– ಸಾಮಾಜಿಕ ಅಂತರ ಕಾಯುವ ದೃಷ್ಟಿಯಿಂದ ಕ್ರಮ
– ಪರೀಕ್ಷೆಯ ಹಿಂದಿನ ದಿನ ಪೋಷಕರ ಮೊಬೈಲ್ಗೆ ಎಸ್ಎಂಎಸ್
ಧಾರವಾಡ: ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯ ಕೊಠಡಿ ಹಾಗೂ ರಿಜಿಸ್ಟರ್ ನಂಬರ್ನ ಡೆಸ್ಕ್ ಹುಡುಕುವ ಅಗತ್ಯವಿಲ್ಲ ಬದಲಿಗೆ ವಿದ್ಯಾರ್ಥಿಗಳ ಪೋಷಕರ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಕಳುಹಿಸುವ ವ್ಯವಸ್ಥೆಯನ್ನು ಧಾರವಾಡ ಶಿಕ್ಷಣ ಇಲಾಖೆ ಮಾಡಿದೆ.
Advertisement
ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎಲ್.ಹಂಚಾಟಿ ಈ ಉಪಾಯ ಮಾಡಿದ್ದು, ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿ ಹುಡುಕುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವದು ಸುಲಭವಲ್ಲ ಹೀಗಾಗಿ ಪರೀಕ್ಷೆಯ ಹಿಂದಿನ ದಿನ ಎಲ್ಲ ವಿದ್ಯಾರ್ಥಿಗಳ ಪೋಷಕರ ಮೊಬೈಲ್ಗೆ ಎಸ್ಎಂಎಸ್ ಮೂಲಕ ಶಾಲೆ ಅಥವಾ ಕಾಲೇಜಿನ ಹೆಸರು, ಕೊಠಡಿ ಸಂಖ್ಯೆಯನ್ನು ತಿಳಿಸಲಿದೆ. ವಿದ್ಯಾರ್ಥಿಗಳು ನೇರವಾಗಿ ಅವರ ಕೊಠಡಿಗೆ ತೆರಳಿ ಪರೀಕ್ಷೆ ಬರೆಯಬಹುದಾಗಿದೆ.
Advertisement
Advertisement
ಇದರಿಂದ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೊಠಡಿ ಹುಡುಕುವ ಪರದಾಟ ತಪ್ಪುತ್ತದೆ. ಅಲ್ಲದೆ ವಿದ್ಯಾರ್ಥಿಗಳು ಗುಂಪು ಸೇರುವುದನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಧಾರವಾಡ ಜಿಲ್ಲೆಯಲ್ಲಿ ಇರುವ ಖಾಸಗಿ ಕೊಚಿಂಗ್ ಸೆಂಟರ್ ಹಾಗೂ ಎನ್ಜಿಒಗಳು ಎಸ್ಎಸ್ಎಲ್ಸಿ ಪರೀಕ್ಷೆ ನಿರಾತಂಕವಾಗಿ ನಡೆಸಲು ಕೈಜೋಡಿಸಿವೆ. ಕೆಲವು ಎನ್ಜಿಒಗಳು ಪರೀಕ್ಷಾ ಕೇಂದ್ರಗಳನ್ನು ದತ್ತು ಪಡೆದುಕೊಂಡು ಪರೀಕ್ಷೆ ಆರಂಭದಿಂದ ಕೊನೆವರೆಗೂ ಸಂಪೂರ್ಣವಾಗಿ ಸ್ಯಾನಿಟೈಸ್ ಸೇರಿದಂತೆ ಕೊರೊನಾ ಮುಕ್ತ ಕೇಂದ್ರವನ್ನಾಗಿ ಮಾಡಲು ಕಾರ್ಯನಿರ್ವಹಿಸಲಿವೆ. ಇನ್ನೂ ಕೆಲವರು ಮಕ್ಕಳಿಗೆ ಆತ್ಮ ಸ್ಥೈರ್ಯ ತುಂಬುವ ಮತ್ತು ಜಾಗೃತಿಗಾಗಿ ಫಲಕಗಳನ್ನು ತಯಾರಿಸಿದ್ದಾರೆ. ಪರೀಕ್ಷೆಗೆ ಬರುವ ಮಕ್ಕಳ ಶಾಲೆಯ ಎದುರು ಇವುಗಳನ್ನ ಪ್ರದರ್ಶನ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
