ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟು ನಟಿಯಾಗಿ ಸಿನಿರಸಿಕರನ್ನು ರಂಜಿಸಿ, ಕಂಠದಾನ ಕಲಾವಿದೆಯಾಗಿ ಪ್ರಶಸ್ತಿಗಳನ್ನ ಮುಡಿಗೇರಿಸಿಕೊಳ್ಳುತ್ತ ಕಿರುತೆರೆ ಹಿರಿತೆರೆಯಲ್ಲಿ ಸಕ್ರಿರಾಗಿ ಛಾಫು ಮೂಡಿಸಿರುವ ನಟಿ ದೀಪಾ ಭಾಸ್ಕರ್ ತಮ್ಮ ಬಣ್ಣದ ಲೋಕದ ಸಕ್ಸಸ್ ಫುಲ್ ಪಯಣದ ಬಗ್ಗೆ ಒಂದಿಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಬನ್ನಿ ಏನ್ ಹೇಳಿದ್ದಾರೆ ನೋಡೋಣ.
Advertisement
• ಬಣ್ಣದ ಲೋಕದ ಸಕ್ಸಸ್ ಫುಲ್ ಪಯಣ ಆರಂಭವಾಗಿದ್ದು ಹೇಗೆ?
ಚಿಕ್ಕಲ್ಲಿದ್ದಾಗ ನಮ್ಮ ದೊಡ್ಡಪ್ಪ ಜಾಸ್ತಿ ಮಾಕ್ರ್ಸ್ ತೆಗೆದುಕೊಂಡು ಪಾಸಾದವರಿಗೆ ನೂರು ರೂಪಾಯಿ ಕೊಡುತ್ತಿದ್ರು. ಒಂದು ವರ್ಷ ನಾನು ನೂರು ರೂಪಾಯಿ ಗೆದ್ದಿದ್ದೆ. ಆ ಹಣದಲ್ಲಿ ಮನೆಯ ಹತ್ತಿರವಿದ್ದ ಎ.ಎಸ್. ಮೂರ್ತಿಯವರ ಮಕ್ಕಳ ಶಿಬಿರ ಬಿಂಬಕ್ಕೆ ನನ್ನನ್ನು ಸೇರಿಸಿದ್ರು. ಆಗ ನನಗೆ ಐದು ವರ್ಷ. ಅಲ್ಲಿ ನಟನೆ ಹಾಡು ಡಾನ್ಸ್ ಎಲ್ಲವನ್ನು ಕಲಿಯಲು ಆರಂಭಿಸಿದೆ. ಟೈಗರ್ ಪ್ರಭಾಕರ್ ಅವರ ಮಹೇಂದ್ರ ವರ್ಮ ಚಿತ್ರಕ್ಕೆ ಬಾಲನಟಿ ಬೇಕಾಗಿತ್ತು. ಅವರು ಎ.ಎಸ್.ಮೂರ್ತಿ ಅವರನ್ನ ಸಂಪರ್ಕ ಮಾಡಿ ಸಿನಿಮಾಗಾಗಿ ಆಡಿಷನ್ ನಡೆಸಿದ್ರು. ಅದರಲ್ಲಿ ನಾನು ಆಯ್ಕೆಯಾದೆ ಅದೇ ನಾನು ಬಾಲನಟಿಯಾಗಿ ನಟಿಸಿದ ಮೊಟ್ಟ ಮೊದಲ ಸಿನಿಮಾ. ಅಲ್ಲಿಂದ ಒಂದಾದ ನಂತರ ಒಂದು ಸಿನಿಮಾ, ಸೀರಿಯಲ್ ನಲ್ಲಿ ಬಾಲನಟಿಯಾಗಿ ನಟಿಸುತ್ತಲೇ ಹೋದೆ.
Advertisement
Advertisement
• ಸಿನಿಮಾದಲ್ಲಿ ನಟಿಯಾಗಿ ಮೊದಲ ಅವಕಾಶ ಸಿಕ್ಕಿದ್ದು ಯಾವಾಗ?
