Connect with us

Bengaluru City

ಪ್ರತಿಪಕ್ಷಗಳು ಟೀಕೆ ನಿಲ್ಲಿಸಿ, ಸಲಹೆ ನೀಡಲಿ – ಎಲ್ಲ ದಾಖಲೆ ನೀಡ್ತೇವೆ ಎಂದ ಸಿಎಂ

Published

on

– ಖರೀದಿಯಲ್ಲಿ ಯಾವುದೇ ಅಕ್ರಮ ಎಸಗಿಲ್ಲ
– 24 ಗಂಟೆಯ ಒಳಗಡೆ ದಾಖಲೆ ನೀಡುತ್ತೇವೆ

ಬೆಂಗಳೂರು: ಪ್ರತಿಪಕ್ಷಗಳು ಟೀಕೆ ಮಾಡುವುದನ್ನು ಬಿಟ್ಟು ಕೊರೊನಾ ನಿಯಂತ್ರಿಸಲು ಸಲಹೆ ನೀಡಲಿ ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಸಂಜೆ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದಿಂದ ಮಾತ್ರ ಕೊರೊನಾ ನಿಯಂತ್ರಿಸಲು ಸಾಧ್ಯವಿಲ್ಲ. ಜನರ ಮತ್ತು ಪ್ರತಿಪಕ್ಷಗಳ ಸಹಕಾರ ಅಗತ್ಯವಿದೆ. ಎಲ್ಲರೂ ಸೇರಿದಾಗ ಮಾತ್ರ ಕೊರೊನಾ ನಿಯಂತ್ರಿಸಬಹುದು ಎಂದು ಕೇಳಿಕೊಂಡರು.

ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕೊರೊನಾ ಹೆಚ್ಚಾಗಿದೆ. ಆ ಜಿಲ್ಲೆಗಳ ಡಿಸಿಗಳ ಜೊತೆ ಮಾತಾಡಿದ್ದೇನೆ. ಈ ಸಂದರ್ಭದಲ್ಲಿ ಪ್ರತಿಪಕ್ಷಗಳು ಟೀಕೆ, ಟಿಪ್ಪಣಿ ಬದಲು ಸಲಹೆ ಕೊಡಲಿ. ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಯಾರೇ ಆದರೂ ಸಲಹೆ ಕೊಡಲಿ. ಸಲಕರಣೆಗಳ ಖರೀದಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಪ್ರತಿಪಕ್ಷಗಳಿಗೆ ಯಾವುದೇ ಪ್ರಶ್ನೆಗಳಿದ್ದರೆ ನಮ್ಮನ್ನು ಕೇಳಲಿ. 24 ಗಂಟೆಯ ಒಳಗಡೆ ನಾವು ಖರೀದಿಸಿದ ಎಲ್ಲ ಸಾಮಾಗ್ರಿಗಳ ಬಿಲ್ ದಾಖಲೆಯನ್ನು ನೀಡುತ್ತೇವೆ ಎಂದು ಹೇಳಿದರು.

ಸಿದ್ದರಾಮಯ್ಯ ಇಂದು ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿರುವ(ಬಿಐಇಸಿ) ಕೋವಿಡ್ ಆರೈಕಾ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ನಾನು ಅಲ್ಲಿಗೆ ಪರಿಶೀಲನೆ ಮಾಡಿ ಸಲಕರಣೆಗಳ ಖರೀದಿಗೆ ಸೂಚಿಸಿದ್ದೆ. 7.15 ಕೋಟಿ ರೂಪಾಯಿಗೆ ಉಪಕರಣಗಳ ಖರೀದಿ ಮಾಡಲಾಗಿದೆ ಎಂದರು.

