DistrictsKarnatakaLatestMain PostRaichur

ನದಿಯಲ್ಲಿ ನೀರು ಕುಡಿಯುತ್ತಿದ್ದ ಬಾಲಕನನ್ನ ಎಳೆದೊಯ್ದ ಮೊಸಳೆ

– ಜೊತೆಯಲ್ಲಿದ್ದ ಐವರು ಗೆಳೆಯರು ಪಾರು

ರಾಯಚೂರು: ನದಿಯಲ್ಲಿ ನೀರು ಕುಡಿಯುತ್ತಿದ್ದ ಬಾಲಕನನ್ನ ಮೊಸಳೆ ಎಳೆದೊಯ್ದ ಘಟನೆ ರಾಯಚೂರು ತಾಲೂಕಿನ ಡೊಂಗರಾಂಪುರ ಬಳಿ ಕೃಷ್ಣ ನದಿಯಲ್ಲಿ ನಡೆದಿದೆ.

12 ವರ್ಷದ ಮಲ್ಲಿಕಾರ್ಜುನ್ ಗೆಳೆಯರ ಜೊತೆ ದನಗಳನ್ನ ಮೇಯಿಸಲು ಹೋಗಿದ್ದನು. ಮಧ್ಯಾಹ್ನ ಸುಮಾರು ಎರಡು ಗಂಟೆಗೆ ಐವರು ಸ್ನೇಹಿತರ ಜೊತೆ ನದಿ ದಡದಲ್ಲಿ ನೀರು ಕುಡಿಯುತ್ತಿರುವಾಗ ಮೊಸಳೆ ದಾಳಿ ನಡೆಸಿ ಮಲ್ಲಿಕಾರ್ಜುನನ್ನು ಎಳೆದುಕೊಂಡು ಹೋಗಿದೆ. ಜೊತೆಯಲ್ಲಿದ್ದ ಐವರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿ, ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳೀಯ ಮೀನುಗಾರರ ಎರಡು ತೆಪ್ಪ ಬಳಸಿ ಮಲ್ಲಿಕಾರ್ಜುನನಿಗಾಗಿ ಶೋಧಕಾರ್ಯ ನಡೆಸಿದರು ಬಾಲಕ ಸುಳಿವು ಪತ್ತೆಯಾಗಿಲ್ಲ. ಸದ್ಯ ರಾತ್ರಿಯಾದ ಹಿನ್ನೆಲೆ ಶೋಧ ಕಾರ್ಯಚರಣೆಯನ್ನ ಸ್ಥಗಿತಗೊಳಿಸಲಾಗಿದೆ. ಮಾಹಿತಿ ನೀಡಿದರೂ ಯಾಪಲದಿನ್ನಿ ಠಾಣೆ ಪೊಲೀಸರು ಸ್ಥಳಕ್ಕೆ ತಡವಾಗಿ ಆಗಮಿಸಿದ್ದಾರೆ. ಅಲ್ಲದೆ ಯಾವುದೇ ಪತ್ತೆಕಾರ್ಯ ಕೂಡ ನಡೆಸಿಲ್ಲ.

ಬೆಳಗ್ಗೆ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಲಿದ್ದಾರೆ. ನದಿಯ ತಗ್ಗು ಪ್ರದೇಶಗಳಲ್ಲಿ ಹೆಚ್ಚು ನೀರು ನಿಂತಿದ್ದು ಮೊಸಳೆಗಳ ಕಾಟ ಹೆಚ್ಚಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ನದಿ ದಂಡೆಯಲ್ಲಿ ಮಲ್ಲಿಕಾರ್ಜುನ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಯಾಪಲದಿನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published.

Back to top button