ಬೆಂಗಳೂರು: ಮೂರು ವರ್ಷಗಳ ಅವಧಿಯ ಪದವಿ ಶಿಕ್ಷಣದಲ್ಲಿ ಭಾಷಾ ವಿಷಯಗಳನ್ನು ನಾಲ್ಕು ಸೆಮಿಸ್ಟರ್ ಗಳ ಅವಧಿಗಳಲ್ಲಿ ಕಲಿಸುತ್ತಿದ್ದು, ಅದನ್ನು ಒಂದು ವರ್ಷದ ಅವಧಿಯ ಎರಡು ಸೆಮಿಸ್ಟರ್ ಗಳಿಗೆ ಮಿತಿಗೊಳಿಸಿರುವುದು ಕನ್ನಡಕ್ಕೆ ಮಾಡಿದ ದ್ರೋಹ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಸಿದ್ದರಾಮಯ್ಯ ಅವರು, ಹೊಸ ಶಿಕ್ಷಣ ನೀತಿಯ ಭಾಗವಾಗಿ ಈಗ ಇರುವ ಮೂರು ವರ್ಷದ ಬದಲಾಗಿ ನಾಲ್ಕು ವರ್ಷದ ಪದವಿ ಕೋರ್ಸನ್ನು ಅಳವಡಿಸಲು ಉದ್ದೇಶಿಸಲಾಗಿದೆ.ಅದಕ್ಕೋಸ್ಕರ ಪಠ್ಯಕ್ರಮ ರಚನೆಗೆ ಸಂಬಂಧಪಟ್ಟಂತೆ ನೇಮಿಸಲಾಗಿದ್ದ ಕಾರ್ಯಪಡೆಯ ಪಠ್ಯಪುಸ್ತಕ ರಚನೆಯ ಉಪಸಮಿತಿಯು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಕನ್ನಡವನ್ನೂ ಒಳಗೊಂಡಂತೆ ಎಲ್ಲಾ ಭಾಷಾ ವಿಷಯಗಳನ್ನು ಕೇವಲ ಎರಡು ಸೆಮಿಸ್ಟರ್ಗಳಿಗೆ ಅಂದರೆ ಒಂದು ವರ್ಷಕ್ಕೆ ಮಾತ್ರ ಮಿತಿಗೊಳಿಸಿ ಶಿಫಾರಸ್ಸುಗಳನ್ನು ಮಾಡಿದೆ. ಈ ಶಿಫಾರಸ್ಸುಗಳು `ರಾಷ್ಟ್ರೀಯ ಶಿಕ್ಷಣ ನೀತಿಗೆ ವಿರುದ್ಧವಾಗಿವೆ’ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರ ವಜಾಕ್ಕೆ ರಾಜ್ಯಪಾಲರು ಶಿಫಾರಸ್ಸು ಮಾಡಬೇಕು – ಸಿದ್ದರಾಮಯ್ಯ
Advertisement
Advertisement
ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ಉದ್ದೇಶಗಳಲ್ಲಿ ದೇಶ ಭಾಷೆಗಳಿಗೆ ಪ್ರಾಮುಖ್ಯ ನೀಡಬೇಕು ಎಂಬ ಅಂಶವೂ ಇದೆ. ಆದರೆ ರಾಜ್ಯದ ಈ ಸಮಿತಿಯು ಕನ್ನಡದ ಪಾಲಿಗೆ ಮಹಾ ದ್ರೋಹವೆಸಗುವಂತಹ ಶಿಫಾರಸ್ಸುಗಳನ್ನು ಮಾಡಿದೆ ಎಂಬ ಆರೋಪಗಳನ್ನು ನಾಡಿನ ಹಿರಿಯರು ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಒಂದು ಸೆಮಿಸ್ಟರ್ನಲ್ಲಿ ಗರಿಷ್ಠವೆಂದರೆ 90 ದಿನಗಳ ಅವಧಿಯ ಬೋಧನೆ ಇರುತ್ತದೆ. ಪ್ರತಿ ವಿಷಯಕ್ಕೆ ಸಾಮಾನ್ಯವಾಗಿ ವಾರಕ್ಕೆ 4 ಗಂಟೆಯ ಅವಧಿಯಿರುತ್ತದೆ. ಒಂದು ಸೆಮಿಸ್ಟರ್ನಲ್ಲಿ ಒಂದು ವಿಷಯಕ್ಕೆ 48 ಗಂಟೆ ಬೋಧನಾ ಅವಧಿ ಇರುತ್ತದೆ. ಎರಡು ಸೆಮಿಸ್ಟರುಗಳಿಂದ ಗರಿಷ್ಠ 96 ಗಂಟೆಗಳು ಇರುತ್ತವೆ. ಕೇವಲ 96 ಗಂಟೆಗಳ ಅವಧಿಯಲ್ಲಿ ಯಾವ ವಿಷಯವನ್ನು ಕಲಿಸಲು ಸಾಧ್ಯ? ವಿಜ್ಞಾನ, ವಾಣಿಜ್ಯ, ಅರ್ಥಶಾಸ್ತ್ರ, ಕಾನೂನು ಮತ್ತು ತಾಂತ್ರಿಕ ಶಿಕ್ಷಣವನ್ನು ಕಲಿಯುವ ವಿದ್ಯಾರ್ಥಿ ತನ್ನ ಕಲಿಕೆಯುದ್ದಕ್ಕೂ ಬೌದ್ಧಿಕತೆಯನ್ನು ರೂಪಿಸಿಕೊಳ್ಳುವುದರ ಜೊತೆಗೆ ಆರೋಗ್ಯಕರವಾದ ಮನಸ್ಸನ್ನೂ ಕಟ್ಟಿ ಕೊಳ್ಳಬೇಕಾಗುತ್ತದೆ. ಹೀಗಿರುವಾಗ ಸರ್ಕಾರವು ವಿದ್ಯಾರ್ಥಿಗಳಿಗೆ ಭಾಷಾ ವಿಷಯಗಳನ್ನು ಕಲಿಯದಂತೆ ಮಾಡಿದರೆ ಅವರು ಜಗತ್ತಿನ ಶ್ರೇಷ್ಠ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಮುಂತಾದವುಗಳನ್ನು ಕಲಿಯುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.
Advertisement
ಕನ್ನಡದ ಶ್ರೇಷ್ಠ ಅಭಿವ್ಯಕ್ತಿಗಳಾದ ವಚನಗಳನ್ನು, ಪಂಪ, ರನ್ನ, ಕುಮಾರವ್ಯಾಸ ಮತ್ತು ಹರಿದಾಸರ ಕಾವ್ಯಗಳನ್ನು ವಿದ್ಯಾರ್ಥಿಗಳು ಕಲಿಯುವುದು ಹೇಗೆ? ಆಧುನಿಕ ಸಾಹಿತ್ಯದ ಸಂದರ್ಭದಲ್ಲಿ ಮೇರು ಸಾಹಿತಿಗಳಾದ ಕುವೆಂಪು, ಕಾರಂತ ಬೇಂದ್ರೆ, ಮಾಸ್ತಿ, ಮುಂತಾದವರು ರೂಪಿಸಿದ ಜೀವನೋತ್ಸಾಹದ ಬದುಕಿನ ದರ್ಶನಗಳನ್ನು ಮಕ್ಕಳು ಕಲಿಯುವುದು ಹೇಗೆ? ದೇಶದ ಸಂಸ್ಕೃತಿ, ಭಾಷೆ, ಮಹಾಕಾವ್ಯಗಳು, ಪುರಾಣಗಳು, ಕಲೆ, ಜನಪದ ಮುಂತಾದ ಪರಂಪರೆಗಳ ಬಗ್ಗೆ ಮಾತನಾಡುವ ಬಿಜೆಪಿಯು ಪದವಿ ಕಲಿಯುವ ನಮ್ಮ ವಿದ್ಯಾರ್ಥಿಗಳಿಗೆ ಭಾಷಾ ವಿಷಯಗಳನ್ನು ಕಲಿಯದಂತೆ ಮಾಡಿ ಕೇವಲ ಅದಾನಿ, ಅಂಬಾನಿಗಳಂಥ ಲೂಟಿಕೋರರ ಮಾದರಿಗಳನ್ನು ಕಲಿಸಲು ಹೊರಟಿದೆಯೆ ಎಂಬ ಅನುಮಾನ ಮೂಡುತ್ತಿದೆ. ಇದನ್ನೂ ಓದಿ: ಬಹುದಿನಗಳ ದೈಹಿಕ ಶಿಕ್ಷಕರ ಬೇಡಿಕೆಗೆ ಅಸ್ತು-ಸುರೇಶ್ ಕುಮಾರ್
