– ಪ್ರತಿ ರಾಜ್ಯದಲ್ಲಿ 70 ರಕ್ತದಾನ ಶಿಬಿರ, ಸಾಧ್ಯವಾದಷ್ಟು ಪ್ಲಾಸ್ಮಾ ದಾನಕ್ಕೆ ಒತ್ತು
– ಅಂಗವಿಕಲರಿಗೆ ಕೃತಕ ಕೈಕಾಲು, ಇತರೆ ಉಪಕರಣ ನೀಡಲು ತಯಾರಿ
– ಎಂದಿನಂತೆ ಸ್ವಚ್ಛತಾ ಕಾರ್ಯ, ಪ್ಲಾಸ್ಟಿಕ್ ನಿಷೇಧದ ಪ್ರತಿಜ್ಞೆ
ನವದೆಹಲಿ: ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವಾಗಿದ್ದು, ಅವರ 70ನೇ ಹುಟ್ಟುಹಬ್ಬವನ್ನು ‘ಸೇವಾ ಸಪ್ತಾಹ’ ಕಾರ್ಯಕ್ರಮದ ಮೂಲಕ ಹಲವು ಸಾಮಾಜಿಕ ಕಾರ್ಯಗಳ ಮೂಲಕ ಆಚರಿಸಲು ಬಿಜೆಪಿ ಸಿದ್ಧತೆ ನಡೆಸಿದೆ.
ಪ್ರತಿ ವರ್ಷ ಸ್ವಚ್ಛ ಭಾರತದ ಪರಿಕಲ್ಪನೆ ಹಿನ್ನೆಲೆ ಸ್ವಚ್ಛತಾ ಕಾರ್ಯಕ್ರಮದ ಮೂಲಕ ಅವರ ಹುಟ್ಟುಹಬ್ಬವನ್ನು ಬಿಜೆಪಿಯಿಂದ ಆಚರಿಸಲಾಗುತ್ತಿತ್ತು. ಈ ಬಾರಿ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಬಿಜೆಪಿ ಹಾಕಿಕೊಂಡಿದ್ದು, ಸೆಪ್ಟೆಂಬರ್ 14ರಿಂದ 20ರ ವರೆಗೆ ವಿವಿಧ ಬಗೆಯ ಕಾರ್ಯಕ್ರಮಗಳನ್ನು ಯೋಜಿಸಿದೆ. ಪ್ರಧಾನಿ ಮೋದಿ 70 ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆ ಸೆವೆಂಟಿ ಥೀಮ್ನಡಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ.
Advertisement
Advertisement
ದೇಶಾದ್ಯಂತ ಈ ಕಾರ್ಯಕ್ರಮಗಳನ್ನು ನಡೆಸಲು ಬಿಜೆಪಿ ಸಿದ್ಧತೆ ನಡೆಸಿದ್ದು, ಸೇವಾ ಸಪ್ತಾಹದ ಮೂಲಕ ಜಾರಿಗೆ ತರುತ್ತಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಎಲ್ಲ ರಾಜ್ಯದ ಬಿಜೆಪಿ ಆಯೋಜಿಸಬೇಕಾದ ಕಾರ್ಯಕ್ರಮಗಳ ಕುರಿತು ವಿವರ ನೀಡಿದ್ದಾರೆ.
Advertisement
ದೇಶಾದ್ಯಂತ ಪ್ರತಿ ಮಂಡಲದಲ್ಲಿ 70 ವಿಕಲಚೇತರಿಗೆ ಕೃತಕ ಕೈಕಾಲು ಹಾಗೂ ಇತರ ಉಪಕರಣಗಳನ್ನು ನೀಡುವುದು. 70 ಅಂಧರಿಗೆ ಕನ್ನಡಕ ವಿತರಿಸುವುದು. ಅಲ್ಲದೆ ಕೋವಿಡ್-19 ನಿಯಮವನ್ನು ಪಾಲಿಸಿ, 70 ಆಸ್ಪತ್ರೆಗಳು ಹಾಗೂ ಬಡವರ ಕಾಲೋನಿಗಳಿಗೆ ತೆರಳಿ ಹಣ್ಣು ಹಂಪಲು ವಿತರಿಸುವ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೆ.
Advertisement
ಸ್ಥಳೀಯ ಅಗತ್ಯತೆಗಳಿಗೆ ಅನುಗುಣವಾಗಿ ಆಸ್ಪತ್ರೆಗಳ ಮೂಲಕ 70 ಕೊರೊನಾ ರೋಗಿಗಳಿಗೆ ಪ್ಲಾಸ್ಮಾ ದಾನದ ವ್ಯವಸ್ಥೆ ಮಾಡುವುದು. ಅಲ್ಲದೆ ಬಿಜೆಪಿ ಸಂಸದ ಪೂನಂ ಮಹಾಜನ್ ಅವರ ನೇತೃತ್ವದಲ್ಲಿ ಬಿಜೆಪಿ ಯುವ ಮೋರ್ಚಾದ ವತಿಯಿಂದ ದೊಡ್ಡ ರಾಜ್ಯಗಳಲ್ಲಿ ಕನಿಷ್ಟ 70 ರಕ್ತ ದಾನ ಶಿಬಿರಗಳನ್ನು ಆಯೋಜಿಸುವುದು. ಸಣ್ಣ ರಾಜ್ಯಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ಕನಿಷ್ಟ ಒಂದು ರಕ್ತ ದಾನ ಶಿಬಿರ ನಡೆಸಬೇಕು. ಅಲ್ಲದೆ ಪ್ರತಿ ಬೂತ್ನಲ್ಲಿ 70 ಸಸಿಗಳನ್ನು ನೆಡುವ ಕಾರ್ಯಕ್ರಮಗಳನ್ನು ಬಿಜೆಪಿ ಕಾರ್ಯಕರ್ತರು ಕೈಗೊಳ್ಳಲು ಯೋಜಿಸಲಾಗಿದೆ.
ಪ್ರತಿ ಜಿಲ್ಲೆಯ 70 ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸುವುದು ಹಾಗೂ ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿರುವ ಒಂದು ಬಾರಿ ಬಳಸುವ ಪ್ಲಾಸ್ಟಿಕ್ ತೊರೆಯವ ಪ್ರತಿಜ್ಞೆ ಮಾಡಬೇಕೆಂದು ಯೋಜಿಸಲಾಗಿದೆ.
ಸೆಪ್ಟೆಂಬರ್ 17ರಂದು ವೆಬಿನಾರ್ಗಳ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ‘ಲೈಫ್ ಆ್ಯಂಡ್ ಮಿಷನ್’ ಕುರಿತು 70 ವರ್ಚುವಲ್ ಕಾನ್ಫರೆನ್ಸ್ ಗಳನ್ನು ಆಯೋಜಿಸಲು ಸಿದ್ಧತೆ ನಡೆಸಿದ್ದು, ಈ ವರ್ಷ 70 ಸ್ಲೈಡ್ಗಳನ್ನು ಪ್ರದರ್ಶಿಸಲು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರಾತು ನೀಡಲು ಚಿಂತಿಸಲಾಗಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಬಿಜೆಪಿ ಸಿದ್ಧತೆ ನಡೆಸಿದೆ.