ಲಕ್ನೋ: ಪ್ರೇಯಸಿ ತಂದೆಯ ಮೇಲೆ ಸುಳ್ಳು ಆಪಾದನೆ ಮಾಡುವ ಸಲುವಾಗಿ ಯುವಕನೊಬ್ಬ ಸ್ನೇಹಿತನೊಂದಿಗೆ ಅಪಹರಣ ನಾಟಕವಾಡಿ ತಾನೇ ಸಮಸ್ಯೆಗೆ ಸಿಲುಕಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಆರೋಪಿಯನ್ನು ಜಿತೇಂದ್ರ ಕುಮಾರ್ ಎಂದು ಗುರುತಿಸಲಾಗಿದ್ದು, ಈತ ಅಮೇಥಿ ಜಿಲ್ಲೆಯ ನಿವಾಸಿ. ಸುಲ್ತಾನಪುರ ಜಿಲ್ಲೆಯ ಲಂಭುವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ನವಧನ್ ಗ್ರಾಮದಲ್ಲಿ ತನ್ನ ಅಜ್ಜಿ ಜೊತೆ ವಾಸವಾಗಿದ್ದನು. ಇತ್ತೀಚೆಗಷ್ಟೇ ಸ್ಥಳೀಯ ಕಾರ್ಯಕ್ರಮಗಳಲ್ಲಿ ಗಾಯಕನಾಗಿ ವೃತ್ತಿ ಆರಂಭಿಸಿದ್ದ ಈತ ಸಂಗೀತ ಕಲಿಯುವ ನೆಪ ಹೇಳಿ ಜನವರಿ 23ರಂದು ಮನೆಯಿಂದ ವಾರಣಾಸಿಗೆ ಹೋಗಿದ್ದಾನೆ.
Advertisement
Advertisement
ಮರುದಿನ ಜಿತೇಂದ್ರ ಕುಮಾರ್ ಮೊಬೈಲ್ ಮೂಲಕ ಆತನ ತಂದೆ ಸುರೇಂದ್ರ ಕುಮಾರ್ ಗೆ ತಮ್ಮ ಮಗನನ್ನು ಅಪಹರಣ ಮಾಡಲಾಗಿದೆ ಎಂಬ ಕರೆ ಬಂದಿದೆ. ಅಲ್ಲದೆ ಆತನನ್ನು ಸುರಕ್ಷಿತವಾಗಿ ವಾಪಸ್ ಕಳುಹಿಸಬೇಕಾದರೆ 10 ಲಕ್ಷ ರೂ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಆತಂಕಗೊಂಡ ಸುರೇಂದ್ರ ಕುಮಾರ್ ದಿಕ್ಕುತೋಚದೆ ಪೊಲೀಸರ ಮೊರೆ ಹೋಗಿದ್ದಾರೆ.
Advertisement
ತನಿಖೆ ವೇಳೆ ಅಪಹರಣಕಾರರು ಜಿತೇಂದ್ರ ಕುಮಾರ್ ಫೋನ್ ಬಳಸಿ ಕರೆ ಮಾಡಿರುವುದನ್ನು ಪತ್ತೆ ಹಚ್ಚಿದ ಪೊಲೀಸರು ಘಟನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಜನವರಿ 24ರಂದು ಮಧ್ಯರಾತ್ರಿ 2 ಗಂಟೆಗೆ ಜಿತೇಂದ್ರ್ರ ಮೊಬೈಲ್ ನಿಂದ ಸಿಮ್ ಬದಲಿಸಿ ಬೆಳಗ್ಗೆ 8 ಗಂಟೆ ಹೊತ್ತಿಗೆ ಕರೆ ಮಾಡಲಾಗಿದೆ ಎಂದು ಪೊಲೀಸರು ಸುರೇಂದ್ರ ಕುಮಾರ್ ತಿಳಿಸಿದ್ದಾರೆ. ಅಲ್ಲದೆ ಕರೆ ಮಾಡಲು ಬಳಸಿದ್ದ ಸಿಮ್ ಜಿತೇಂದ್ರ ಕುಮಾರ್ ಸ್ನೇಹಿತನ ರವಿ ಹೆಸರು ತೋರಿಸುತ್ತಿದೆ. ಕೊನೆಗೆ ಟ್ರೇಸ್ ಮಾಡಿ ಶಿವಗರದಲ್ಲಿ ಆರೋಪಿಗಳನ್ನು ಪತ್ತೆ ಮಾಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Advertisement
ನಂತರ ವಿಚಾರಣೆ ವೇಳೆ ಜಿತೇಂದ್ರ ಕುಮಾರ್ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದು, ಆಕೆಯ ತಂದೆ ಪ್ರೀತಿಯನ್ನು ನಿರಾಕರಿಸಿದ ಕಾರಣ ಅವರ ಮೇಲೆ ಸುಳ್ಳು ಆಪಾದನೆ ಮಾಡುವ ಸಲುವಾಗಿ ಅಪಹರಣ ನಾಟಕವಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ.