– ರಾಜ್ಯದಲ್ಲಿಯೂ ಇಫ್ಕೊ ನ್ಯಾನೋ ಯೂರಿಯಾ ಘಟಕ
ಬೆಂಗಳೂರು: ಗುಜರಾತಿನ ಕಲೋಲ್’ನಲ್ಲಿರುವ ಇಫ್ಕೋ ನ್ಯಾನೋ ಯುರೀಯಾ ಕಾರ್ಖಾನೆಯಿಂದ 500-ಎಂ.ಎಲ್. ಸಾಮಥ್ರ್ಯದ 16,600 ನ್ಯಾನೋ ಯೂರಿಯಾ ಬಾಟಲಿಗಳನ್ನು ಹೊತ್ತ ಮೊದಲ ವಾಹನ ಇಂದು ಕರ್ನಾಟಕದತ್ತ ಪಯಣ ಬೆಳೆಸಿತು. ನ್ಯಾನೋ ಯೂರಿಯಾ ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಉಂಟುಮಾಡುವುದು ಎಂದು ನಿರೀಕ್ಷಿಸಲಾಗಿದೆ. 500- ಎಂ.ಎಲ್. ನ್ಯಾನೋ ಯೂರಿಯಾ 45 ಕೆಜಿ ಮಾಮೂಲಿ ಯೂರಿಯಾಕ್ಕೆ ಸಮನಾಗಿದೆ. ಬೆಲೆ ಒಂದು ಬಾಟಲಿಗೆ 240 ರೂಪಾಯಿ. ಸಹಕಾರಿ ವಲಯದ ಇಫ್ಕೋ ಕಂಪನಿಯು ಗುಜರಾತಿನ ಕಲೋಲ್ ಸೇರಿದಂತೆ ದೇಶದಲ್ಲಿ ಈಗಾಗಲೇ 3 ಕಡೆ ನ್ಯಾನೋ ಯೂರಿಯಾ ಘಟಕ ಸ್ಥಾಪಿಸಿದ್ದು ಇನ್ನೂ ನಾಲ್ಕು ಕಡೆ ಹೊಸ ಘಟಕಗಳನ್ನು ತೆರೆಯಲಿದೆ. ಇಫ್ಕೋ ಈ ಹಂಗಾಮಿನಲ್ಲಿ 28 ಕೋಟಿ ಬಾಟಲಿ (500 ಎಂಎಲ್) ನ್ಯಾನೋ ಯೂರಿಯಾ ಉತ್ಪಾದಿಸಲಿದೆ.
Advertisement
ಬೆಂಗಳೂರಿನಲ್ಲಿ ಇಂದು ಸಾಯಂಕಾಲ ವಚ್ರ್ವಲ್ ಸಭೆ ಮೂಲಕ ಕಲೋಲ್’ನಿಂದ ಹೊರಟ ನ್ಯಾನೋ ಯೂರಿಯಾ ವಾಹನಕ್ಕೆ ಹಸಿರು ನಿಶಾನೆ ತೋರಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ಜಗತ್ತಿನಲ್ಲಿಯೇ ಪ್ರಪ್ರಥಮವಾಗಿ ನ್ಯಾನೋ ಯೂರಿಯಾ ಅಭಿವೃದ್ಧಿಪಡಿಸಿರುವ ಇಫ್ಕೋ ಕಂಪನಿಯನ್ನು ಅಭಿನಂದಿಸಿದರು.
Advertisement
ಕರ್ನಾಟಕದಲ್ಲಿಯೂ ನ್ಯಾನೋ ಯೂರಿಯಾ ಕಾರ್ಖಾನೆ ಸ್ಥಾಪಿಸಲು ಇಫ್ಕೋ ಆಸಕ್ತಿ ತೋರಿದ್ದು ಇನ್ನು 10 ದಿನದೊಳಗಾಗಿ ಬೆಂಗಳೂರು ವಿಮಾನ ನಿಲ್ದಾಣದ ಸಮೀಪ ಸೂಕ್ತವಾಗದ ಜಾಗವನ್ನು ಗುರುತಿಸಲಾಗುವುದು ಎಂದು ಕೇಂದ್ರ ಸಚಿವ ಸದಾನಂದ ಗೌಡ ಪ್ರಕಟಿಸಿದರು.
Advertisement
Advertisement
ನ್ಯಾನೋಗೊಬ್ಬರ ರೈತರಿಗೆ ವರವಾಗಲಿದೆ. ಪರಿಸರ ಸ್ನೇಹಿಯಾಗಿದ್ದು ಮಣ್ಣಿನ ಫಲವತ್ತದೆ ಉಳಿಸಿಕೊಳ್ಳಲು ಸಹಾಯಕವಾಗಲಿದೆ. ಒಂದೆಡೆ ಶೇಕಡಾ 8ರಿಂದ 15ರಷ್ಟು ಖರ್ಚು ಕಡಿಮೆಯಾಗಲಿದೆ. ಇನ್ನೊಂದೆಡೆ ಇಳುವರಿಯು 15ರಿಂದ 20 ಪ್ರತಿಶತ ಹೆಚ್ಚಾಗಲಿದೆ. ಇದರಿಂದ ದೇಶದ ರೈತರಿಗೆ ಈ ಸಲ ಸುಮಾರು 28 ಸಾವಿರ ಕೋಟಿ ಹೆಚ್ಚುವರಿ ಆದಾಯ ದೊರೆಯುವುದು ಎಂದು ಅಂದಾಜಿಸಲಾಗಿದೆ ಎಂದರು.