ನಮ್ಮ ದೇಶಕ್ಕೆ ಜ್ಞಾನ ಇರುವ, ದುಡ್ಡು ಇರುವ ಜನರ ಅಗತ್ಯ ಎಷ್ಟಿದೆಯೋ ಅದಕ್ಕಿಂತ ಹೆಚ್ಚು ಮಾನವೀಯ ಹೃದಯ ಇರುವ ಮನುಷ್ಯರ ಅಗತ್ಯವಿದೆ. ಅಂಥದ್ದಕ್ಕೆ ವಿರುದ್ಧವಾದ ನಿಲುವುಗಳನ್ನು ರೂಪಿಸುವುದಕ್ಕಾಗಿ “ರಾಷ್ಟ್ರೀಯ ಶಿಕ್ಷಣ ನೀತಿ”ಯ ಹೆಸರನ್ನು ಬಳಸಿಕೊಳ್ಳಲಾಗುತ್ತಿದೆ. ಅದರ ಭಾಗವಾಗಿಯೇ ಉಪಸಮಿತಿಯವರು ಭಾಷೆಗಳ ಕಲಿಕೆಯನ್ನು ಎರಡು ಸೆಮಿಸ್ಟರುಗಳಿಗೆ ಇಳಿಸಿದ್ದಾರೆ. ಸರ್ಕಾರ ಈ ಸಮಿತಿಯ ಶಿಫಾರಸ್ಸುಗಳನ್ನು ಒಪ್ಪಿಕೊಂಡಿದ್ದೆ ಆದರೆ ಅದು ಬಹಳ ದೊಡ್ಡ ಮಟ್ಟದ ಕನ್ನಡ ದ್ರೋಹವಾಗುತ್ತದೆ, ಸರಿಪಡಿಸಲಾಗದ ಜನದ್ರೋಹವಾಗುತ್ತದೆ. ಪದವಿಯಲ್ಲಿ ಮಕ್ಕಳಿಗೆ ಭಾಷೆಯನ್ನು ಕಲಿಸುವಾಗ ವ್ಯಾಕರಣ, ಛಂದಸ್ಸುಗಳನ್ನು ಕಲಿಸುವುದಿಲ್ಲ. ಬದಲಾಗಿ ವಿದ್ಯಾರ್ಥಿಯ ಕೋರ್ಸಿಗೆ ಪೂರಕವಾದ ಪಠ್ಯವನ್ನೂ ಕಲಿಸಲಾಗುತ್ತದೆ. ಉದಾಹರಣೆಗೆ ವಿಜ್ಞಾನವನ್ನು ಕಲಿಯುವ ವಿದ್ಯಾರ್ಥಿಗಳು ಶಿವರಾಮ ಕಾರಂತರ, ಪೂರ್ಣಚಂದ್ರ ತೇಜಸ್ವಿಯವರ ಬರಹಗಳನ್ನು ಕಲಿಯುತ್ತಾರೆ. ಅದೇ ರೀತಿ ಗೆಲಿಲಿಯೋ, ಸ್ಟೀಫನ್ ಹಾಕಿಂಗ್, ಐನ್ಸ್ಟೆನ್, ಜಗದೀಶ್ ಚಂದ್ರ ಬೋಸ್, ಅಬ್ದುಲ್ ಕಲಾಂ ಮುಂತಾದವರ ಜೀವನದ ಸಾಧನೆಗಳನ್ನು, ಮಾದರಿಗಳನ್ನು ಮಾತೃಭಾಷೆಯಲ್ಲಿ ಕಲಿಯುತ್ತಾರೆ. ಹಾಗೆಯೇ ವಾಣಿಜ್ಯದ ವಿದ್ಯಾರ್ಥಿಗಳೂ ಸಹ ಯಶಸ್ವಿ ಸಂವಹನವನ್ನು ನಡೆಸುವುದು ಹೇಗೆ ಎಂಬುದನ್ನು ಕಲಿಯುತ್ತಾರೆ. ಹಾಗೂ ಉತ್ತಮ ಉದ್ಯಮಿ ಆಗುವುದರ ಜೊತೆಯಲ್ಲಿ ಉತ್ತಮ ಮನುಷ್ಯನಾಗುವುದು ಹೇಗೆ ಎಂಬುದನ್ನೂ ಕಲಿಯುತ್ತಾರೆ.
