ಹೈದರಾಬಾದ್: ಪತಿ ಜೊತೆ ಜಗಳವಾಡಿ ನೊಂದ ಪತ್ನಿ ತನ್ನ ಇಬ್ಬರು ಮಕ್ಕಳಿಗೆ ವಿಷ ಕೊಟ್ಟು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹೈದರಾಬಾದ್ ನ ಶಮೀರ್ ಪೇಟ್ ಎಂಬಲ್ಲಿ ಬುಧವಾರ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದಾಕೆಯನ್ನು ಪ್ರೀತಿ ಎಂದು ಗುರುತಿಸಲಾಗಿದೆ. ಈಕೆ ತನ್ನಿಬ್ಬರು ಅಪ್ರಾಪ್ತ ಮಕ್ಕಳಾದ ಗೌರವ್ ಹಾಗೂ ಕೌಶಿಕ್ ಗೆ ವಿಷ ನೀಡಿ ಕೊಲೆ ಮಾಡಿದ್ದಾಳೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸದ್ಯ ಪ್ರೀತಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ತನ್ನ ಮಕ್ಕಳಿಗೆ ಆಹಾರದಲ್ಲಿ ಕೀಟನಾಶಕ ನೀಡಿದ್ದಾಳೆ. ಅಲ್ಲದೆ ತಾನೂ ಅದನ್ನು ಸೇವನೆ ಮಾಡಿದ್ದಾಳೆ ಎಂಬುದಾಗಿ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ಬೆಳಕಿಗೆ ಬಂದಿದೆ. ಪ್ರೀತಿಯ ಪತಿ ಗೋಪಿನಾಥ್ ಕೆಲಸ ಮುಗಿಸಿ ಮನೆಗೆ ವಾಪಸ್ಸಾದಾಗ ಮಕ್ಕಳು ಹಾಗೂ ಪತ್ನಿ ಮನೆಯಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದರು.
ಸಣ್ಣ ವಿಚಾರಕ್ಕೆ ಜಗಳ:
ಮಂಗಳವಾರ ರಾತ್ರಿ ಗೋಪಿನಾಥ್ ಹಾಗೂ ಪ್ರೀತಿ ನಡುವೆ ಸಣ್ಣ ವಿಚಾರವೊಂದಕ್ಕೆ ಜಗಳವಾಗಿದೆ. ಆದರೆ ಬುಧವಾರ ಬೆಳಗ್ಗೆ ಗೋಪಿನಾಥ್ ಎಂದಿನಂತೆ ಕಚೇರಿಗೆ ತೆರಳಿದ್ದಾರೆ. ಹೀಗೆ ಹೋದ ಗೋಪಿನಾಥ್ ಸಂಜೆ ಮನೆಗೆ ವಾಪಸ್ಸಾದಾಗ ಪತ್ನಿ ಹಾಗೂ ಮಕ್ಕಳು ಪ್ರಜ್ಞಾಹೀನರಾಗಿ ಬಿದ್ದಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳು ಹಾಗೂ ಪತ್ನಿ ಬಿದ್ದಿರುವುದನ್ನು ನೋಡಿದ ಗೋಪಿನಾಥ್ ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲೀಸರು ಕೂಡ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸ್ಥಳೀಯರ ಬಳಿ ಹೇಳಿಕೆಗಳನ್ನು ಕೂಡ ಪಡೆದುಕೊಂಡಿದ್ದಾರೆ.
ಮಕ್ಕಳಿಬ್ಬರು ಮೃತಪಟ್ಟಿದ್ದು, ಪ್ರೀತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಪ್ರೀತಿ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಪ್ರಕರಣ ದಾಖಲಿಸಕೊಳ್ಳಲಾಗಿದೆ. ಅಲ್ಲದೆ ಆಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.