ಚೆನ್ನೈ: ಮಕ್ಕಳನ್ನು ಕಾರಿನೊಳಗೆ ಬಿಟ್ಟು ತಂದೆ-ತಾಯಿ ಶಾಪಿಂಗ್ ಹೋಗಿ ಬರುವಾಗ ಉಸಿರುಗಟ್ಟಿ ಸಾವನ್ನಪ್ಪಿದ್ದನ್ನು ಕೇಳಿದ್ದೇವೆ. ಆದರೆ ಇಲ್ಲಿ ಮಕ್ಕಳೇ ನಜ್ಜುಗುಜ್ಜಾದ ಕಾರಿನ ಒಳಗಡೆ ಹೋಗಿ ಆಟವಾಡುತ್ತಿರುವಾಗ ಉಸಿರುಗಟ್ಟಿ ಮೃತಪಟ್ಟ ದುರಂತ ಘಟನೆಯೊಂದು ನಡೆದಿದೆ.
Advertisement
ಹೌದು. ಈ ಘಟನೆ ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಗುರುವಾರ ಸಂಜೆ ನಡೆದಿದೆ. ಮೃತ ದುರ್ದೈವಿ ಮಕ್ಕಳನ್ನು ರಾಜೇಶ್ವರಿ(4) ಹಾಗೂ ವನಿತಾ (7) ಎಂದು ಗುರುತಿಸಲಾಗಿದ್ದು, ಇಬ್ಬರೂ ಕಲದೀಪಮಂಗಲಂ ನಿವಾಸಿಗಳಾಗಿದ್ದಾರೆ. ಮೃತ ಮಕ್ಕಳಿಬ್ಬರು ಸ್ನೇಹಿತರಾಗಿದ್ದು, ಇವರ ತಂದೆ ಕೃಷಿ ಕಾರ್ಮಿಕರಾಗಿದ್ದಾರೆ.
Advertisement
Advertisement
ಗುರುವಾರ ಸಂಜೆ ಇಬ್ಬರು ಕೂಡ ಹಾನಿಗೊಳಗಾದ ಕಾರಿನಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕಳೆದ 2 ವರ್ಷಗಳ ಹಿಂದೆ ಈ ಕಾರು ಅಪಘಾತಕ್ಕೀಡಾಗಿತ್ತು. ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಳಕೆಯಿಲ್ಲದೆ ಅನಾಥವಾಗಿ ಬಿದ್ದಿತ್ತು. ಈ ಕಾರಿನ ಒಳಗಡೆ ಬಾಲಕಿಯರು ಹೋಗಿ ಆಟವಾಡಿದ್ದಾರೆ. ನಂತರ ಹೊರಗಡೆ ಬರಲು ಸಾಧ್ಯವಾಗಿರಲಿಲ್ಲ. ಯಾಕೆಂದರೆ ಅಪಘಾತಕ್ಕೀಡಾದ ಪರಿಣಾಮ ಕಾರಿನ ನಾಲ್ಕು ಗ್ಲಾಸ್ ಗಳು ಕೂಡ ಜಾಮ್ ಆಗಿದ್ದವು. ಹೀಗಾಗಿ ಕಾರೊಳಗೆ ಉಸಿರುಗಟ್ಟಿ ಮಕ್ಕಳು ಸಾವನ್ನಪ್ಪಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಕಾರಿನ ಪಕ್ಕ ಹೋಗುತ್ತಿದ್ದ ದಾರಿ ಹೋಕರು ಮಕ್ಕಳು ಕಾರಿನ ಒಳಗಡೆ ಪ್ರಜ್ಞಾಹೀನರಾಗಿ ಬಿದ್ದಿದ್ದನ್ನು ಗಮನಿಸಿದ್ದಾರೆ. ಅಲ್ಲದೆ ಅವರ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಮಕ್ಕಳ ಕುಟುಂಬಸ್ಥರು, ಬಾಲಕಿಯರನ್ನು ಕಾರಿನಿಂದ ಹೊರಗೆ ತೆಗೆದು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅದಾಗಲೇ ಮಕ್ಕಳು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ಬಳಿಕ ಮಕ್ಕಳ ಮೃತದೇಹವನ್ನು ಅವರ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಈ ಬಗ್ಗೆ ತನಿಖೆ ನಡೆಸುತ್ತೇವೆ. ಇದೂವರೆಗೂ ಮಕ್ಕಳ ಪೋಷಕರು ಈ ಬಗ್ಗೆ ಪೊಲೀಸ್ ಠಾಣೆಗೆ ಯಾವುದೇ ದೂರು ನೀಡಿಲ್ಲ. ಈ ಹಿನ್ನೆಲೆಯಲ್ಲಿ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.