ಬೆಂಗಳೂರು: ಪರಿಷತ್ ಉಪಸಭಾಪತಿ ಧರ್ಮೇಗೌಡರ ಆತ್ಮಹತ್ಯೆಗೆ ಡಿ.15ರಂದು ನಡೆದ ಕಲಾಪವೇ ಕಾರಣ ಎನ್ನಲಾಗುತ್ತಿದೆ. ಸ್ಪೀಕರ್ ಪದಚ್ಯುತಿಗೊಳಿಸುವ ಸಂದರ್ಭದಲ್ಲಿ ತಳ್ಳಾಟ, ನೂಕಾಟದ ಹೈಡ್ರಾಮಾ ನಡೆದಿತ್ತು.
ಬುದ್ಧಿವಂತರ ಮನೆ ಎಂದು ಕರೆಯಲಾಗುತ್ತಿದ್ದ ಪರಿಷತ್ನಲ್ಲಿ ನಡೆದ ಹೈಡ್ರಾಮಾಕ್ಕೆ ಸಾರ್ವಜನಿಕಾ ವಲಯದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಈ ಘಟನೆಯ ನಂತರ ಧರ್ಮೇಗೌಡರು ಬಹಳ ನೊಂದಿದ್ದರು.
Advertisement
Advertisement
ಅಂದು ಏನಾಗಿತ್ತು?
ಅನಿರ್ದಿಷ್ಟಾವಧಿಗೆ ಕಲಾಪವನ್ನು ಮುಂದೂಡಿದ ನಂತರ ಮೊದಲ ಬಾರಿಗೆ ಕಲಾಪವನ್ನು ಮತ್ತೆ ನಡೆಸುವ ಮೂಲಕ ರಾಜ್ಯ ವಿಧಾನ ಪರಿಷತ್ ಇತಿಹಾಸ ಸೃಷ್ಟಿಸಿ ಕಪ್ಪು ಚುಕ್ಕೆಯನ್ನು ಅಂಟಿಸಿಕೊಂಡಿತ್ತು. ಒಂದೇ ಕುರ್ಚಿಗಾಗಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸದಸ್ಯರು ಬಡಿದಾಡಿದ ಬಳಿಕ ಮತ್ತೊಮ್ಮೆ ಅನಿರ್ದಿಷ್ಟಾವಧಿಗೆ ಕಲಾಪವನ್ನು ಮುಂದೂಡಿಕೆ ಮಾಡಲಾಗಿದೆ.
Advertisement
ಹೈಡ್ರಾಮಾಕ್ಕೆ ಕಾರಣ ಏನು?
ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಆದರೆ ಸಭಾಪತಿಗಳು ಅವಿಶ್ವಾಸ ನಿರ್ಣಯ ಕ್ರಮಬದ್ಧವಾಗಿಲ್ಲ ಎಂದು ಹೇಳಿ ತಿರಸ್ಕೃತಗೊಳಿಸಿದ್ದರು. ಇದು ಬಿಜೆಪಿ ಸದಸ್ಯರನ್ನು ಕೆರಳಿಸಿತ್ತು. ಡಿ.14ರವರೆಗೆ ತನ್ನ ನಿರ್ಧಾರ ಪ್ರಕಟಿಸದ ಜೆಡಿಎಸ್ ಪರಿಷತ್ನಲ್ಲಿ ಬಿಜೆಪಿಯ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಿತ್ತು. ಜೆಡಿಎಸ್ನಿಂದ ಬೆಂಬಲ ಸಿಕ್ಕಿದ ಪರಿಣಾಮ ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ ನೀಡದೇ ಇದ್ದರೂ ಬಿಜೆಪಿ ಸಭಾಪತಿ ಸ್ಥಾನಕ್ಕೆ ಧರ್ಮೇಗೌಡರನ್ನು ಕೂರಿಸಿತ್ತು. ನಂತರದ 20 ನಿಮಿಷದಲ್ಲಿ ಭಾರೀ ಹೈಡ್ರಾಮಾ ನಡೆದು ನಡೆಯಬಾರದ ಘಟನೆಗಳಿಗೆ ಪರಿಷತ್ ಸಾಕ್ಷಿ ಆಯ್ತು.
Advertisement
ಟೀಕೆ ಏನಿತ್ತು?