ದೇಶದಲ್ಲಿ ಪ್ರತಿವರ್ಷ ಸರಾಸರಿ 330 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಬಳಕೆಯಾಗುತ್ತದೆ. ಇದರಲ್ಲಿ ಸುಮಾರು 90 ಲಕ್ಷ ಟನ್ ಆಮದು ಮಾಡಿಕೊಳ್ಳುತ್ತೇವೆ. ನ್ಯಾನೋ ಯೂರಿಯಾ ಪ್ರವೇಶದಿಂದಾಗಿ ಈ ಸಲ ಮಾಮೂಲಿ ಯೂರಿಯಾ ಬಳಕೆಯಲ್ಲಿ ಶೇಕಡಾ 20ರಷ್ಟು ಕಡಿಮೆಯಾಗಬಹುದು ಎಂದು ಅಂದಾಜು ಮಾಡಲಾಗಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಸುಮಾರು 16,000 ಕೋಟಿ ರೂ ಯೂರಿಯಾ ಸಬ್ಸಿಡಿ ಉಳಿತಾಯವಾಗಬಹುದು ಎಂದು ಲೆಕ್ಕಹಾಕಲಾಗಿದೆ. ಇನ್ನು ಕರ್ನಾಟದಲ್ಲಿ, ನ್ಯಾನೋ ಯುರಿಯಾ ಬಂದಿರುವುದರಿಂದ ಮಾಮೂಲಿ ಯೂರಿಯಾ ಬಳಕೆ ಸುಮಾರು 5 ಲಕ್ಷ ಟನ್ ಕಡಿಮೆಯಾಗಬಹುದು ಎಂದು ಅಂದಾಜು ಮಾಡಲಾಗಿದೆ ಎಂದರು.
ನಾಯಕತ್ವ ಬದಲಾವಣೆ ಇಲ್ಲ:
ನಂತರ ವರದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಸದಾನಂದ ಗೌಡ ಅವರು ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಸಾಧ್ಯತೆಯನ್ನು ತಳ್ಳಿಹಾಕಿದರು. ನಮ್ಮ ಪಕ್ಷದಲ್ಲಿ ಪ್ರತಿ ರಾಜ್ಯಕ್ಕೆ ಉಸ್ತುವಾರಿ ಇರ್ತಾರೆ. ಕೇಂದ್ರದ ವರಿಷ್ಠರ ಸಂದೇಶವನ್ನು ಅವರು ನೀಡ್ತಾರೆ. ಹಾಗೆಯೇ ನಮ್ಮ ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಅವರು – ಮುಂದಿನ ಎರಡು ವರ್ಷಗಳು ಕೂಡ ಬಿಎಸ್ವೈ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದರು.
#IFFCO ಉತ್ಪಾದಿತ ನ್ಯಾನೋ ಯೂರಿಯಾದ ಮೊದಲ ಕಂತು ಗುಜರಾತಿನ ಕಲೋಲ್ ಸ್ಥಾವರದಿಂದ ಕರ್ನಾಟಕಕ್ಕೆ ಹೊರಟಿತು.
ಇಂದು ಬೆಂಗಳೂರಿನಲ್ಲಿ ವರ್ಚ್ವಲ್ ಸಭೆಯ ಮೂಲಕ ಈ ನ್ಯಾನೋ ಗೊಬ್ಬರ ಹೊತ್ತ ವಾಹನಗಳಿಗೆ ಹಸಿರು ನಿಶಾನೆ ತೋರಿದೆ.
500-ML ನ್ಯಾನೋ ಯೂರಿಯಾ 45-KG ಮಾಮೂಲಿ ಯೂರಿಯಾಕ್ಕೆ ಸಮ. ಇದು ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಉಂಟುಮಾಡಲಿದೆ pic.twitter.com/8nSnQiyUhq
— Sadananda Gowda (@DVSadanandGowda) June 12, 2021
ಪೆಟ್ರೋಲ್ ದರ ಏರಿಕೆ ವಿಚಾರವಾಗಿ ಕೇಳಲಾದ ಪ್ರಶ್ನಗೆ ಪ್ರತಿಕ್ರಿಯಿಸಿದ ಸದಾನಂದ ಗೌಡರು – ಪೆಟ್ರೋಲ್ ದರ ಅಂತಾರಾಷ್ಟ್ರೀಯ ಮಟ್ಟ ಮೇಲೆ ಅವಲಂಬಿಸಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ಅದರ ಮೇಲೆ ವಿವಿಧ ರೀತಿ ತೆರಿಗೆ ವಿಧಿಸಿಸುತ್ತದೆ. ಇದನ್ನು ಜಿಎಸ್ಟಿ ವ್ಯಾಪ್ತಿಗೆ ತರುವುದು ಸೂಕ್ತ ಎಂಬುದು ನನ್ನ ಭಾವನೆ. ಆದರೆ ಜಿಎಸ್ಟಿ ಸ್ವಾಯತ್ತ ಸಂಸ್ಥೆ ಆಗಿದೆ. ಕೇಂದ್ರ ಹಾಗೂ ಎಲ್ಲ ರಾಜ್ಯಗಳ ವಿತ್ತ ಸಚಿವರು ಅದರಲ್ಲಿ ಇರುತ್ತಾರೆ. ಅವರು ಅದನ್ನು ನಿರ್ಧರಿಸಬೇಕು ಎಂದರು.