– ಕೇಂದ್ರ ಆರೋಗ್ಯ ಸಚಿವರಿಗೂ ತಿಳಿಸಿದ್ರೂ ಸಿಗಲಿಲ್ಲ
– ಬೆಂಗಳೂರಿನಲ್ಲಿ ಶವ ಸುಡೋಕು ಜಾಗ ಇಲ್ಲ
ಶಿವಮೊಗ್ಗ: ನನಗೆ ತುಂಬಾ ಬೇಕಾದ ವ್ಯಕ್ತಿಯೊಬ್ಬರಿಗೆ ದೆಹಲಿಯಲ್ಲಿ ಆಕ್ಸಿಜನ್ ಬೆಡ್ ಸಿಗಲಿಲ್ಲ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಗಮನಕ್ಕೆ ತಂದೆ. ನಂತರ ಜೋಷಿ ಅವರು ಕೇಂದ್ರ ಆರೋಗ್ಯ ಸಚಿವರಿಗೆ ತಿಳಿಸಿದರೂ ಬೆಡ್ ಸಿಗಲಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅಸಹಾಯಕತೆ ಹೊರ ಹಾಕಿದ್ದಾರೆ.
Advertisement
ಶಿವಮೊಗ್ಗದ ಗಾಂಧಿ ಬಜಾರಿನಲ್ಲಿ ಮಾಸ್ಕ್ ಧರಿಸುವ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಅಭಿಯಾನ ನಡೆಸಿದರು. ನಂತರ ಮಾಧ್ಯಮದವರ ಜೊತೆ ಮಾತನಾಡಿದ ಸಚಿವ ಈಶ್ವರಪ್ಪ, ಕೊರೊನಾ ಎರಡನೇ ಅಲೆ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿಯೇ ಸರ್ಕಾರ ಕೆಲವು ಕಠಿಣ ನಿಲುವು ಕೈಗೊಂಡಿದ್ದು ಸಾರ್ವಜನಿಕರು ಹಾಗೂ ವರ್ತಕರು ಸಹಕರಿಸಬೇಕು. ಜೀವ ಇದ್ದರೆ ಜೀವನ. ಹೀಗಾಗಿ ಮನೆಯಲ್ಲಿಯೇ ಇರುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
Advertisement
Advertisement
ಕೋವಿಡ್ ಬಗ್ಗೆ ಶಿವಮೊಗ್ಗ ಜಿಲ್ಲೆಯಲ್ಲಿ ಸಾಕಷ್ಟು ಜಾಗೃತಿ ಆಗಿದೆ. ಕೋವಿಡ್ ಕಡಿಮೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಸಾಕಷ್ಟು ಶ್ರಮ ಹಾಕಿದ್ದಾರೆ. ದೆಹಲಿಯಲ್ಲಿ ಹಾಹಾಕಾರ ಇದೆ. ಬೆಂಗಳೂರಿನಲ್ಲಿ ಶವ ಸುಡೋದಕ್ಕೆ ಜಾಗ ಇಲ್ಲ. ಅಂಬ್ಯುಲೆನ್ಸ್ ಗಳು ಸಾಲುಗಟ್ಟಿ ನಿಂತಿವೆ ಇಂತಹ ಪರಿಸ್ಥಿತಿ ಇದೆ. ಆದರೆ ಶಿವಮೊಗ್ಗವನ್ನು ದೆಹಲಿ ಅಥವಾ ಬೆಂಗಳೂರಿಗೆ ಹೋಲಿಕೆ ಮಾಡುವ ಆಗಿಲ್ಲ. ಆದರೂ ಅಂತಹ ಪರಿಸ್ಥಿತಿ ಬರಬಾರದು ಎಂತಾದರೆ ಸಾರ್ವಜನಿಕರು ಜಾಗೃತರಾಗಿ ಇರಬೇಕು ಎಂದು ಸಚಿವ ಈಶ್ವರಪ್ಪ ತಿಳಿಸಿದರು.