ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆಯಿಂದಾಗಿ ಜುಲೈ 24ರಂದು ಯಲ್ಲಾಪುರ-ಹುಬ್ಬಳ್ಳಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಅರೆಬೈಲ್ ಘಟ್ಟ ಪ್ರದೇಶದಲ್ಲಿ ಭೂ ಕುಸಿತವಾದ್ದರಿಂದ ಭಾರೀ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿತ್ತು. ಇದರಿಂದಾಗಿ ವಿವಿಧ ರಾಜ್ಯ ಹಾಗೂ ಜಿಲ್ಲೆಗಳಿಂದ ಬಂದ ಲಾರಿಗಳು ಅಂಕೋಲ ಭಾಗದ ಬಾಳೆಗುಳಿ ಕ್ರಾಸ್ ನಲ್ಲಿ ಸಿಲುಕಿಕೊಂಡಿದ್ದವು. ಆದರೆ ಊಟಕ್ಕೆ ಹಣವಿಲ್ಲದೆ ಕಂಗಾಲಾಗಿರುವ ಚಾಲಕರು ಇಂದು ದಿಢೀರ್ ಪ್ರತಿಭಟನೆ ನಡೆಸಿದರು.
Advertisement
ಅಂಕೋಲ ಸೇರಿದಂತೆ ಹಲವು ಭಾಗದಲ್ಲಿ ನೂರಾರು ಟ್ರಕ್ ಗಳು 14 ದಿನದಿಂದ ನಿಂತಿದ್ದು, ಇದೀಗ ಲಾರಿ ಚಾಲಕರಿಗೆ ಊಟಕ್ಕೂ ಹಣವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಇಂದು ಅಂಕೋಲದ ಬಾಳೆಗುಳಿ ಕ್ರಾಸ್ ನಲ್ಲಿ ಲಾರಿ ಚಾಲಕರು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಲಾರಿ ಚಾಲಕರಿಗೆ ಇರುವ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟ ನಂತರ ಕಾರವಾರ-ಮಂಗಳೂರು ಹೆದ್ದಾರಿಯಲ್ಲಿ ವಾಹನಗಳು ತೆರಳಲು ಅವಕಾಶ ಕಲ್ಪಿಸಿಕೊಟ್ಟರು.
Advertisement
ಸದ್ಯ ರಾಷ್ಟ್ರೀಯ ಹೆದ್ದಾರಿ 63ರ ಅರೆಬೈಲು ಘಟ್ಟದಲ್ಲಿ ಇದೀಗ ಭಾರೀ ಗಾತ್ರದ ವಾಹನ ಹೊರತುಪಡಿಸಿ ಉಳಿದ ವಾಹನಗಳು ತೆರಳಲು ಅವಕಾಶ ಕಲ್ಪಿಸಿಕೊಡಲಾಗಿದೆ. ಹೊನ್ನಾವರ ಭಾಗದಲ್ಲೂ ರಸ್ತೆಯನ್ನು ಸರಿಪಡಿಸಲಾಗುತಿದ್ದು, ನಾಳೆಯಿಂದ ಭಾರೀ ಗಾತ್ರದ ವಾಹನಗಳು ತೆರಳಲು ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.
Advertisement
Advertisement
ಕಳೆದ ತಿಂಗಳು ಸುಮಾರು 500ಕ್ಕೂ ಹೆಚ್ಚು ಟ್ರಕ್ ಗಳು ಅಂಕೋಲದ ಬಾಳೆಗುಳಿ ಕ್ರಾಸ್ ನಲ್ಲಿಯೇ ಇರುವಂತೆ ಜಿಲ್ಲಾಡಳಿತ ಆದೇಶಿಸಿತ್ತು. ಇದಾದ ನಂತರ ಕೆಲವು ಟ್ರಕ್ ಗಳು ಅಂಕೋಲದಿಂದ ಹೊನ್ನಾವರ ಭಾಗ ಹಾಗೂ ಶಿರಸಿ ಭಾಗದ ಹೆದ್ದಾರಿ ಮೂಲಕ ಸಂಚಾರ ಪ್ರಾರಂಭ ಮಾಡಿದವು. ಆದರೆ ಹೊನ್ನಾವರ ಭಾಗದಲ್ಲಿ ಭಾರೀ ವಾಹನಗಳ ಸಂಚಾರದಿಂದ ಕೆಲವು ಕಡೆ ರಸ್ತೆಗಳು ಕುಸಿಯತೊಡಗಿದವು ಇದಲ್ಲದೇ ಶಿರಸಿ ಭಾಗಕ್ಕೆ ತೆರಳುವ ಘಟ್ಟ ಪ್ರದೇಶದಲ್ಲೂ ಟ್ರಕ್ ಗಳು ಜಾಮ್ ಆಗತೊಡಗಿದ್ದು, ಬೇರೆ ಭಾಗದಿಂದ ಕರಾವಳಿ ಭಾಗಕ್ಕೆ ಬರಬೇಕಾದ ಅಗತ್ಯ ವಸ್ತುಗಳು ಬಾರದೇ ಜನರು ಸಮಸ್ಯೆ ಅನುಭವಿಸುವಂತಾಗಿತ್ತು. ಈ ಕಾರಣದಿಂದ ಭಾರೀ ಗಾತ್ರದ ಟ್ರಕ್ ಗಳನ್ನು ಪೊಲೀಸ್ ಇಲಾಖೆ 14 ದಿನದಿಂದ ತಡೆದು ನಿಲ್ಲಿಸಿದೆ.