ಧಾರವಾಡ, ಬೆಳಗಾವಿಯಲ್ಲಿ ಭಾರೀ ಮಳೆ
ಬೆಂಗಳೂರು: ಇಂದು ಕೇರಳಕ್ಕೆ ಮುಂಗಾರು ಪ್ರವೇಶವಾಗಿದ್ದು, ಮಂಗಳವಾರ ಇಲ್ಲವೆ ಬುಧವಾರ ರಾಜ್ಯಕ್ಕೆ ಪ್ರವೇಶಿಸಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಮಾಹಿತಿ ನೀಡಿದ್ದಾರೆ.
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮಂಗಳವಾರ ಇಲ್ಲವೇ ಬುಧವಾರ ಮುಂಗಾರು ಪ್ರವೇಶಿಸುವ ಹಿನ್ನೆಲೆ ರಾಜ್ಯದಲ್ಲಿ ಮೂರು ದಿನಗಳ ಕಾಲ ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ನಿರೀಕ್ಷಿಸಲಾಗಿದೆ. ಕೇರಳಕ್ಕೆ ಇಂದು ಮುಂಗಾರು ಎಂಟ್ರಿಯಾಗಿದ್ದು, ನಾಳೆ ರಾಜ್ಯದ ಕರಾವಳಿ ಭಾಗಕ್ಕೆ ಪ್ರವೇಶಿಸಲಿದೆ ಎಂದು ತಿಳಿಸಿದ್ದಾರೆ.
Advertisement
Advertisement
ರಾಜ್ಯದಲ್ಲಿ ಇಂದಿನಿಂದ ಮೂರ್ನಾಲ್ಕು ದಿನ ಭಾರೀ ಮಳೆಯಾಗಲಿದ್ದು, ಕರಾವಳಿ ಹಾಗೂ ಉತ್ತರ ಒಳನಾಡಿನ ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುವ ಸಂಭವವಿದೆ. ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ ಕಳೆದ ಒಂದು ವಾರದಿಂದ ಮಳೆಯಾಗುತ್ತಿದೆ. ರಾಜ್ಯದಲ್ಲಿ ಇದೀಗ ಮುಂಗಾರಿಗೆ ಪೂರಕವಾದ ವಾತಾವರಣವಿದ್ದು, ಭಾರತೀಯ ಹವಾಮಾನ ಇಲಾಖೆ ಮುಂಗಾರಿನ ಮಾಹಿತಿ ನೀಡಿದೆ ಎಂದು ವಿವರಿಸಿದ್ದಾರೆ.
Advertisement
ಬೆಳಗಾವಿ ಹಾಗೂ ಧಾರವಾಡದಲ್ಲಿ ಹೆಚ್ಚು ಮಳೆ ಸಾಧ್ಯತೆ ಇದೆ. ಜೂನ್ 5ಕ್ಕೆ ರಾಜ್ಯದ ಕರಾವಳಿ ಭಾಗಕ್ಕೆ ಮುಂಗಾರು ಪ್ರವೇಶದ ನಿರೀಕ್ಷೆ ಇತ್ತು. ಮುಂಗಾರಿಗೆ ಪೂರಕ ವಾತಾವರಣವಿರುವುದರಿಂದ ಒಂದೆರಡು ದಿನ ಮೊದಲೇ ಮುಂಗಾರು ಮಳೆಯಾಗಲಿದೆ. ಈ ಬಾರಿ ವಾಡಿಕೆಯಷ್ಟು ಮುಂಗಾರು ಮಳೆಯಾಗುವ ಸಾಧ್ಯತೆ ಇದ್ದು, ಬೆಂಗಳೂರಿನಲ್ಲಿಯೂ ಮೂರು ದಿನಗಳ ಕಾಲ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ ಸಿದ್ಧತೆ ಮಾಡಿಕೊಳ್ಳುವಂತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ. ಮಳೆಯಿಂದ ಆಗುವ ಅನಾಹುತಗಳನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ, ಆರೋಗ್ಯ ಇಲಾಖೆಗೆ ತಿಳಿಸಲಾಗಿದೆ. ಪ್ರವಾಹ, ಚಂಡಮಾರುತ ಬಂದರೂ ಎದುರಿಸಲು ಸಿದ್ಧ. ಕೆಲವು ಕಡೆಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಈ ಕುರಿತು ಸಹ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.