Bengaluru CityDistrictsKarnatakaLatestMain Post

ನಾನು ತಪ್ಪು ಮಾಡಿದ್ರೆ ನೇಣು ಹಾಕಿಕೊಳ್ಳೋಕೆ ರೆಡಿ ಇದ್ದೇನೆ: ಸೋಮಣ್ಣ

ಬೆಂಗಳೂರು: ಸಣ್ಣದಾಗಿ ನಡೆದುಕೊಂಡು, ಯಾರ ಬಗ್ಗೆಯಾದರೂ ಅಪಚಾರ ಮಾಡಿದ್ದರೆ ನಾನು ನೇಣು ಹಾಕಿಕೊಳ್ಳೋಕೆ ತಯಾರಿದ್ದೇನೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ಪಿಡಿಓಗಳು ರಾಕ್ಷಸರು ಎಂಬ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಅವರು, ಬಡವರಿಗಾಗಿ ಶಾಸಕರ ಸಲಹೆಯನ್ನು ಸ್ವೀಕರಿಸಬೇಕು. ಅವರು ಹೇಳಿದಂತೆ ಅವರ ಸಲಹೆಗಳನ್ನು ನಾನು ಕಾರ್ಯರೂಪಕ್ಕೆ ತರಬೇಕು. ಇಲ್ಲ ಅಂದರೆ ನಾನು ಕೆಲಸಕ್ಕೆ ಬಾರದ ವ್ಯಕ್ತಿಯಾಗಿ ಬಿಡುತ್ತೇನೆ ಎಂದರು.

ಸಚಿವನಾಗಿ ಒಂದು ವರ್ಷ ಎರಡು ತಿಂಗಳು ಆಗುತ್ತಿದೆ. ಗೊಂದಲದ ಗೂಡಾಗಿದ್ದ ವಸತಿ ಇಲಾಖೆಯನ್ನ ಲಾಜಿಕಲ್ ಎಂಡ್‍ಗೆ ತಂದಿದ್ದೇವೆ. 188 ವಿಧಾನಸಭಾ ಕ್ಷೇತ್ರದಲ್ಲಿ ಪ್ರಧಾನಮಂತ್ರಿ ಅವಾಸ್ ಯೋಜನೆಯ 5.40 ಲಕ್ಷ ಮನೆಗಳು ಮಂಜೂರಾಗಿದ್ದವು. ಆದರೆ ಬಹಳಷ್ಟು ಜಿಲ್ಲೆಗಳಲ್ಲಿ ಅನರ್ಹ ಫಲಾನುಭವಿಗಳು ಕಂಡುಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

5 ಲಕ್ಷ 40 ಸಾವಿರ ಮನೆ 180 ವಿಧಾನಸಭಾ ಕ್ಷೇತ್ರದಲ್ಲಿ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಸಿಗಲಿದೆ. ಆದರೆ ಅರ್ಹ ಫಲಾನುಭವಿಗಳ ನಡುವೆ ಅನರ್ಹರು ಸಿಕ್ಕಿದ್ದಾರೆ. ಈ ಯೋಜನೆಯಲ್ಲಿ ಮಿಸ್ ಯೂಸ್ ಆಗ್ತಾ ಇತ್ತು. ಪಿಡಿಓಗಳು ಮಾಡಿರುವ ತಪ್ಪುಗಳಿವು. ಪಿಡಿಓಗಳು ಹೇಳಿದ್ದು ಎಲ್ಲವೂ ಸರಿ ಇರೋದಿಲ್ಲ. ಕೆಲವು ಪಿಡಿಓಗಳು ರಾಕ್ಷಸ ಪ್ರವೃತ್ತಿಯವರು ಇರ್ತಾರೆ ಎಂದಿದ್ದೇನೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಅದರಲ್ಲಿ ಏನ್ ತಪ್ಪಿದೆ ಎಂದು ಸಿಎಂ ಕೇಳಿದ್ರು. ಪಿಡಿಓಗಳು ಎಲ್ಲರನ್ನೂ ರಾಕ್ಷಸರು ಅಂತ ಹೇಳಿಲ್ಲ. ಕೆಲವರನ್ನಷ್ಟೇ ರಾಕ್ಷಸರು ಎಂದಿದ್ದೇನೆ. ಅದಕ್ಕೆ ನಾನು ಈಗಲೂ ಬದ್ಧನಾಗಿದ್ದೇನೆ. ಒಳ್ಳೆಯ ಪಿಡಿಓಗಳಿಗೆ ರಾಕ್ಷಸರು ಅಂತ ಹೇಳುವ ಚಟ ನನಗಿಲ್ಲ ಎಂದರು.