ಮೈ ಆಟೋಗ್ರಾಫ್ ಸಿನಿಮಾಕ್ಕೆ ನಟಿ ಮೀನಾ ಅವರಿಗೆ ಡಬ್ ಮಾಡಲು ವಾಯ್ಸ್ ಟೆಸ್ಟ್ ಗೆ ಹೋಗಿದ್ದೆ. ಆಗ ಸುದೀಪ್ ಸರ್ ನನ್ನನ್ನು ನೋಡಿ ಅವರ ತಂಡದವರ ಬಳಿ ಆಕ್ಟ್ ಮಾಡ್ತಾರಾ ಕೇಳಿ ಅಂತ ಹೇಳಿದ್ರಂತೆ. ನಾನು ಮೊದಲೇ ಕಲಾವಿದೆ ಎಂದು ತಿಳಿದಿದ್ದರಿಂದ ನನಗೆ ಮೈ ಆಟೋಗ್ರಾಫ್ ಚಿತ್ರದಲ್ಲಿ ಕಮಲಿ ಪಾತ್ರದಲ್ಲಿ ನಟಿಸಲು ಅವಕಾಶ ಸಿಕ್ತು. ಈ ಪಾತ್ರ ನನ್ನಗೆ ಸಿಕ್ಕಾಗ ನಾನು ಡಿಗ್ರಿ ಓದುತ್ತಿದ್ದೆ. ಅಲ್ಲಿಂದ ಒಂದಾದ ಮೇಲೆ ಒಂದರಂತೆ ಸಿನಿಮಾ ಆಫರ್ ಗಳು ಬರಲು ಆರಂಭವಾದ್ವು.
Advertisement
• ನಟಿಯಾಗಿದ್ದ ನೀವು ಕಂಠದಾನ ಕಲಾವಿದೆಯಾಗಿದ್ದು ಹೇಗೆ?
ನಿರ್ದೇಶಕ ದಿನೇಶ್ ಬಾಬು ಅವರ ದೀಪಾವಳಿ ಸಿನಿಮಾದಲ್ಲಿ ನಾನು ನಟಿಸಿದ್ದರಿಂದ ಅವರಿಗೆ ನಾನು ರಂಗಭೂಮಿ ಕಲಾವಿದೆ, ಡಾನ್ಸರ್ ಎಂಬುದು ತಿಳಿದಿತ್ತು. ಪುನೀತ್ ರಾಜ್ ಕುಮಾರ್ ಅವರಿಗೆ ಅಭಿ ಸಿನಿಮಾ ನಿರ್ದೇಶನ ಮಾಡುವಾಗ ದಿನೇಶ್ ಬಾಬು ಅವರು ನಾಯಕ ನಟಿ ರಮ್ಯಾ ಅವರಿಗೆ ವಾಯ್ಸ್ ನೀಡಲು ನನ್ನ ಬಳಿ ಕೇಳಿದ್ರು. ವಾಯ್ಸ್ ಟೆಸ್ಟ್ ಮಾಡಿದಾಗ ನನ್ನ ದನಿ ಅವರಿಗೆ ಓಕೆಯಾಯ್ತು. ಅಲ್ಲಿಂದ ರಮ್ಯ ಅವರ ಪ್ರತಿ ಸಿನಿಮಾಗಳಿಗೂ ಡಬ್ಬಿಂಗ್ ಮಾಡೋದು ಖಾಯಂ ಆಯ್ತು, ಅವರ ಹಾಗೆ ನನ್ನ ವಾಯ್ಸ್ ಕೂಡ ಫೇಮಸ್ ಆಯ್ತು, ಹೆಸರು ತಂದು ಕೊಡ್ತು. ಮುಂದೆ ಜೋಗಿ, ಮುಂಗಾರುಮಳೆ, ದುನಿಯಾ ಹೀಗೆ ಒಂದಕ್ಕಿಂತ ಒಂದು ಹಿಟ್ ಸಿನಿಮಾಗಳಿಗೆ ನಾನು ಕಂಠದಾನ ಮಾಡುತ್ತಾ ಹೋದೆ ಅವಾರ್ಡ್ ಗಳು ಬರುತ್ತಾ ಹೋದ್ವು. ಇಲ್ಲಿಯವರೆಗೆ ಸುಮಾರು 500 ಸಿನಿಮಾಗಳಿಗೆ ನಾನು ಕಂಠದಾನ ಮಾಡಿದ್ದೇನೆ.
• ಚಿಕ್ಕಂದಿನಲ್ಲೇ ಅಪಾರ ಅವಕಾಶಗಳು, ಪ್ರಶಸ್ತಿಗಳು ನಿಮ್ಮನ್ನರಿಸಿ ಬಂತು ಹೀಗಿದ್ದೂ ನೀವು ಎಲ್ಲಿಯೂ ಓದುವುದನ್ನು ನಿಲ್ಲಿಸಲಿಲ್ಲ?
