ಕಾರವಾರ: ಆಂಬುಲೆನ್ಸ್ ಇಲ್ಲದೇ ಐದು ಕಿಲೋಮೀಟರ್ ಜೋಲಿಯಲ್ಲಿ ಪಾರ್ಶ್ವವಾಯು ಪೀಡಿತ ರೋಗಿಯನ್ನು ಕಾಡಿನಲ್ಲೇ ಆಸ್ಪತ್ರೆಗೆ ಹೊತ್ತೊಯ್ದ ಮನ ಕಲಕುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವರೀಲಬೇಣಾದಲ್ಲಿ ನಡೆದಿದೆ.
ನೂರಾ ಪೊಕ್ಕ ಗೌಡ(70) ಎಂಬವರು ನಿನ್ನೆ ಪಾರ್ಶ್ವವಾಯುಗೆ ಒಳಗಾಗಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಬೇಕಿತ್ತು. ಆದರೆ ವರೀಲಬೇಣಾದಲ್ಲಿ ರಸ್ತೆ ಸಮರ್ಪಕವಾಗಿ ಇಲ್ಲದ ಕಾರಣ ಆಂಬುಲೆನ್ಸ್ ಬಂದಿರಲಿಲ್ಲ. ಹೀಗಾಗಿ ಕೊನೆಗೆ ಕಾಡುಹಾದಿಯಲ್ಲಿ ಐದು ಕಿಲೋಮೀಟರ್ ಜೋಲಿ ಹೊತ್ತು ಅಂಕೋಲಾ ನಗರಕ್ಕೆ ತಂದಿದ್ದಾರೆ. ಅಂಕೋಲದಲ್ಲಿ ಸಹ ಆಂಬುಲೆನ್ಸ್ ಸಿಗದ ಕಾರಣ ಖಾಸಗಿ ವಾಹನ ಮಾಡಿ ಮಂಗಳೂರಿಗೆ ಕರೆದೊಯ್ಯಲಾಗಿದ್ದು, ಈ ಮನ ಕಲಕುವ ದೃಶ್ಯ ಪಬ್ಲಿಕ್ ಟಿವಿಗೆ ದೊರತಿದೆ.
Advertisement
Advertisement
ಜಿಲ್ಲೆಯ ಹಲವು ಭಾಗದಲ್ಲಿ ನಗರ ಸಮೀಪವಿದ್ದರೂ ರಸ್ತೆಗಳು ಸಮರ್ಪಕವಾಗಿ ಇಲ್ಲದ ಕಾರಣ ಆಂಬುಲೆನ್ಸ್ ಗಳು ಬರಲು ನಿರಾಕರಿಸುತ್ತಾರೆ. ಇದಲ್ಲದೇ ಜಿಲ್ಲೆಯಲ್ಲಿ ಇರುವ 25 ಆಂಬುಲೆನ್ಸ್ ಗಳಲ್ಲಿ ಎಂಟು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಉಳಿದ ಆಂಬುಲೆನ್ಸ್ ಗಳು ಕೆಟ್ಟು ನಿಂತಿದೆ.
Advertisement
ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಸಿಗದೇ ಪರದಾಡುವಂತಾಗಿದ್ದು ಬಹುತೇಕ ಹಲವು ಹಳ್ಳಿಗಳಲ್ಲಿ ಜೋಲಿಯೇ ಆಂಬುಲೆನ್ಸ್ ನಂತಾಗಿದೆ. ಇನ್ನಾದರೂ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕಣ್ತೆರೆದು ಕೆಟ್ಟುಹೋದ ಆಂಬುಲೆನ್ಸ್ ಸರಿಪಡಿಸಿ, ರೋಗಗಳಿಗೆ ನೆರವಾಗಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.