ಕೋಹಿಮಾ: ತೈಲ ಬೆಲೆ ಏರಿಕೆಯ ವಿರುದ್ಧ ಪ್ರತಿಭಟನೆ ಜೋರಾಗುತ್ತಿದ್ದಂತೆ ಒಂದೊಂದೆ ರಾಜ್ಯಗಳು ತೆರಿಗೆ ಕಡಿತ ಮಾಡುತ್ತಿದ್ದು, ಈಗ ನಾಗಾಲ್ಯಾಂಡ್ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತ ಮಾಡಿದೆ.
ಸೋಮವಾರ ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಗೆ ಬಂದಿದೆ. ಸರ್ಕಾರಿ ಆದೇಶದ ಪ್ರಕಾರ ನಾಗಾಲ್ಯಾಂಡ್ ತೈಲೋತ್ಪನ್ನಗಳ ಮೇಲಿನ ತೆರಿಗೆಯಲ್ಲಿ ಶೇ.29.80ರಿಂದ ಶೇ.25ರಷ್ಟು ಇಳಿಕೆ ಮಾಡಿದೆ.ಇದರಿಂದಾಗಿ ಪೆಟ್ರೋಲ್ ದರದ ಮೇಲೆ ವಿಧಿಸಿದ್ದ ತೆರಿಗೆ 18.26 ರೂಪಾಯಿಯಿಂದ 16.04 ರೂಗೆ ಇಳಿಕೆಯಾಗಿದೆ. ಡೀಸೆಲ್ ಮೇಲಿದ್ದ ಶೇ.17.50 ತೆರಿಗೆಯನ್ನು ಶೇ.16.50ಕ್ಕೆ ಇಳಿಸಿದೆ. ಇದರಿಂದಾಗಿ ಡೀಸೆಲ್ ಮೇಲಿನ ದರ ಪ್ರತಿ ಲೀಟರ್‌ಗೆ 11.08 ರೂ.ನಿಂದ 10.51 ರೂಪಾಯಿಗೆ ಇಳಿಕೆಯಾಗಿದೆ.
Advertisement
Advertisement
ತೆರಿಗೆ ಕಡಿತದಿಂದಾಗಿ ಒಂದು ಲೀಟರ್ ಪೆಟ್ರೋಲ್ ಬೆಲೆ 2.22 ರೂ. ಇಳಿಕೆಯಾದರೆ ಡೀಸೆಲ್ ದರದಲ್ಲಿ 57 ಪೈಸೆ ಇಳಿಸಲಾಗಿದೆ. ರಾಜ್ಯದ ದೀಮಾಪುರ್ ನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 92 ರೂ. ಮತ್ತು ಡೀಸೆಲ್ ದರ 83 ರೂ. ಇದೆ. ಕೋಹಿಮಾದಲ್ಲಿ ಒಂದು ಲೀಟರ್ ಪೆಟ್ರೋಲ್ ದರ 93 ರೂ. ಇದ್ದು, ಡೀಸೆಲ್ ದರವು 84 ರೂ. ಇದೆ. ಇದನ್ನೂ ಓದಿ: ತೈಲ ದರ ಏರಿಕೆಗೆ ಹಿಂದಿನ ಸರ್ಕಾರಗಳ ನೀತಿಗಳೇ ಕಾರಣ – ಮೋದಿ
Advertisement
ಎಲ್ಲೆಲ್ಲಿ ಕಡಿತವಾಗಿದೆ?
ಪಶ್ಚಿಮ ಬಂಗಾಳ, ರಾಜಸ್ಥಾನ, ಅಸ್ಸಾಂ ಮತ್ತು ಮೇಘಾಲಯ ಸರ್ಕಾರಗಳು ಈಗಾಗಲೇ ತೆರಿಗೆ ಕಡಿತ ಮಾಡಿ ಜನರಿಗೆ ರಿಲೀಫ್ ನೀಡಿದೆ. ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಪಶ್ಚಿಮ ಬಂಗಾಳ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಪ್ರಮಾಣವನ್ನು ಪ್ರತಿ ಲೀಟರ್‌ಗೆ ಒಂದು ರೂಪಾಯಿಯಷ್ಟು ಇಳಿಸಿದ್ದರೆ ಜನವರಿ 29ರಂದು ರಾಜಸ್ಥಾನ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ದರವನ್ನು ಶೇ. 38ದಿಂದ ಶೇ.36ಕ್ಕೆ ಇಳಿಸಿ ತೆರಿಗೆ ಇಳಿಸಿದ ಮೊದಲ ರಾಜ್ಯ ಎನಿಸಿಕೊಂಡಿತ್ತು.
Advertisement
ಅಸ್ಸಾಂ ಕಳೆದ ವರ್ಷ ಕೋವಿಡ್-19 ವಿರುದ್ಧ ಹೋರಾಡಲು ವಿಧಿಸಿದ್ದ 5 ರೂ. ಹೆಚ್ಚುವರಿ ತೆರಿಗೆಯನ್ನು ಫೆಬ್ರವರಿ 12ರಂದು ರದ್ದುಪಡಿಸಿತ್ತು. ಮೇಘಾಲಯವು ಪೆಟ್ರೋಲ್ ಮೇಲೆ 7.40 ರೂ. ಹಾಗೂ ಡೀಸೆಲ್ 7.10 ರೂ. ಕಡಿಮೆ ಮಾಡಿದೆ. ಪೆಟ್ರೋಲ್ ಮೇಲಿನ ವ್ಯಾಟ್ ಶೇ.31.62 ರಿಂದ ಶೇ.20 ಮತ್ತು ಡೀಸೆಲ್ ಮೇಲಿನ ವ್ಯಾಟ್ ಶೇ. 22.95 ರಿಂದ ಶೇ.12ಕ್ಕೆ ಇಳಿಸಿತ್ತು. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ- ಸೀತಾರಾಮನ್ ಮೊದಲ ಪ್ರತಿಕ್ರಿಯೆ
ಎಲ್ಲಿ ಎಷ್ಟು ಕಡಿತವಾಗಿದೆ?
ಒಂದು ಲೀಟರ್ ಪೆಟ್ರೋಲ್, ಡೀಸೆಲ್ ಮೇಲೆ ಮೇಘಾಲಯ 7.4 ರೂ., ಅಸ್ಸಾಂ 5 ರೂ., ರಾಜಸ್ಥಾನ 3 ರೂ., ಪಶ್ಚಿಮ ಬಂಗಾಳ 1 ರೂ. ಕಡಿತ ಮಾಡಿದೆ.
ರಾಜ್ಯ ಕೇಂದ್ರದ ಪಾಲು ಎಷ್ಟು?
ತೈಲದಿಂದಲೇ ರಾಜ್ಯಗಳಿಗೆ ಹೆಚ್ಚಿನ ಆದಾಯ ಬರುತ್ತದೆ. ಈ ಕಾರಣಕ್ಕೆ ತೈಲವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ರಾಜ್ಯಗಳು ಒಪ್ಪಿಗೆ ನೀಡುತ್ತಿಲ್ಲ. ಹೀಗಾಗಿ ಪೆಟ್ರೋಲ್-ಡೀಸೆಲ್‌ನ ತೆರಿಗೆ ಪಾಲಿನಲ್ಲಿ ಅಧಿಕ ಪಾಲು ರಾಜ್ಯಗಳಿಗೆ ಹೋಗುತ್ತದೆ.
ಉದಾಹರಣೆಗೆ ಒಂದು ಲೀಟರ್ ಪೆಟ್ರೋಲ್ ಬೆಲೆ 90 ರೂ. ಇದ್ದರೆ ಇದರಲ್ಲಿ ಕೇಂದ್ರ ಸರಕಾರಕ್ಕೆ 32 ರೂ. ಅಬಕಾರಿ ಸುಂಕದ ರೂಪದಲ್ಲಿ ಸಿಗುತ್ತದೆ. ಸಿಕ್ಕಿದ ಹಣದಲ್ಲಿ ಶೇ.70ರಷ್ಟು ರಾಜ್ಯಗಳಿಗೆ ಮರು ಹಂಚಿಕೆಯಾಗುತ್ತದೆ. ಇದರಿಂದಾಗಿ ಕೇಂದ್ರ ಕೇಂದ್ರ ಸರ್ಕಾರಕ್ಕೆ 10 ರಿಂದ 13 ರೂ. ಮಾತ್ರ ಸಿಗುತ್ತದೆ. ರಾಜ್ಯಗಳಿಗೆ ವ್ಯಾಟ್ ಮತ್ತು ಕೇಂದ್ರೀಯ ಅಬಕಾರಿ ಸುಂಕದ ಪಾಲು ಸೇರಿ ಒಟ್ಟು 40-42 ರೂ. ತೆರಿಗೆ ಆದಾಯ ಸಿಗುತ್ತದೆ.