ಸಭಾಪತಿ ಸೂಚನೆ ಮೇರೆಗೆ ಬೆಳಗ್ಗೆ ಕಲಾಪ ಆರಂಭಕ್ಕೆ ಮೊದಲು ಬೆಲ್ ಹಾಕಲಾಗುತ್ತದೆ. ಬೆಲ್ ಮುಗಿದ ಮೇಲೆ ಸಭಾಪತಿಗಳು ಪೀಠದ ಮೇಲೆ ಕುಳಿತು ಕಲಾಪ ಪ್ರಾರಂಭ ಮಾಡುವುದು ಸಂಪ್ರದಾಯ. ಆದರೆ ಬೆಲ್ ಹೊಡೆಯುವ ಸಮಯದಲ್ಲಿ ಉಪ ಸಭಾಪತಿ ಧರ್ಮೇಗೌಡರು ಪೀಠಕ್ಕೆ ಬಂದು ಕುಳಿತಿದ್ದರು. ಬೆಲ್ ಹೊಡೆಯುವ ಮೊದಲೇ ಪೀಠದಲ್ಲಿ ಧರ್ಮೇಗೌಡರು ಕುಳಿತಿದ್ದು ಸರಿಯಲ್ಲ ಎಂಬ ಟೀಕೆಯನ್ನು ಕಾಂಗ್ರೆಸ್ ನಾಯಕರು ವ್ಯಕ್ತಪಡಿಸಿದ್ದರು.
ಸಭಾಪತಿ ಇಲ್ಲದೆ ವೇಳೆ ಅಥವಾ ಸಭಾಪತಿ ಸೂಚನೆ ಮೇಲೆ ಉಪ ಸಭಾಪತಿಗಳು ಕಲಾಪ ನಡೆಸಲು ಅಧಿಕಾರವಿದೆ. ಅದನ್ನು ಹೊರತು ಪಡಿಸಿ ಬೆಲ್ ಹೊಡೆಯುವಾಗ ಕುಳಿತುಕೊಳ್ಳುವಂತೆ ಇಲ್ಲ.
ಉಪ ಸಭಾಪತಿ ಕುಳಿತ ಬಳಿಕ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಆಗಮಿಸುವ ಬಾಗಿಲನ್ನು ಬಿಜೆಪಿ ಸದಸ್ಯರು ಮುಚ್ಚಿದ್ದರು. ಇದು ನಿಯಮಬಾಹಿರವಾಗಿದ್ದು ಮಾರ್ಷಲ್ಗಳೇ ಬಾಗಿಲು ಮತ್ತು ಮುಚ್ಚುವ ಕೆಲಸ ಮಾಡಬೇಕು. ಆದರೆ ಬಾಗಿಲನ್ನು ಮುಚ್ಚಿದ್ದಾರೆ ಎಂದು ಕಾಂಗ್ರೆಸ್ ಸದಸ್ಯ ನಜೀರ್ ಅಹಮದ್ ಸೇರಿ ಇತರರು ಡೋರ್ ಕಾಲಿನಲ್ಲಿ ಒದ್ದಿದ್ದು ಸರಿಯಲ್ಲ.
ಪೀಠದ ಮೇಲೆ ಕುಳಿತ ಉಪಸಭಾಪತಿಯನ್ನ ಎಬ್ಬಿಸಲು ಅಧಿಕಾರ ಇರುವುದು ಸಭಾಪತಿ ಸೂಚನೆ ಮೇರೆಗೆ ಮಾರ್ಷಲ್ಗಳಿಗೆ ಮಾತ್ರ. ಕಾಂಗ್ರೆಸ್ನ ನಾರಾಯಣಸ್ವಾಮಿ ಪೀಠದ ಮೇಲೆ ಕುಳಿತ ಉಪ ಸಭಾಪತಿ ಕತ್ತು ಪಟ್ಟಿ ಇಳಿದು ಎಳೆದಾಡಿದ್ದರು. ಇದು ನಿಯಮ ಬಾಹಿರ.
ಧರ್ಮೇಗೌಡರನ್ನು ಎಬ್ಬಿಸಿ ಕಾಂಗ್ರೆಸ್ ಸದಸ್ಯರು ಚಂದ್ರಶೇಖರ ಪಾಟೀಲರನ್ನು ಕೂರಿಸಿದ್ದು ಇನ್ನೊಂದು ತಪ್ಪು. ಸಭಾಪತಿ, ಉಪ ಸಭಾಪತಿ ಇಲ್ಲದ ವೇಳೆ ಸಭಾಪತಿ ಮೊದಲೇ ಸೂಚಿಸಿದ ಸದಸ್ಯರು ಮಾತ್ರ ಪೀಠದ ಮೇಲೆ ಕುಳಿತುಕೊಳ್ಳಬೇಕು. ಆದರೆ ಅ ನಿಯಮ ಗಾಳಿಗೆ ತೂರಿ ಚಂದ್ರಶೇಖರ ಪಾಟೀಲರು ಪೀಠದ ಮೇಲೆ ಕುಳಿತಿದ್ದು ತಪ್ಪು.