ಕೆಲವು ಪಿಡಿಓಗಳು ಪ್ರತಿಭಟನೆ ಮಾಡ್ತಾರೋ ಮಾಡಿಕೊಳ್ಳಲಿ, ನನಗೆ ತೊಂದ್ರೆ ಇಲ್ಲ. ಎಲ್ಲವೂ ಸರಿ ಇರಬೇಕು ಅನ್ನೋದು ನನ್ನ ಉದ್ದೇಶ. ದನದ ಕೊಟ್ಟಿಗೆ ಕಟ್ಟಿಸೋಕೆ, ಮತ್ತೇನೊ ಮಾಡೋಕೆ ಹಣ ಕೊಟ್ರೆ ಹೇಗೆ?. ನನಗೆ ಅರ್ಹ ಫಲಾನುಭವಿಗಳಿಗೆ ಮನೆ ಸಿಗಬೇಕು ಅಷ್ಟೇ. ನ್ಯೂನತೆಗಳು ಸರಿಯಾಗಬೇಕು. ಹೀಗಾಗಿ ನಿನ್ನೆ ನಾನು ಕೆಲ ಪಿಡಿಓಗಳು ರಾಕ್ಷಸರು ಎಂದಿದ್ದೇನೆ. ಅರ್ಹ ಫಲಾನುಭವಿಗಳಿಗೆ ಮನೆ ಸಿಗಲಿ ಎಂದು ಶಾಸಕರಲ್ಲಿ ಲಿಸ್ಟ್ ಕೇಳಿದ್ದೀನಿ. ಕೆಲವು ಪಿಡಿಓಗಳು ರಾಕ್ಷಸರು ಎನ್ನುವ ನನ್ನ ಮಾತಿಗೆ ನಾನು ಈಗಲೂ ಬದ್ಧನಾಗಿದ್ದು, ಇತರ ಕೆಲವರಿಗೆ ಬೇಸರ ಆಗಿದ್ರೆ ವಿಷಾದ ವ್ಯಕ್ತಪಡಿಸುತ್ತೇನೆ ಅಂತ ತಿಳಿಸಿದರು.

ಕೆಲವು ಪಿಡಿಓಗಳ ಮೇಲೆ ಎಫ್ ಐಆರ್ ಹಾಕಿದ್ದೇವೆ. ಕೆಲವರು ಜಾಮೀನಿನ ಮೇಲೆ ಹೊರಗಿದ್ದಾರೆ. ಅನರ್ಹರಿಗೂ ಮನೆ ಸಿಕ್ಕಿದೆ ಅಂದ್ರೆ ಕೆಲ ಪಿಡಿಓಗಳೇ ನೇರ ಕಾರಣರಾಗಿರುತ್ತಾರೆ. ಅದನ್ನು ಸರ್ಕಾರ ಒಪ್ಪುವುದಿಲ್ಲ. ಚಿತ್ರದುರ್ಗದ ಹಿರಿಯೂರು ಗ್ರಾಮದಲ್ಲಿ 180 ಅನರ್ಹರು ಇದ್ರು. ಯಾದಗಿರಿಯಲ್ಲಿ ಇದೇ ರೀತಿ ಆಗಿದೆ. ಬಹಳಷ್ಟು ಕಡೆಗಳಲ್ಲಿ ಇದೇ ರೀತಿ ಆಗಿದೆ ಎಂದು ಹೇಳಿದರು.

ಬಡವರ ಪರವಾಗಿ ನಾನು ಪಿಡಿಓಗಳ ಬಳಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದ ವಿ. ಸೋಮಣ್ಣ, ನನಗೆ ಯಾರ ಒತ್ತಡವೂ ಇಲ್ಲ. ನಾನು ಕೆಲ ಗೌರವಯುತ ಪಿಡಿಓಗಳಿಗೆ ಆಗಿರುವ ನೋವಿನ ಹಿನ್ನೆಲೆಯಲ್ಲಿ ವಿಷಾದ ವ್ಯಕ್ತಪಡಿಸುತ್ತಿದ್ದೇನೆ. ಒಂದಂತೂ ನಿಜ ವಿ.ಸೋಮಣ್ಣ ಇನ್ನೂ ಬದುಕಿದ್ದಾನೆ ಎಂದು ನುಡಿದರು. ಇದನ್ನೂ ಓದಿ: 2021ರ ಜೂನ್ ಒಳಗೆ 25 ಸಾವಿರ ಮನೆ ಆಗದೇ ಹೋದ್ರೆ ರಾಜೀನಾಮೆ ಕೊಡ್ತೀನಿ: ಸೋಮಣ್ಣ

Leave a Reply

Your email address will not be published. Required fields are marked *

Back to top button