ಆದ್ದರಿಂದ 4 ವರ್ಷದ ಕೋರ್ಸಿಗೆ ಅನುಗುಣವಾಗಿ ಈಗ 3 ವರ್ಷಕ್ಕೆ ಅಥವಾ ಆರು ಸೆಮಿಸ್ಟರ್ಗಳಿಗೆ ಭಾಷಾ ವಿಷಯವನ್ನು ಬೋಧಿಸಲು ಕ್ರಮ ತೆಗೆದುಕೊಳ್ಳಬೇಕು. ಹಾಗೆ ಮಾಡುವುದರಿಂದ ನಮ್ಮ ಮಕ್ಕಳು ಉತ್ತಮ ಪರಂಪರೆಗಳಿಗೆ ವಾರಸುದಾರರಾಗಲು ಸಾಧ್ಯವಾಗುತ್ತದೆ. ಹಾಗೂ ರಾಷ್ಟ್ರಕ್ಕೆ ಬೇಕಾದ ಉತ್ತಮ ಮನುಷ್ಯರು ರೂಪುಗೊಳ್ಳಲು ಸಹಾಯವಾಗುತ್ತದೆ. ಅದರ ಬದಲಾಗಿ ರಾಷ್ಟ್ರೀಯ ಶಿಕ್ಷಣ ನೀತಿಯ ಹೆಸರಿನಲ್ಲಿ ಕನ್ನಡದ ಕುತ್ತಿಗೆಯನ್ನು ಹಿಸುಕುವ ಕೆಲಸಕ್ಕೆ ಸರ್ಕಾರ ಮುಂದಾಗುವುದಾದರೆ ಅದರ ವಿರುದ್ಧ ತೀವ್ರ ಸ್ವರೂಪದ ಪ್ರತಿಭಟನೆಗಳನ್ನು ನಡೆಸಬೇಕಾಗುತ್ತದೆ. ಈ ನಾಡು ಎಂದಿಗೂ ನಾಡು, ನುಡಿಗೆ ದ್ರೋಹ ಎಸಗಿದವರನ್ನು ಕ್ಷಮಿಸಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮಕ್ಕಳಿಗೆ ಉದ್ಯೋಗಾಧಾರಿತ ಶಿಕ್ಷಣವನ್ನು ರೂಪಿಸಬೇಕಾಗಿದೆ. ಹಾಗಾಗಿ ಹೊಸ ಪಠ್ಯಕ್ರಮವನ್ನು ರೂಪಿಸುವಾಗ ಸಂಬಂಧಿಸಿದ ತಜ್ಞರುಗಳ ಕುಳಿತು ಚರ್ಚಿಸಿ ಆರೋಗ್ಯಕರವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಜೊತೆಗೆ ನಾಡು-ನುಡಿಗಳನ್ನು ಕಟ್ಟಲು ಪೂರಕವಾಗುವ ಪಠ್ಯಗಳನ್ನು ರೂಪಿಸಬೇಕು. ಆರು ಸೆಮಿಸ್ಟರ್ ಗಳಲ್ಲೂ ಕನ್ನಡ ಭಾಷಾ ವಿಷಯವನ್ನು ಎಲ್ಲಾ ಪದವಿ ಮಕ್ಕಳಿಗೂ ಕಡ್ಡಾಯವಾಗಿ ಕಲಿಸಲೇಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.