ಹೌದು. ನಾನು ಚಿಕ್ಕಂದಿನಿಂದಲೇ ಕಲಾವಿದೆಯಾಗಿ ಗುರುತಿಸಿಕೊಂಡಿದ್ರು ಸಹ ನನ್ನ ಮನೆಯಲ್ಲಿ ನನಗೆ ಮೊದಲ ಪ್ರಾಶಸ್ತ್ಯ ನೀಡುತ್ತಿದ್ದುದ್ದು ಓದಿಗೆ. ಒಂದು ಹಂತದ ಓದಿನ ನಂತರ ನೀನು ಸಂಪೂರ್ಣ ಕಲೆಯಲ್ಲೇ ತೊಡಗಿಸಿಕೊ ಅಲ್ಲಿವರೆಗೂ ವಿದ್ಯಾಭ್ಯಾಸ ನಿನ್ನ ಮೊದಲ ಆಧ್ಯತೆಯಾಗಿರಬೇಕು ಎಂದು ಮೊದಲಿನಿಂದಲೂ ಹೇಳುತ್ತಿದ್ರು. ಇದ್ರಿಂದ ನಾನು ಬಿಕಾಂ ಮುಗಿಸೋವರೆಗೆ ಕಲೆಯನ್ನು ಒಂದು ಹವ್ಯಾಸವಾಗಿ ಇಟ್ಟುಕೊಂಡಿದ್ದೆ. ಬಿಕಾಂ ಮುಗಿದ ಬಳಿಕ ನಾನು ನಟನೆ, ಡಾನ್ಸ್, ಡಬ್ಬಿಂಗ್ ಇದೆಲ್ಲವನ್ನು ಪ್ರೊಫೇಷನ್ ಆಗಿ ತೆಗೆದುಕೊಂಡೆ. ಹಾಗಾಗಿ ಓದಿಗೆ ಯಾವ ಸಮಸ್ಯೆ ಆಗಲಿಲ್ಲ.
• ಬಹುಮುಖ ಪ್ರತಿಭೆ ನೀವು. ನಟನೆ, ಡಬ್ಬಿಂಗ್, ನೃತ್ಯ, ನಾಟಕ ಎಲ್ಲದರಲ್ಲೂ ಪಾಲ್ಗೊಳ್ಳುತ್ತಿದ್ರಿ ಜೊತೆಗೆ ವಿಧ್ಯಾಭ್ಯಾಸ ಹೇಗೆ ನಿಭಾಯಿಸಿದ್ರಿ?
ಒಮ್ಮೊಮ್ಮೆ ನನಗೂ ಆಶ್ಚರ್ಯ ಆಗುತ್ತೆ ನಾನಿದನ್ನೆಲ್ಲ ಹೇಗೆ ನಿಭಾಯಿಸಿದೆ ಎಂದು. ಆದ್ರೆ ನಾನು ಚಿಕ್ಕಂದಿನಿಂದಲೇ ತುಂಬಾ ಪ್ರತಿಭಾವಂತೆ ಎಂದು ನನ್ನ ಮನೆಯಲ್ಲಿ ಹೇಳುತ್ತಾರೆ. ಒಂದೇ ಬಾರಿಗೆ ಎಲ್ಲವನ್ನು ಗ್ರಹಿಸಿಕೊಳ್ಳುವ ಸಾಮಥ್ರ್ಯ ನನಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನಟನೆ, ಡಾನ್ಸ್ ಇವುಗಳ ಮೇಲೆ ಅಪಾರ ಆಸಕ್ತಿ ಇದ್ದಿದ್ದರಿಂದ ನಮ್ಮ ಮನೆಯಲ್ಲೂ ಇದಕ್ಕೆಲ್ಲ ನೀರೆರೆದು ಪೋಷಿಸಿದ್ರು. ಎಲ್ಲವೂ ನನ್ನ ಕುಟುಂಬದ ಸಹಕಾರದಿಂದ ಸಾಧ್ಯವಾಗಿದೆ ಅಂದ್ರೆ ತಪ್ಪಾಗೋದಿಲ್ಲ.
• ನಿಮ್ಮ ಪೋಷಕರಿಂದ ಸಿಕ್ಕ ಪ್ರೋತ್ಸಾಹದ ಬಗ್ಗೆ ಹೇಳಿ?