Advertisement
ವಿದ್ಯಾಕಾಶಿ ಧಾರವಾಡ ಜಿಲ್ಲೆಯಲ್ಲಿಯೂ ಕೊರೊನಾ ಆತಂಕ ಮಧ್ಯೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಹಾಸ್ಟೆಲ್ನಲ್ಲಿರುವ 342 ವಿದ್ಯಾರ್ಥಿಗಳು ಸೇರಿ ಒಟ್ಟು 27,841 ಜನ ಪರೀಕ್ಷೆ ಬರೆಯುತ್ತಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿ ದೀಪಾ ಚೋಳನ್ ಮಾಹಿತಿ ನೀಡಿದ್ದು, ಪರೀಕ್ಷೆಗೆ ಎಲ್ಲ ರೀತಿಯ ಸಿದ್ಧತೆ ನಡೆಸಲಾಗಿದ್ದು, ಪರೀಕ್ಷೆಗೆ ಸನ್ನದ್ಧರಾಗಿದ್ದೇವೆ. ಜಿಲ್ಲೆಯಲ್ಲಿ ಒಟ್ಟು 90 ಜೊತೆಗೆ ಹೆಚ್ಚುವರಿ ಕೇಂದ್ರ ಸೇರಿ, ಒಟ್ಟು 107 ಪರೀಕ್ಷಾ ಕೇಂದ್ರಗಳಲ್ಲಿ 27,841 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಎಲ್ಲ ಕೇಂದ್ರಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ, ಪ್ರತಿ ಕೇಂದ್ರಕ್ಕೂ ಓರ್ವ ಮುಖ್ಯ ಅಧೀಕ್ಷಕರ ನಿಯೋಜನೆ ಮಾಡಲಾಗಿದೆ. ಅಲ್ಲದೆ ಪ್ರತಿ ಕೇಂದ್ರಕ್ಕೂ ಓರ್ವ ಮೊಬೈಲ್ ಸ್ವಾಧಿನಾಧಿಕಾರಿ, ಒಟ್ಟು ಕಸ್ಟೋಡಿಯನ್ ಸಂಖ್ಯೆ 90 ಜನರಿದ್ದು, ಸ್ಕೌಟ್ ಮತ್ತು ಗೈಡ್ಸ್ ಸ್ವಯಂ ಸೇವಕರು, ಪ್ಯಾರಾ ಮೆಡಿಕಲ್ ಸಿಬ್ಬಂದಿ ನಿಯೋಜನೆಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ, ಆರು ಅಡಿ ಡೆಸ್ಕ್ನಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಹಾಗೂ ಮೂರು ಅಡಿಯ ಡೆಸ್ಕ್ನಲ್ಲಿ ಓರ್ವ ವಿದ್ಯಾರ್ಥಿ ಕುಳಿತುಕೊಳ್ಳಲಿದ್ದಾರೆ. ಒಟ್ಟು ಕೇಂದ್ರಗಳ ಪೈಕಿ 46 ನಗರ ಹಾಗೂ 44 ಗ್ರಾಮೀಣ ಪ್ರದೇಶದಲ್ಲಿವೆ. ಈಗಾಗಲೇ ಎಲ್ಲ ಕೇಂದ್ರಗಳನ್ನು ಸ್ಯಾನಿಟೈಸೇಶನ್ ಮಾಡಲಾಗಿದೆ. ಪರೀಕ್ಷೆಗೆ ಮಕ್ಕಳನ್ನು ಕರೆತರಲು 200 ಕೆಎಸ್ಆರ್ಟಿಸಿ ಬಸ್ ಹಾಗೂ 59 ಕಡೆಗಳಲ್ಲಿ ಖಾಸಗಿ ವಾಹನ ಸೌಲಭ್ಯ ಪಡೆದಿದ್ದೇವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.