ನವ ನಿರ್ದೇಶಕ ಉದಯ್ ಪ್ರಸನ್ನ ನಿರ್ದೇಶನದ ‘ಮಹಿಷಾಸುರ’ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ಪಂಚಿಂಗ್ ಡೈಲಾಗ್, ಆಕ್ಷನ್ ಸೀನ್ ಗಳು ಟ್ರೈಲರ್ ಹೈಲೈಟ್ ಆಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ತ್ರಿಕೋನ ಪ್ರೇಮಕಥೆಯನ್ನು ಒಳಗೊಂಡಿರುವ ‘ಮಹಿಷಾಸುರ’ ಚಿತ್ರಕ್ಕೆ ನೈಜ ಘಟನೆ ಪ್ರೇರಣೆಯಾಗಿದ್ದು, ನೈಜ ಘಟನೆ ಆಧರಿಸಿಯೇ ಕಥೆ ಹೆಣೆದಿದ್ದಾರೆ ನಿರ್ದೇಶಕ ಉದಯ್ ಪ್ರಸನ್ನ.
ನಿರ್ದೇಶಕನಾಗಿ ಸ್ಯಾಂಡಲ್ವುಡ್ನಲ್ಲಿ ಉದಯ್ ಪ್ರಸನ್ನ ಅವರ ಮೊದಲ ಹೆಜ್ಜೆ ಇದಾಗಿದ್ದು, ಹಲವು ನಿರ್ದೇಶಕರ ಜೊತೆ ಸಿನಿಮಾಗಳಲ್ಲಿ ದುಡಿದ ಅನುಭವ ಇವರ ಬೆನ್ನಿಗಿದೆ. ಚಿತ್ರದಲ್ಲಿ ಸುದರ್ಶನ್ ಹಾಗೂ ರಾಜ್ ಮಂಜು ನಾಯಕರಾಗಿ ನಟಿಸಿದ್ದು, ಬಿಂದು ನಾಯಕಿಯಾಗಿ ನಟಿಸಿದ್ದಾರೆ. ಒಂದು ಹೆಣ್ಣಿಗೋಸ್ಕರ ಸ್ನೇಹಿತರಿಬ್ಬರು ಹೇಗೆ ಅಸುರ ರೂಪ ತಾಳುತ್ತಾರೆ ಎಂಬುದನ್ನು ಹೇಳುವುದರ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶವನ್ನು ಈ ಸಿನಿಮಾ ಮೂಲಕ ನಿರ್ದೇಶಕರು ಹೇಳ ಹೊರಟಿದ್ದಾರೆ.
Advertisement
Advertisement
ಹಳ್ಳಿಯೊಂದರಲ್ಲಿ ನಡೆಯುವ ಕಥೆ ಇದಾಗಿದ್ದು, ಬಹುತೇಕ ಸಿನಿಮಾವನ್ನು ದೊಡ್ಡಬಳ್ಳಾಪುರ ಬಳಿಯ ಮೇಲುಕೋಟೆ ಗ್ರಾಮದಲ್ಲಿ ಚಿತ್ರೀಕರಿಸಲಾಗಿದೆ. ಮಂಡ್ಯ, ಮೈಸೂರು, ರಾಮನಗರಗಳಲ್ಲೂ ‘ಮಹಿಷಾಸುರ’ ಸಿನಿಮಾವನ್ನು ಸೆರೆ ಹಿಡಿಯಲಾಗಿದೆ. ಚಿತ್ರಕ್ಕೆ ಸುನಿಲ್ ಕೌಶಿ ಸಂಗೀತ ನಿರ್ದೇಶನ, ಕೃಷ್ಣ ಅವರ ಛಾಯಾಗ್ರಹಣವಿದೆ. ಮೇಲುಕೋಟೆ ಟೂರಿಂಗ್ ಟಾಕೀಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಪಾರ್ವತಿ ಚಂದ್ರಶೇಖರ್, ಲೀಲಾವತಿ ಸುರೇಶ್ ಕುಮಾರ್ ಮತ್ತು ಪ್ರೇಮಾ ಚಂದ್ರಯ್ಯ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.
Advertisement
Advertisement
ಇತ್ತೀಚೆಗೆ ಬಿಡುಗಡೆಯಾಗಿದ್ದ ಚಿತ್ರದ ಆಡಿಯೋ ಎಲ್ಲರ ಮೆಚ್ಚುಗೆ ಗಳಿಸಿತ್ತು. ಇದೀಗ ಚಿತ್ರದ ಟ್ರೈಲರ್ ಎಲ್ಲರ ಗಮನ ಸೆಳೆಯುತ್ತಿದೆ. ಜನವರಿ ಮೊದಲ ವಾರದಲ್ಲಿ ‘ಮಹಿಷಾಸುರ’ ಚಿತ್ರವನ್ನು ಪ್ರೇಕ್ಷಕರೆದುರು ತರುವ ಯೋಜನೆಯಲ್ಲಿ ಚಿತ್ರತಂಡವಿದ್ದು ಈ ಬಗ್ಗೆ ಸದ್ಯದಲ್ಲೇ ಚಿತ್ರತಂಡ ಹೆಚ್ಚಿನ ಮಾಹಿತಿಯನ್ನು ನೀಡಲಿದೆ.