ಬೆಂಗಳೂರು: ಸ್ಯಾಂಡಲ್ವುಡ್ ನಟ ರಿಷಬ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಹೀರೋ ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆ ಕಾಣಲಿದೆ. ಕಿರಿಕ್ ಪಾರ್ಟಿ ಸಿನಿಮಾ ನಿರ್ದೇಶಿಸುವ ಮೂಲಕ ಪರಭಾಷಾ ಸಿನಿ ಪ್ರಿಯರು ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ರಿಷಬ್ ಶೆಟ್ಟಿ, ಹಲವು ಸಿನಿಮಾಗಳನ್ನು ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ನಿರ್ದೇಶಿಸಿದ್ದಾರೆ. ಬೆಲ್ ಬಾಟಂ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ನಾಯಕನಾಗಿ ಪಾದಾರ್ಪಣೆ ಮಾಡಿದ ರಿಷಬ್ ಶೆಟ್ಟಿ ಇದೀಗ ಹೀರೋ ಸಿನಿಮಾದಲ್ಲಿ 2ನೇ ಬಾರಿಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಎಂ.ಭರತ್ ರಾಜ್ ಆ್ಯಕ್ಷನ್ ಕಟ್ ಹೇಳಿದ್ದು, ರಿಷಬ್ಗೆ ಗಾನವಿ ಲಕ್ಷ್ಮಣ್ ನಾಯಕಿಯಾಗಿ ಅಭಿನಯಿಸಿದ್ದಾರೆ.
Advertisement
ಸಿನಿಮಾ ಕುರಿತಂತೆ ಮಾತನಾಡಿರುವ ರಿಷಬ್ ಶೆಟ್ಟಿ, ಲಾಕ್ ಡೌನ್ ಸಮಯದಲ್ಲಿ ಕುಳಿತು ಯೋಚಿಸಿದಾಗ ಜನರಿಗೆ ಏನಾದರೂ ಹೊಸದಾಗಿ ಮನರಂಜನೆ ನೀಡಬೇಕೆಂಬ ಉದ್ದೇಶದಿಂದ ಈ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಮೊದಲನೇಯದಾಗಿ ನಿರ್ದೇಶಕ ಭರತ್ ರಾಜ್ ಈ ಪ್ರಾಜೆಕ್ಟ್ ಹೇಳಿದಾಗ ನನಗೆ ಬಹಳ ಇಷ್ಟವಾಯಿತು. ಅನಿರುದ್ಧ್ ಮಹೇಶ್, ಭರತ್ ರಾಜ್, ನೀತೇಶ್, ನಂಜುಂಡ ಆರಾಧ್ಯ, ತ್ರಿಲೋಕ್ ಹಾಗೂ ನಾನು ಐದು ಜನ ಬರಹಗಾರರು ಸೇರಿ ಈ ಸಿನಿಮಾದ ಕಥೆಯನ್ನು ಒಂದು ರಾತ್ರಿಯಲ್ಲಿ ಬರೆದೆವು, ಒಂದು ರಾತ್ರಿಯಲ್ಲಿಯೇ ಸ್ಕ್ರೀನ್ ಪ್ಲೇ ಮಾಡಲಾಯಿತು. ಕೇವಲ ನಾಲ್ಕು ಹಾಗೂ ಐದು ದಿನಗಳಲ್ಲಿ ಡೈಲಾಗ್ ಬರೆದವು. ನಂತರ ಬೇಲೂರಿನಲ್ಲಿ ಸಿನಿಮಾದ ಚಿತ್ರೀಕರಣವನ್ನು ಮಾಡಲಾಯಿತು ಎಂದು ಹೇಳಿದರು.
Advertisement
Advertisement
ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಹೇರ್ ಸ್ಟೈಲಿಷ್ ಕಾರ್ಯನಿರ್ವಹಿಸುವ ಪಾತ್ರಧಾರಿಯಾಗಿದ್ದು, ಒಬ್ಬ ಸಾಮಾನ್ಯ ವ್ಯಕ್ತಿ ಜೀವನದಲ್ಲಿ ಬರುವುದನೆಲ್ಲಾ ಎದುರಿಸಿ ಹೀರೋ ಆಗಿ ಹೇಗೆ ಬದಲಾಗುತ್ತಾನೆ ಎಂಬುವುದು ಸಿನಿಮಾದ ಕಥೆಯಾಗಿದೆ ಎಂದರು.
Advertisement
ಯೋಗರಾಜ್ ಭಟ್ರವರು ನೆನಪಿನ ಹುಡುಗಿಯೇ ಎಂಬ ಹಾಡನ್ನು ಬರೆದಿದ್ದು, ಗಾಯಕ ವಿಜಯ್ ಪ್ರಕಾಶ್ ಹಾಡಿದ್ದಾರೆ. ಹೀರೋ ಸಿನಿಮಾದ ಈ ಮೆಲೋಡಿ ಹಾಡು ಎಲ್ಲರ ಮನಗೆದ್ದಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ. ಸದ್ಯ ನಾಳೆ ಸಿನಿಮಾ ಬೆಳ್ಳಿತೆರೆ ಮೇಲೆ ಬರಲಿದ್ದು, ಅಭಿಮಾನಿಗಳು ಸಿನಿಮಾ ಕುರಿತಂತೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.