ಮಂಡ್ಯ: ಪುರುಷರಿಗೆ ಇಲ್ಲದ ಸೂಕ್ಷ್ಮತೆ ಮಹಿಳೆಯರಿಗಿದೆ. ಹೀಗಾಗಿ ಹೆಣ್ಣು ಮಕ್ಕಳು ಇಂದು ಎಲ್ಲ ಕ್ಷೇತ್ರಗಳನ್ನು ಆವರಿಸಿಕೊಂಡಿದ್ದಾರೆ ಎಂದು ಚಲನಚಿತ್ರ ನಿರ್ದೇಶಕ ಹಾಗೂ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಮಂಡ್ಯದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಕರ್ನಾಟಕ ಸಂಘ ಹಾಗೂ ಚಿರಂತ ಪ್ರಕಾಶನದಿಂದ ಡಾ.ಸುಮಾರಾಣಿಶಂಭು ಅವರ ಮೂರು ಕೃತಿಗಳ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಎಂತಹದ್ದೇ ಅಡೆತಡೆಗಳ ನಡುವೆಯೂ ಸಾಧಿಸುವ ಛಲ ಹೊಂದಿದ್ದಾರೆ. ಪೈಲೆಟ್, ಶಿಕ್ಷಕಿ, ಸಂಶೋಧಕಿಯಾಗಿಯೂ ಸಾಧನೆ ಮೆರೆದಿದ್ದಾರೆ. ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಚೈತನ್ಯ ಕ್ರಿಯಾಶೀಲರಾಗಿರುತ್ತಾರೆ. ಅಧಿಕಾರ ವಿಕೇಂದ್ರೀಕರಣ ಗ್ರಾಮ ಪಂಚಾಯತಿ ಬಂದ ನಂತರ ಹೆಣ್ಣು ಮಕ್ಕಳು ಪ್ರಚುರವಾದ ತೊಡಗಿದರು. ಅವರಿಗೆ ಅಸ್ಮಿತೆ ಮತ್ತು ಮಾತನಾಡುವ ಶಕ್ತಿ ಬಂತು ಎಂದು ತಿಳಿಸಿದರು.
Advertisement
ಹೈನುಗಾರಿಕೆ ಪ್ರತಿನಿತ್ಯ ಆರ್ಥಿಕ ಶಕ್ತಿ ತುಂಬುವ ಉದ್ಯಮವಾಗಿದೆ. ಹೆಣ್ಣು ಮಕ್ಕಳು ಕೂಡ ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಹಳ್ಳಿ ಹೆಣ್ಣು ಮಕ್ಕಳು ಎಷ್ಟೋ ನೋವುಗಳು ಇದ್ದರೂ ಅದನ್ನು ತಾಳಿಕೊಂಡೇ ಬದುಕುತ್ತಾರೆ. ದುಃಖ ದುಮ್ಮಾನಗಳ ನಡುವೆಯೇ ಬದುಕು ನಡೆಸುತ್ತಾರೆ. ತಮ್ಮ ಭಾವನೆಗಳನ್ನು ಹೊರ ಹಾಕಲು ಹಿಂಜರಿಯುತ್ತಾರೆ. ಪುರುಷ ಜಗತ್ತು ಕಿವುಡತ್ವ, ಅಂಧತ್ವ, ಜಡತ್ವ ಹೊಂದಿದ್ದು, ಸ್ತ್ರಿಯನ್ನು ಎರಡನೇ ದರ್ಜೆ ಎಂದು ಹೇಳುವ ನಾವು ಮತ್ತೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಪುರುಷರು ಹೆಣ್ಣು ಮಕ್ಕಳನ್ನೇ ಕೇಂದ್ರವಾಗಿಟ್ಟುಕೊಂಡು ಏಕೆ ಬೈಗುಳಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಬದಲಾದ ಕಾಲದಲ್ಲಿ ಇಂಥ ಸೂಕ್ಷ್ಮ ವಿಚಾರಗಳ ಬಗ್ಗೆ ಯೋಚಿಸಬೇಕು ಎಂದರು.