
Advertisements
ಗದಗ: ಚಾಲಕನ ಅಜಾಗರೂಕತೆಯಿಂದ ಪೆಟ್ರೋಲ್ ಟ್ಯಾಂಕರ್ ಹರಿದು 20ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದು, 10 ಕ್ಕೂ ಹೆಚ್ಚು ಕುರಿಗಳಿಗೆ ಗಂಭೀರ ಗಾಯವಾಗಿದೆ.
ಜಿಲ್ಲೆಯ ಮುಂಡರಗಿ ತಾಲೂಕಿನ ಹೊಸಡಂಬಳ ಹಾಗೂ ಕದಂಪುರ ಮಧ್ಯೆ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹನುಮಂತ ಪೂಜಾರ ಅವರಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ. ರಾತ್ರಿ ವೇಳೆ ಕುರಿಗಳು ರಸ್ತೆ ದಾಟುವಾಗ ಗದಗ ನಿಂದ ಮುಂಡರಗಿ ಕಡೆಗೆ ವೇಗವಾಗಿ ಹೊರಟಿದ್ದ ಪೆಟ್ರೋಲ್ ಟ್ಯಾಂಕರ್ ಕುರಿಗಳ ಮೇಲೆ ಹರಿದಿದೆ. ಇದರಿಂದಾಗಿ ಕುರಿಗಳ ಮಾರಣಹೋಮವಾಗಿದೆ.
ವಾಹನದ ಚಕ್ರದಡಿ ಸಿಲುಕಿದ್ದ ಅನೇಕ ಕುರಿಗಳು ರಕ್ತಸಿಕ್ತವಾಗಿವೆ. ಘಟನೆ ಬಳಿಕ ಚಾಲಕ ಪರಾರಿ ಆಗುತ್ತಿದ್ದ. ಆಗ ಸ್ಥಳದಲ್ಲಿ ಸೇರಿದ್ದ ರೈತರು, ಸಾರ್ವಜನಿಕರು, ಸ್ಥಳಿಯರು ಚಾಲಕನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಹನ ಚಾಲಕ ಹಾಗೂ ಟ್ಯಾಂಕರ್ ನ್ನು ವಶಕ್ಕೆ ಪಡೆದಿದ್ದಾರೆ. ಕುರಿಗಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.