– ಹಗ್ಗ ಕೊಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ
ಚಿಕ್ಕಮಗಳೂರು: ಸ್ನೇಹಿತರೊಂದಿಗೆ ಸ್ನಾನಕ್ಕೆ ಹೋದ ಯುವಕ ನಾಲೆಯಲ್ಲಿ ಕೊಚ್ಚಿ ಹೋಗಿ ಸ್ನೇಹಿತರ ಕಣ್ಣೆದುರೇ ಸಾವಿಗೀಡಾಗಿರೋ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ದೋರನಾಳು ಗ್ರಾಮದ ಬಳಿ ನಡೆದಿದೆ.
ಮೃತನನ್ನ ವಿಶ್ವಾಸ್(22) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ವಿಶ್ವಾಸ್ ತನ್ನ ನಾಲ್ವರು ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಭದ್ರಾ ಮೇಲ್ದಂಡೆ ಯೋಜನೆಯ ನಾಲೆಗೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ವಿಶ್ವಾಸ್ ನೀರಿನಲ್ಲಿ ಮುಳುಗುವ ವೇಳೆ ಜೊತೆಗಿದ್ದ ಸ್ನೇಹಿತರು ಆತನನ್ನ ಬದುಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.
Advertisement
Advertisement
ನೀರಿನಲ್ಲಿ ಮುಳುಗುತ್ತಿದ್ದ ಸ್ನೇಹಿತನನ್ನ ರಕ್ಷಿಸಲು ನಾಲೆ ಮೇಲಿದ್ದ ಯುವಕರು ಆತನಿಗೆ ಹಗ್ಗ ಎಸೆಯಲು ಮುಂದಾಗಿದ್ದಾರೆ. ಆದರೆ ಅದೂ ಸಾಧ್ಯವಾಗಿಲ್ಲ. ಹರಿಯುತ್ತಿದ್ದ ನೀರಿನಲ್ಲಿ ವಿಶ್ವಾಸ್ ಕೊಚ್ಚಿಕೊಂಡು ಮುಂದಕ್ಕೆ ಹೋಗುತ್ತಿದ್ದ ಪರಿಣಾಮ ಆತನಿಗೆ ಸರಿಯಾಗಿ ಹಗ್ಗ ಕೊಡಲು ಸಾಧ್ಯವಾಗಿಲ್ಲ.
Advertisement
ವಿಶ್ವಾಸ್ ಜೊತೆಗಿದ್ದ ಸ್ನೇಹಿತರಿಗೆ ಕೂಡ ಸರಿಯಾಗಿ ಈಜು ಬಾರದ ಕಾರಣ ಅವರು ನೀರಿಗಿಳಿಯಲು ಭಯಗೊಂಡು, ವಿಶ್ವಾಸ್ ಗೆ ಹಗ್ಗ ಕೊಡಲು ಪ್ರಯತ್ನಿಸಿದ್ದಾರೆ. ನಾಲೆ ಮೇಲಿಂದ ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ವಿಶ್ವಾಸ್ ಜೊತೆಯೇ ಹಗ್ಗ ಎಸೆಯಲು ಪ್ರಯತ್ನಿಸಿದರು ಸಾಧ್ಯವಾಗದ ಪರಿಣಾಮ ವಿಶ್ವಾಸ್ ಸ್ನೇಹಿತರ ಕಣ್ಣೆದುರೇ ಕೊನೆಯುಸಿರೆಳೆದಿದ್ದಾನೆ.
Advertisement
ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ತರೀಕೆರೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಯುವಕನ ಮೃತದೇಹವನ್ನ ಮೇಲಕ್ಕೆತ್ತಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತರೀಕೆರೆಯ ಹಳಿಯೂರು ಗೇಟ್, ದೊರನಾಳು ಸೇರಿದಂತೆ ತಾಲೂಕಿನಲ್ಲಿ ಅಲ್ಲಲ್ಲೇ ಈ ರೀತಿಯ ದುರ್ಘಟನೆಗಳು ಆಗಾಗ್ಗೆ ಸಂಭವಿಸುತ್ತಿವೆ.
ಈಗಾಗಲೇ ಕಳೆದ ಮೂರ್ನಾಲ್ಕು ತಿಂಗಳಲ್ಲಿ ನಾಲ್ಕೈದು ಜನ ಸಾವನ್ನಪ್ಪಿದ್ದಾರೆ. ಆದ್ದರಿಂದ ಗ್ರಾಮಗಳ ಅಂಚಿನಲ್ಲಿ ಹಾದುಹೋಗಿರುವ ಭದ್ರಾ ಮೇಲ್ದಂಡೆ ಯೋಜನೆಯ ನಾಲೆಗೆ ಗ್ರಾಮದ ಸಮೀಪ ಬೇಲಿ ನಿರ್ಮಿಸುವಂತೆ ಸ್ಥಳಿಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.