ಇವತ್ತು ಇಷ್ಟು ಹೆಸರು ಮಾಡಿದ್ದೇನೆ ಅಂದ್ರೆ ನನ್ನ ತಂದೆ ತಾಯಿಯೇ ಮುಖ್ಯ ಕಾರಣ. ಅವರ ಸಂಪೂರ್ಣ ಸಹಕಾರ ಪ್ರೋತ್ಸಾಹ ಇದ್ದಿದ್ದರಿಂದ ನಾನು ನನ್ನಿಷ್ಟದ ಕ್ಷೇತ್ರದಲ್ಲಿ ಯಶಸ್ವಿಯಾಗಿ ಸಾಗಲು ಸಾಧ್ಯವಾಯಿತು. ಅವರಿಗೆ ಚಿತ್ರರಂಗದ ಬಗ್ಗೆ ಅರಿವಿತ್ತು, ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಮೇಲೆ ಅವರಿಗೆ ಅಪಾರ ನಂಬಿಕೆ ಇತ್ತು. ಹಾಗಾಗಿ ಅವರು ನನ್ನ ಪ್ರತಿ ಹಂತದಲ್ಲೂ ಜೊತೆ ನಿಂತು ಸಂಪೂರ್ಣ ಬೆಂಬಲ ನೀಡಿದ್ರು. ಮದುವೆಯಾದ ಮೇಲೂ ನನ್ನ ಗಂಡನ ಮನೆಯಲ್ಲೂ ಅಷ್ಟೇ ಸಹಕಾರ, ಬೆಂಬಲ ನನಗೆ ಸಿಕ್ಕಿದೆ.
• ಸುಬ್ಬಲಕ್ಷ್ಮಿ ಸಂಸಾರ ನಿಮ್ಮ ಕಲಾ ಬದುಕಿಗೆ ಹೊಸ ಮೆರುಗು ನೀಡಿತು ಅಲ್ವಾ?
ಖಂಡಿತಾ ಹೌದು. ಸುಬ್ಬಲಕ್ಷ್ಮಿ ಸಂಸಾರ ನನ್ನ ಕಲಾ ಬದುಕಿಗೆ ಮತ್ತೊಂದು ಹೊಸ ಮುಕುಟ ನೀಡಿದೆ. ಅಪಾರ ಜನಮನ್ನಣೆಯನ್ನು ನನಗೆ ಈ ಧಾರಾವಾಹಿ ತಂದುಕೊಟ್ಟಿದೆ. ಆ ಪಾತ್ರದ ಮೂಲಕ ನಾನು ಕಿರುತೆರೆ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾದೆ. ಧಾರಾವಾಹಿಯಲ್ಲಿ ನನ್ನ ಡೈಲಾಗ್, ಹಳ್ಳಿ ಭಾಷೆ, ಮ್ಯಾನರಿಸಂ ಎಲ್ಲವೂ ನೋಡುಗರಿಗೆ ಕನೆಕ್ಟ್ ಆಯ್ತು. ಇದು ಕೇವಲ ನನ್ನೊಬ್ಬಳ ಗೆಲುವಲ್ಲ ಒಂದೊಳ್ಳೆ ತಂಡ, ನಿರ್ದೇಶನ, ಚಿತ್ರಕಥೆ, ಇವುಗಳೆಲ್ಲದರ ಗೆಲುವು. ಜೊತೆಗೆ ಒಂದೊಳ್ಳೆ ವಾಹಿನಿಯಲ್ಲಿ ಕೂಡ ಪ್ರಸಾರ ಆಗಿದ್ದರಿಂದ ಅದರ ತೂಕ ಕೂಡ ಹೆಚ್ಚಾಯಿತು.
• ಚಿಕ್ಕ ವಯಸ್ಸಿನಲ್ಲೇ ಯಶಸ್ಸು, ಪ್ರಶಸ್ತಿ, ಹೆಸರು ಎಲ್ಲವನ್ನೂ ಸಂಪಾದಿಸಿದ್ದೀರಿ. ಮುಂದಿನ ನಿಮ್ಮ ಕನಸುಗಳೇನು?
