– ತಾಲೂಕು ಆಡಳಿತದಿಂದ ಆದೇಶ
ಶಿವಮೊಗ್ಗ: ದಕ್ಷಿಣ ಭಾರತದ ವಾರಾಣಸಿ ಎಂದೇ ಖ್ಯಾತಿ ಪಡೆದಿರುವ ತುಂಗಾ-ಭದ್ರಾ ನದಿಯ ಸಂಗಮವಾಗಿರುವ ಕೂಡ್ಲಿಯಲ್ಲಿ ಈ ಬಾರಿ ಇತಿಹಾಸ ಪ್ರಸಿದ್ಧ ಪುಷ್ಕರ ಸ್ನಾನಕ್ಕೆ ಬ್ರೇಕ್ ಬಿದ್ದಿದೆ. ಕೋವಿಡ್-19 ಸೋಂಕು ಹರಡುವ ಭೀತಿ ಹಿನ್ನೆಲೆ ಈ ಬಾರಿಯ ಪುಷ್ಕರವನ್ನು ನಿಷೇಧಿಸಿ ತಾಲೂಕು ದಂಡಾಧಿಕಾರಿ ಆದೇಶ ಹೊರಡಿಸಿದ್ದಾರೆ.
Advertisement
ಪ್ರಾಚೀನ ಕಾಲದಿಂದಲೂ ಪೂಜೆ, ಧ್ಯಾನ ಮತ್ತು ಶಾಂತಿಯ ಪ್ರಮುಖ ತಾಣವಾಗಿರುವ ಶಿವಮೊಗ್ಗ ಜಿಲ್ಲೆಯ ಕೂಡ್ಲಿಯಲ್ಲಿ ತುಂಗಾ ಮತ್ತು ಭದ್ರಾ ಎರಡು ನದಿಗಳ ಸಂಗಮವಾಗಿದೆ. ದೇಶದಲ್ಲಿ ನದಿಗಳು ಸೇರುವ ಪವಿತ್ರ ಸ್ಥಳಗಳಲ್ಲಿ ಪುಷ್ಕರ ನಡೆಯುವುದು ಸಂಪ್ರದಾಯವಾಗಿದ್ದು, ಇಂದಿನಿಂದ 12 ದಿನಗಳ ಕಾಲ ಈ ಪುಷ್ಕರ ಸಂಭ್ರಮ ನಡೆಯುತ್ತದೆ. ಗುರುವು ಇಂದಿನಿಂದ ತನ್ನ ಪಥ ಬದಲಾಯಿಸುತ್ತಿದ್ದು, ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. ಈ ಪುಣ್ಯ ದಿನಗಳಂದು ಸಾವಿರಾರು ವರ್ಷಗಳ ಪುರಾಣ ಪ್ರಸಿದ್ಧ ತಾಣವಾಗಿರುವ ಕೂಡ್ಲಿಯಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಪುಷ್ಕರ ಸ್ನಾನ ನಡೆಯುವುದು ಸಂಪ್ರದಾಯವಾಗಿದೆ. ಆದರೆ ಈ ಬಾರಿ ಇತಿಹಾಸದಲ್ಲೇ ಮೊದಲ ಬಾರಿಗೆ ಬ್ರೇಕ್ ಬಿದ್ದಿದೆ.
Advertisement
Advertisement
ಇಂದಿನಿಂದ ಆರಂಭವಾಗಬೇಕಿದ್ದ ಪುಷ್ಕರ ಸ್ನಾನಕ್ಕೆ ನಿರ್ಬಂಧ ಹೇರಲಾಗಿದ್ದು, ಕೂಡ್ಲಿ ಕ್ಷೇತ್ರಕ್ಕೆ ಹೊಂದಿಕೊಂಡಂತೆ ಇರುವ ಗ್ರಾಮ ಪಂಚಾಯಿತಿ ಈ ಬಾರಿಯ ಪುಷ್ಕರವನ್ನು ನಿಷೇಧಗೊಳಿಸಲು ಈಗಾಗಲೇ ತೀರ್ಮಾನಿಸಲಾಗಿದೆ. ಹೊರಗಿನಿಂದ ಬರುವವರಿಗೆ ಪ್ರವೇಶ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಇಂದು ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಪುಷ್ಕರ ಸ್ನಾನ ಮಾಡಿದರು.
Advertisement
ರಾಜ್ಯದ ವಿವಿಧೆಡೆಯಿಂದ ಜನ ಆಗಮಿಸಿ ಪುಷ್ಕರದ ದಿನಗಳಲ್ಲಿ ಸ್ನಾನ ಮಾಡಲು ಆಗಮಿಸುತ್ತಿದ್ದರು. ಇಂದಿನ ಯೋಗದ ದಿನ ಸಂಗಮದಲ್ಲಿ ಸ್ನಾನ ಮಾಡಿದರೆ ರೋಗ-ರುಜಿನಗಳು ಮಾಯವಾಗುತ್ತದೆ ಎಂಬುದು ಭಕ್ತರ ನಂಬಿಕೆ. ಆದರೆ ಇದಕ್ಕೆ ಇದೀಗ ಬ್ರೇಕ್ ಬಿದ್ದಿದೆ. ತಾಲೂಕು ಆಡಳಿತದ ಕ್ರಮಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಧಾರ್ಮಿಕ ಪ್ರಾಮುಖ್ಯತೆ ಹೊಂದಿರುವ ಪುಷ್ಕರ ನಡೆಸಲೇಬೇಕೆಂದು ಒತ್ತಾಯಿಸುತ್ತಿದ್ದಾರೆ.