– ಕೈ ಮುಗಿದು ಮನವಿ ಮಾಡಿದರೂ ಕೇಳಿಲ್ಲ
ಹೈದರಾಬಾದ್: ಬೇರೆ ಜಾತಿಯ ಹುಡುಗನನ್ನು ಮದುವೆಯಾಗಲು ಬಯಸಿದ್ದಕ್ಕಾಗಿ ತಾಯಿಯೊಬ್ಬಳು ತನ್ನ ಮಗಳಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ಆದರೆ ಅದೇ ಬೆಂಕಿ ತಾಯಿಗೂ ಹೊತ್ತಿಕೊಂಡಿದ್ದು, ಇಬ್ಬರು ಮೃತಪಟ್ಟಿರುವ ಘಟನೆ ತೆಲಂಗಾಣದ ಶಡ್ನಗರದಲ್ಲಿ ನಡೆದಿದೆ.
ಮೃತರನ್ನು ತಾಯಿ ಚಂದ್ರಕಲಾ ಮತ್ತು ಮಗಳು ಶ್ರಾವಂತಿ ಎಂದು ಗುರುತಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ತಾಯಿ ಮತ್ತು ಮಗಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಶಡ್ನಗರ ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಏನಿದು ಪ್ರಕರಣ?
ಚಂದ್ರಕಲಾ ಮತ್ತು ಶ್ರಾವಂತಿ ಇಬ್ಬರೂ ಶಡ್ನಗರ ನಿವಾಸಿಗಳು. ಮೃತ ಶ್ರಾವಂತಿ ಅದೇ ಪ್ರದೇಶದ ಹುಡುಗನನ್ನು ಪ್ರೀತಿಸುತ್ತಿದ್ದು, ಹುಡುಗ ಬೇರೆ ಜಾತಿಯವನಾಗಿದ್ದನು. ಇವರಿಬ್ಬರ ಪ್ರೀತಿ ವಿಚಾರ ಪೋಷಕರಿಗೆ ಗೊತ್ತಾಗಿದೆ. ನಂತರ ಪೋಷಕರು ಮಗಳು ಶ್ರಾವಂತಿಗೆ ಬೈದು ಬುದ್ಧಿ ಹೇಳಿದ್ದಾರೆ. ಆದರೂ ಶ್ರಾವಂತಿ ಕೇಳಲಿಲ್ಲ. ಪದೇ ಪದೇ ಇದೇ ವಿಚಾರಕ್ಕೆ ಮಗಳು ಮತ್ತು ಪೋಷಕರ ನಡುವೆ ಅನೇಕ ಬಾರಿ ಜಗಳ ನಡೆಯುತ್ತಿತ್ತು.
Advertisement
Advertisement
ಇತ್ತೀಚೆಗೆ ತಾಯಿ ಚಂದ್ರಕಲಾ, ಮಗಳು ಶ್ರಾವಂತಿ ಜೊತೆ ಮತ್ತೆ ಜಗಳ ಮಾಡಿದ್ದಾಳೆ. ಆತನಿಂದ ದೂರವಿರು ಎಂದು ಎಚ್ಚರಿಕೆ ನೀಡಿದಳು. ಅದೇ ಸಮಯಕ್ಕೆ ತಂದೆ ಮನೆಗೆ ಬಂದು ಮಗಳ ಮೇಲೆ ಕೋಪ ಮಾಡಿಕೊಂಡು ಬೈದಿದ್ದನು. ಆದರೂ ಶ್ರಾವಂತಿ ಈ ಮದುವೆಗೆ ಒಪ್ಪಿಕೊಳ್ಳುವಂತೆ ಪೋಷಕರ ಬಳಿ ಕೈ ಮುಗಿದು ಮನವಿ ಮಾಡಿಕೊಂಡಳು. ಇದರಿಂದ ಆಕ್ರೋಶಗೊಂಡ ತಂದೆ ಅವಳಿಗೆ ಸೀಮೆಎಣ್ಣೆ ಬಾಟಲ್ ಕೊಟ್ಟು ಪ್ರಿಯಕರನನ್ನು ಮರೆತು ಹೋಗು ಅಥವಾ ನೀನೇ ಸಾಯಿ ಎಂದು ಹೇಳಿದ್ದಾನೆ.
ಈ ವೇಳೆ ಚಂದ್ರಕಲಾ ತನ್ನ ಪತಿಯಿಂದ ಸೀಮೆಎಣ್ಣೆಯನ್ನು ಕಿತ್ತುಕೊಂಡು ಮಗಳು ಶ್ರಾವಂತಿಯ ಮೇಲೆ ಸುರಿದು ಬೆಂಕಿ ಹಚ್ಚಿದ್ದಾಳೆ. ಆದರೆ ತಾಯಿಗೂ ಕೂಡ ಬೆಂಕಿ ಹೊತ್ತಿಕೊಂಡಿದ್ದು, ತಾಯಿ ಮತ್ತು ಮಗಳು ಶೇ.80ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದರು. ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯಕ್ಕೆ ಪೊಲೀಸರು ಈ ಕುರಿತು ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮಾಡುತ್ತಿದ್ದಾರೆ.