ಶಿವಮೊಗ್ಗ: ಕಳೆದ 15 ದಿನಗಳ ಹಿಂದೆ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿದಿದ್ದು, ಜಿಲ್ಲೆಯ ಹಲವೆಡೆ ಸೇತುವೆ, ರಸ್ತೆ ಕುಸಿದಿವೆ. ಹೀಗಾಗಿ ಸೇತುವೆ ರಸ್ತೆ ಕುಸಿದಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೊಸನಗರದಿಂದ ನಗರ-ನಾಗೋಡಿ ಮಾರ್ಗವಾಗಿ ಕೊಲ್ಲೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766(ಸಿ)ರಲ್ಲಿ ಬರುವ ನಗರ-ಚಿಕ್ಕಪೇಟೆ ಮಧ್ಯದ ಸೇತುವೆ ಕುಸಿದಿರುವುದರಿಂದ ಮತ್ತು ಶಿವಮೊಗ್ಗ, ತೀರ್ಥಹಳ್ಳಿ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ವಿಹಂಗಮ ನರ್ಸರಿ ತಿರುವಿನಿಂದ ಭಾರತೀಪುರ ತಿರುವಿನವರೆಗೆ ರಸ್ತೆ ಕುಸಿದಿರುವುದರಿಂದ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ, ಪರ್ಯಾಯ ಮಾರ್ಗಗಳಲ್ಲಿ ಸಂಚಾರಕ್ಕೆ ಜಿಲ್ಲಾಧಿಕಾರಿ ಅವರು ತಾತ್ಕಾಲಿಕ ಆದೇಶ ಹೊರಡಿಸಿದ್ದಾರೆ.
Advertisement
Advertisement
ಪರ್ಯಾಯ ಮಾರ್ಗಗಳು
ಶಿವಮೊಗ್ಗ ಮಾರ್ಗದಿಂದ ಕುಂದಾಪುರ ಮತ್ತು ಕುಂದಾಪುರದಿಂದ-ಶಿವಮೊಗ್ಗಕ್ಕೆ ಸಂಚರಿಸುವ ಭಾರೀ ವಾಹನಗಳು ಶಿವಮೊಗ್ಗ-ಸಾಗರ-ಹೊನ್ನಾವರ(ಎನ್ಹೆಚ್69) ಮಾರ್ಗ.
Advertisement
ಶಿವಮೊಗ್ಗದಿಂದ ಉಡುಪಿ-ಮಂಗಳೂರು ಮತ್ತು ಮಂಗಳೂರಿನಿಂದ ಉಡುಪಿ, ಶಿವಮೊಗ್ಗಕ್ಕೆ ಸಂಚರಿಸುವ ಭಾರೀ ವಾಹನಗಳು ಶಿವಮೊಗ್ಗ-ಕೊಪ್ಪ-ಕಾರ್ಕಳ-ಮಂಗಳೂರು (ಎನ್ಹೆಚ್ 57, 65 ಮತ್ತು ಎನ್ಹೆಚ್ 169) ಮಾರ್ಗ.
Advertisement
ಶಿವಮೊಗ್ಗದಿಂದ ಕುಂದಾಪುರಕ್ಕೆ ಸಂಚರಿಸುವ ಭಾರೀ ವಾಹನಗಳು ಶಿವಮೊಗ್ಗ-ಹೊಸನಗರ-ಹುಲಿಕಲ್ ಘಾಟ್-ಸಿದ್ದಾಪುರ-ಕುಂದಾಪುರ ಮಾರ್ಗದಲ್ಲಿ ಸಂಚರಿಸುವುದು. ಶಿವಮೊಗ್ಗದಿಂದ ಮಂಗಳೂರಿಗೆ ಸಂಚರಿಸುವ ಭಾರೀ ವಾಹನಗಳು ಶಿವಮೊಗ್ಗ-ನರಸಿಂಹರಾಜಪುರ-ಕೊಪ್ಪ-ಶೃಂಗೇರಿ-ಕಾರ್ಕಳ-ಮಂಗಳೂರು ಮಾರ್ಗದಲ್ಲಿ ಸಂಚರಿಸಬಹುದಾಗಿದೆ.
ಕುಸಿದಿರುವ ಸೇತುವೆ ಮತ್ತು ರಸ್ತೆ ದುರಸ್ತಿ ಆಗುವವರೆಗೆ ವಾಹನಗಳ ಸಂಚಾರವನ್ನು ನಿಷೇಧಿಸಿ ಪರ್ಯಾಯ ಮಾರ್ಗಗಳಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರ ವ್ಯವಸ್ಥೆಗೊಳಿಸಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಆದೇಶಿಸಿದ್ದಾರೆ.