ಸಭಾಪತಿಗಳ ಪೀಠಕ್ಕೆ ಇತಿಹಾಸದ ಜೊತೆ ಅಪಾರ ಗೌರವ ಇದೆ. ಅ ಪೀಠದ ಮೇಲೆ ಸದಸ್ಯರು ಕುಳಿತಿದ್ದು ತಪ್ಪು. ಪೀಠದ ಮುಂದೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸದಸ್ಯರ ವರ್ತನೆ ಪೀಠಕ್ಕೆ ಮಾಡಿದ ಅಪಮಾನ.
ಕಾಂಗ್ರೆಸ್ ಸದಸ್ಯ ಪೀಠದ ಮೇಲೆ ಕುಳಿತ ಅಂತ ಬಿಜೆಪಿ ಸದಸ್ಯರು ಪೀಠದ ಮೇಲೆ ಕುಳಿತುಕೊಳ್ಳಲು ಮುಂದಾಗಿದ್ದು ಮತ್ತೊಂದು ತಪ್ಪು. ಪೀಠದ ಮುಂದಿನ ಗ್ಲಾಸ್ ಮುರಿದದ್ದು, ಅಜೆಂಡಾ ಕಾಪಿ ಹರಿದು ಹಾಕಿದ್ದು ಪೀಠಕ್ಕೆ ತೋರಿಸಿದ ಅಗೌರವ.
ಯಾವ ಸಮಯದಲ್ಲಿ ಏನಾಯ್ತು?
11:18 – ಪರಿಷತ್ ಬೆಲ್.
11:19 – ಬೆಲ್ ಹೊಡೆಯುವ ವೇಳೆಯೇ ಉಪಸಭಾಪತಿ ಎಲ್.ಧರ್ಮೇಗೌಡ ಪೀಠಾಸೀನ. ಸಭಾಪತಿ ಪ್ರವೇಶ ಬಾಗಿಲು ಬಂದ್ ಮಾಡಿದ ಬಿಜೆಪಿ ಸದಸ್ಯರು.
11:20 – ಕಾಂಗ್ರೆಸ್ ಸದಸ್ಯರ ಆಕ್ಷೇಪ. ಬಾಗಿಲು ಒದ್ದ ಕಾಂಗ್ರೆಸ್ ಸದಸ್ಯ ನಜೀರ್ ಅಹಮದ್
11:22 – ಸಭಾಪತಿ ಪೀಠಕ್ಕೆ ಕಾಂಗ್ರೆಸ್, ಬಿಜೆಪಿ ಮುತ್ತಿಗೆ .
11:25 – ಉಪಸಭಾಪತಿಯನ್ನ ಎಳೆದ ನಾರಾಯಣಸ್ವಾಮಿ.
11:30 – ಸಭಾಪತಿ ಬಾಗಿಲು ತೆರೆದ ಮಾರ್ಷಲ್ಗಳು.
11:32 – ಖಾಲಿಯಿದ್ದ ಪೀಠದ ಮೇಲೆ ಕುಳಿತ ಕಾಂಗ್ರೆಸ್ ಸದಸ್ಯ ಚಂದ್ರಶೇಖರ್ ಪಾಟೀಲ್.
11:33 – ಬಿಜೆಪಿ-ಕಾಂಗ್ರೆಸ್ ಸದಸ್ಯರ ತಳ್ಳಾಟ ನೂಕಾಟ.
11:35 – ಸಭಾಪತಿ ಮುಂದಿನ ಗ್ಲಾಸ್ ಮುರಿದು ಹಾಕಿದ ಕಾಂಗ್ರೆಸ್ ಬಿಜೆಪಿ ಸದಸ್ಯರು.
11:38 – ಮಾರ್ಷಲ್ ಗಳ ಭದ್ರತೆ ಯಲ್ಲಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಆಗಮನ.
11:38 -ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಿದ ಸಭಾಪತಿ.
11:39 – ಸದನದಿಂದ ಹೊರನಡೆದ ಪ್ರತಾಪಚಂದ್ರ ಶೆಟ್ಟಿ.
11:40 – ಸದನದಲ್ಲಿ ಗದ್ದಲ ಗಲಾಟೆ. ಪರಸ್ಪರ ನೂಕಾಟ ತಳ್ಳಾಟ.