ನಾನು ಸಾಧಿಸಿದ್ದೇನೆ ಎಂದು ಯಾವತ್ತೂ ಅಂದುಕೊಂಡಿಲ್ಲ, ಸಾಧಿಸೋದು ತುಂಬಾ ಇದೆ. ಕಲೆಗೆ ನನ್ನಿಂದ ಇನ್ನೂ ಹೆಚ್ಚಿನದನ್ನು ನೀಡಬೇಕು ಎಂಬ ಮಹದಾಸೆ ಇದೆ. ಜೊತೆಗೆ ನನ್ನ ಸಮಾಜ, ನನ್ನ ಕುಟುಂಬ, ಸ್ನೇಹಿತರಿಗೆ, ಅಭಿಮಾನಿಗಳಿಗೆ ಎಲ್ಲರಿಗೂ ನನ್ನಿಂದ ಎಷ್ಟು ಸಾಧ್ಯವಾಗುತ್ತೋ ಅಷ್ಟು ಒಳ್ಳೆಯದನ್ನು ಮಾಡಬೇಕು ಎನ್ನುವುದೇ ನನ್ನ ಬಹುದೊಡ್ಡ ಕನಸು.
• ಈಗಲೂ ಜೀವನದಲ್ಲಿ ತುಂಬಾ ಚಾಲೆಂಜ್ ಅನ್ನಿಸೋದು ಯಾವುದು?
ನನಗೆ ಕಂಠದಾನ ಮಾಡೋದೇ ಒಂದು ದೊಡ್ಡ ಚಾಲೆಂಜ್. ಬೇರೆ ಬೇರೆ ನಟಿಯರಿಗೆ ಬೇರೆ ಬೇರೆ ರೀತಿಯಾಗಿ ವಾಯ್ಸ್ ಕೊಡೋದು ನಿಜಕ್ಕೂ ಸುಲಭದ ಮಾತಲ್ಲ. ಸ್ಕ್ರಿಪ್ಟ್ ಹೇಗಿದೆ, ನಿರ್ದೇಶಕರು ಯಾವ ಸಂದರ್ಭಕ್ಕೆ ಡೈಲಾಗ್ ಬರೆದಿದ್ದಾರೆ ಇದನ್ನೆಲ್ಲ ಅರ್ಥಮಾಡಿಕೊಂಡು ಡಬ್ ಮಾಡಬೇಕಾಗುತ್ತೆ. ಹಾರಾರ್, ಕಾಮಿಡಿ ಸಿನಿಮಾಗಳಿಗೆ ವಾಯ್ಸ್ ಮಾಡ್ಯೂಲೇಷನ್ ತುಂಬಾ ಮುಖ್ಯ ಹೊಸತನ ಇಲ್ಲ ಅಂದ್ರೆ ಪ್ರಯೋಜನ ಆಗೋದಿಲ್ಲ. ತುಂಬಾ ಜನ ಈ ಸಿನಿಮಾಗೆ ನೀವೇನಾ ವಾಯ್ಸ್ ಕೊಟ್ಟಿದ್ದು ಗೊತ್ತೇ ಆಗಲಿಲ್ಲ ಅಂದಾಗ ನನಗೆ ತುಂಬಾ ಹೆಮ್ಮೆಯನ್ನಿಸುತ್ತೆ. ಒಂದೇ ರೀತಿಯಾಗಿ ವಾಯ್ಸ್ ನೀಡುತ್ತಿಲ್ಲ ಎಂದು ಖುಷಿ ಪಡುತ್ತೇನೆ.
• ಕಲಾವಿದರಿಗೆ ಪ್ರತಿ ಬಾರಿಯೂ ಅವಕಾಶ ಸಿಗುತ್ತೆ ಅನ್ನೋದು ಅಸಾಧ್ಯವಾದ ಮಾತು. ಆದ್ರೆ ನೀವು ಆರಂಭದಿಂದ ಇಲ್ಲಿವರೆಗೂ ಕೈತುಂಬ ಅವಕಾಶಗಳನ್ನಿಟ್ಟುಕೊಂಡೇ ಸಾಗುತ್ತಿದ್ದೀರಾ. ಇದರ ಗುಟ್ಟೇನು?
ನಿಜಕ್ಕೂ ಇದಕ್ಕೆ ಉತ್ತರ ನನಗೂ ಗೊತ್ತಿಲ್ಲ. ಬಹುಶಃ ನಾನು ತುಂಬಾ ಅದೃಷ್ಟವಂತೆ ಅನ್ಸತ್ತೆ. ಈ ವಿಚಾರದಲ್ಲಿ ನನ್ನ ಕುಟುಂಬಕ್ಕೆ, ದೇವರಿಗೆ ಹಾಗೂ ನನ್ನ ಅಭಿಮಾನಿಗಳಿಗೆ ದೊಡ್ಡ ಧನ್ಯವಾದ ಹೇಳೋಕೆ ಇಷ್ಟ ಪಡ್ತೀನಿ. ಕೊನೆವರೆಗೂ ಇದನ್ನು ಸಾಧ್ಯವಾಗಿಸಿದ ಪ್ರತಿಯೊಬ್ಬರಿಗೂ ನಿಷ್ಠೆಯಿಂದ ಇರುತ್ತೇನೆ ಇಷ್ಟು ಮಾತ್ರ ನಾನು ಹೇಳಬಲ್ಲೆ.
