ಮಡಿಕೇರಿ: ಪ್ರವಾಹ, ನೆರೆಯಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೂರಿಲ್ಲದೆ ಪರಿತಪಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಲಂಚಕ್ಕೆ ಕೈಚಾಚಿ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ಹೀಗೆ ಹಣ ಪಡೆದು ಅಕ್ರಮವಾಗಿ ಮನೆ ಹಂಚಿಕೆ ಮಾಡಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಚಿವ ವಿ.ಸೋಮಣ್ಣ ಆದೇಶಿಸಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣ ಪಡೆದು ಅಕ್ರಮವಾಗಿ ಮನೆ ಹಂಚಿಕೆ ಮಾಡುವ ಮೂಲಕ ಎಸಿ ಕಚೇರಿಯಲ್ಲಿ ಡೆಪ್ಟೇಷನ್ ನಲ್ಲಿ ಇದ್ದ ಹೇಮಂತ್ ಸಂತ್ರಸ್ತರಿಗೆ ಮೋಸ ಮಾಡಿದ್ದ. ಸುಮಾರು 60 ಜನರಿಗೆ ಅಕ್ರಮವಾಗಿ ಮನೆಗಳ ಹಂಚಿಕೆ ಮಾಡಿದ್ದ ಎಂಬ ಆರೋಪ ಕೇಳಿ ಬಂದಿದೆ. ಜಿಲ್ಲಾಧಿಕಾರಿ, ಶಾಸಕರ ಗಮನಕ್ಕೂ ಬಾರದೆ ಬೇಕಾಬಿಟ್ಟಿಯಾಗಿ ಮನೆ ಹಂಚಿಕೆ ಮಾಡಿದ್ದು, ಇದರಿಂದಾಗಿ ಅಗತ್ಯವಿದ್ದವರಿಗೆ ಹಣ ತಲುಪಿಲ್ಲ. ಹೀಗಾಗಿ ಅಧಿಕಾರಿಯನ್ನು ತಕ್ಷಣವೇ ಅಮಾನತು ಮಾಡುವಂತೆ ಆದೇಶ ಹೊರಡಿಸಿದ್ದಾರೆ.
Advertisement
Advertisement
ಬಿಜೆಪಿಯ ಹಿರಿಯ ನಾಯಕರು ಡ್ರಗ್ಸ್ ಇಲ್ಲದೆ ಹೊರಗೆ ಬರುತ್ತಿರಲಿಲ್ಲ ಎಂಬ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆ ಕುರಿತು ಮಾತನಾಡಿದ ಅವರು, ಹರಿಪ್ರಸಾದ್ ರಾಷ್ಟ್ರ, ರಾಜ್ಯ ರಾಜಕಾರಣದಲ್ಲಿ ಹಿರಿಯರು. ಅವರು ಏನು ಹೇಳಿದ್ದಾರೆ ಎಂಬುದು ತಿಳಿದಿಲ್ಲ. ಆದರೆ ಅಂತಹವರ ಬಾಯಿಯಲ್ಲಿ ಇಂತಹ ಮಾತುಗಳು ಬರಬಾರದು. ಯಾವುದನ್ನೂ ಮುಚ್ಚಿಕೊಳ್ಳುವ ಪ್ರಶ್ನೆ ಇಲ್ಲ. ಡ್ರಗ್ಸ್, ಗಾಂಜಾ ಸಮಾಜಕ್ಕೆ ಕಂಟಕವಾಗಿದೆ. ಯಡಿಯೂರಪ್ಪನವರ ಸರ್ಕಾರ ಇದನ್ನು ಮಟ್ಟಹಾಕಲಿದೆ ಎಂದು ತಿಳಿಸಿದರು.