ನಾರುತ್ತಿದೆ ಮೊದಲು ಅದನ್ನು ಸರಿಪಡಿಸಬೇಕು. ಇದರ ಬಗ್ಗೆ ನಾನು ಪ್ರಶ್ನೆ ಮಾಡಿದರೆ ನನ್ನನ್ನೇ ಯಾರು ಎಂದು ಕೇಳುತ್ತಾರೆ ಎಂದಿದ್ದರು.
ಇಂಡಸ್ಟ್ರಿಯಲ್ಲಿ ವಾಸನೆ ಬರುತ್ತಿದೆ. ಇಂತಹ ಸಂದರ್ಭದಲ್ಲಿ ನಾಯಕತ್ವ ವಹಿಸಿಕೊಳ್ಳದಿದ್ದಲ್ಲಿ ಮಂಡಳಿ ಇದ್ದು ಪ್ರಯೋಜನವೇನು? ವಾಣಿಜ್ಯ ಮಂಡಳಿ ಕಚೇರಿಯಲ್ಲಿ 15 ಲಕ್ಷ ರೂ. ಬೆಲೆಯ ಶೌಚಾಲಯ ಕಟ್ಟಿಸಿದ್ದು, ಅದರ ಆಡಿಟ್ ಆಗಿಲ್ಲ. ಇಂತಹ ಹಲವು ಭ್ರಷ್ಟಾಚಾರಗಳು ಬಯಲಿಗೆ ಬರಬೇಕು. ವಾಣಿಜ್ಯ ಮಂಡಳಿಯಲ್ಲಿ ಉನ್ನತ ಸ್ಥಾನಗಳಲ್ಲಿ ಬೇರೆಯವರಿಗೆ ಅವಕಾಶ ಕೊಡದೇ 10 ವರ್ಷದ ಚುನಾವಣೆಯಲ್ಲಿ ಪದೇ ಪದೆ ಅವರವರೇ ನೇಮಕಗೊಳ್ಳುತ್ತಿದ್ದಾರೆ. ಈ ಕುರಿತು ಸ್ವತಃ ಮಂಡಳಿಯ ಸದಸ್ಯ ಕೃಷ್ಣೇ ಗೌಡ ಧ್ವನಿಯೆತ್ತಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಸರ್ಕಾರ ಚಲನಚಿತ್ರ ಕಾರ್ಮಿಕರಿಗೆ ನೀಡಿದ ಕಿಟ್ ಫಂಡ್ ಅನ್ನು ವಾಣಿಜ್ಯ ಮಂಡಳಿ ತಿಂದು ತೇಗಿದೆ. ನಾನು ಸದಸ್ಯನಾಗದ ಕಾರಣ ಇಲ್ಲಿನ ಹುಳುಕುಗಳ ಧ್ವನಿ ಎತ್ತಲು ಸಾಧ್ಯವಿಲ್ಲ. ಫುಡ್ ಕಿಟ್ ಫಂಡ್ ಅನ್ನು ಪದಾಧಿಕಾರಿಗಳೇ ಹಂಚಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.