• ಚಿತ್ರರಂಗಕ್ಕೆ ಬರುತ್ತಿರೋ ನವ ಕಲಾವಿದರಿಗೆ ನಿಮ್ಮ ಸಲಹೆ?
ಈಗಿನ ಜನರೇಷನ್ ಎಲ್ಲಾ ವಿಷಯಗಳಲ್ಲೂ ತುಂಬಾ ಕ್ಲೀಯರ್ ಅಂಡ್ ಸ್ಮಾರ್ಟ್ ಆಗಿದ್ದಾರೆ. ಬೇಕು ಬೇಡಗಳ ಬಗ್ಗೆ ಅವರಿಗೆ ಕ್ಲಾರಿಟಿ ಇದೆ. ಆದಾಗ್ಯೂ ನಾನು ಅವರಿಗೆ ಹೇಳಲು ಇಷ್ಟ ಪಡೋದು ಇಷ್ಟೇ, ಯಾವತ್ತೂ ನೀವು ಅಂದುಕೊಂಡಿದ್ದು ಆಗಿಲ್ಲ ಎಂದು ಒಂದೇ ಏಟಿಗೆ ಕೈಚೆಲ್ಲಬೇಡಿ. ತಾಳ್ಮೆಯಿಂದ ಕಾಯಿರಿ, ನಿರಂತರವಾದ ಪರಿಶ್ರಮ, ಪ್ರಯತ್ನವನ್ನು ಯಾವತ್ತೂ ನಿಲ್ಲಿಸಬೇಡಿ. ಯಾವುದೇ ಗಿಡವಾದ್ರೂ ಒಂದೇ ದಿನದಲ್ಲಿ ಮರ ಹೇಗೆ ಆಗೋದಿಲ್ವೋ ಹಾಗೆ ಅಂದುಕೊಂಡಿದೆಲ್ಲಾ ಒಮ್ಮೆಲೇ ಆಗೋದಿಲ್ಲ. ನಿರಂತರವಾದ ಪ್ರಯತ್ನ ಇರಬೇಕು ಆಗ ಎಲ್ಲವೂ ಸಾಧ್ಯ.
• ಸುಬ್ಬಲಕ್ಷಿ ಸಂಸಾರ ಧಾರಾವಾಹಿ ನಂತರ ಸೀರಿಯಲ್ ಸಿನಿಮಾಗಳಲ್ಲಿ ನೀವು ಕಾಣಿಸಿಕೊಳ್ಳುತ್ತಿಲ್ಲ?
ಮದುವೆಯಾದ ಐದು ತಿಂಗಳಿಗೆ ನಾನು ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿಯಲ್ಲಿ ನಟಿಸಲು ಒಪ್ಪಿಕೊಂಡೆ. ಹಾಗಾಗಿ ನನಗೆ ಕುಟುಂಬದ ಜೊತೆ ಸಮಯ ಕಳೆಯಲು ಆಗಲಿಲ್ಲ. ಈಗ ಸೀರಿಯಲ್ ಮುಕ್ತಾಯವಾಗಿದೆ ಫ್ಯಾಮಿಲಿ ಜೊತೆ ಒಂದಿಷ್ಟು ಸಮಯ ಕಳೆದು ಮತ್ತೆ ನಟನೆಗೆ ಮರಳಲು ತೀರ್ಮಾನಿಸಿದ್ದೇನೆ. ಆದ್ದರಿಂದ ಹೊಸ ಆಫರ್ ಗಳನ್ನು ನಾನು ಒಪ್ಪಿಕೊಂಡಿಲ್ಲ. ಸದ್ಯದ ಮಟ್ಟಿಗೆ ಡಬ್ಬಿಂಗ್ ಹಾಗೂ ನಾಟಕಗಳಲ್ಲಿ ತೊಡಗಿಸಿಕೊಂಡಿದ್ದೇನೆ.