ಬಿಐಇಸಿಯಲ್ಲಿ ಸೋಂಕಿತರು ಬಳಸಿದ ಹಾಸಿಗೆಗಳನ್ನು ಬೆಂಕಿಯಲ್ಲಿ ಸುಡಲಿದ್ದೇವೆ. ಮಂಚಗಳನ್ನಷ್ಟೇ ಖರೀದಿ ಮಾಡಿ ಬಳಕೆ ಮಾಡುತ್ತೇವೆ. ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಒಂದು ರೂ. ಸಹ ಅವ್ಯವಹಾರ ಆಗಿಲ್ಲ. ಈ ವಿಚಾರದಲ್ಲಿ ಪ್ರತಿಪಕ್ಷಗಳಿಗೆ ಯಾವುದೇ ರೀತಿಯ ಗೊಂದಲ ಬೇಡ. ಬೇರೆ ಬೇರೆ ಜಿಲ್ಲೆಗಳಲ್ಲಿ ಜನ ನರಳುತ್ತಿದ್ದರು. ಈ ಸಂದರ್ಭದಲ್ಲಿ ಪ್ರತಿಪಕ್ಷಗಳು ಗೊಂದಲ ಸೃಷ್ಟಿಸಬಾರದು ಎಂದು ಮನವಿ ಮಾಡಿಕೊಂಡರು.

ಕಳೆದ ನಾಲ್ಕೈದು ತಿಂಗಳಿಂದ ಮಾಧ್ಯಮಗಳಿಂದ ಸಂಪೂರ್ಣ ಬೆಂಬಲ ಸಿಕ್ಕಿದೆ. ಮಾದ್ಯಮಗಳ ಪಾತ್ರ ಮುಂದೆ ದೊಡ್ಡದಾಗಿ ಅಗತ್ಯವಿದೆ. ಮಾಧ್ಯಮಗಳ ಸಹಕಾರ ಭವಿಷ್ಯದಲ್ಲಿ ನಮಗೆ ಅಗತ್ಯ ಇದೆ. ಮಾಧ್ಯಮ ಸ್ನೇಹಿತರು ಇನ್ನೂ ಹೆಚ್ಚಿನ ನೆರವು ಕೊಡಬೇಕು. ಜನರಲ್ಲಿ ಮಾಧ್ಯಮಗಳು ಧೈರ್ಯ ತುಂಬಬೇಕು ಎಂದು ಹೇಳಿದರು.

ಅಗತ್ಯ ಅಂಬುಲೆನ್ಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಬೂತ್‍ಗಳಲ್ಲಿ ಅಂಬುಲೆನ್ಸ್‌ಗಳ ವ್ಯವಸ್ಥೆ ಮಾಡುತ್ತೇವೆ. ಬೆಂಗಳೂರಿನಲ್ಲಿ ನಾಳೆಯಿಂದ ಲಾಕ್‍ಡೌನ್ ಇರಲ್ಲ. ಸರ್ಕಾರಕ್ಕೆ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಬೇಕು. ಹೀಗಾಗಿ ಜನರು ಜನ ಸಹಕಾರ ಕೊಡಬೇಕು ಎಂದು ಮನವಿ ಮಾಡಿಕೊಂಡರು.

ಮಾಸ್ಕ್ ಧರಿಸದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಕೊರೊನಾ ನಿಯಂತ್ರಣಕ್ಕಾಗಿ ಎಲ್ಲರ ಸಹಕಾರ ಬೇಕು. ನಾನು ನಿತ್ಯ ಅಧಿಕಾರಿಗಳ ಜೊತೆ ಚರ್ಚೆ, ಸಮಾಲೋಚನೆ ಮಾಡುತ್ತಿದ್ದೇನೆ. ನಮ್ಮ ಶ್ರಮವಹಿಸಿ ಕೊರೊನಾ ನಿಯಂತ್ರಿಸಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಒಂದು ದಿನನೂ ನಾನು ಮನೆಯಲ್ಲಿ ಕೂತಿಲ್ಲ. ಕೊರೊನಾಗೆ ಲಾಕ್‍ಡೌನ್‍ಗೆ ಪರಿಹಾರ ಅಲ್ಲ. ಬೆಂಗಳೂರಿನಲ್ಲಿ ಇನ್ಮುಂದೆ ಲಾಕ್‍ಡೌನ್ ಇರಲ್ಲ. ಬೆಂಗಳೂರು ಮಾತ್ರವಲ್ಲ ರಾಜ್ಯದ ಎಲ್ಲೂ ಲಾಕ್‍ಡೌನ್ ಇರಲ್ಲ. ಕಂಟೈನ್ಮೆಂಟ್ ವಲಯಗಳಲ್ಲಿ ಬಿಗಿಯಾದ ಕ್ರಮಗಳ ಪಾಲನೆಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಎಚ್ಚರಿಕೆ ನೀಡಿದರು.

Click to comment

Leave a Reply

Your email address will not be published. Required fields are marked *