– ಸ್ನಾನಘಟ್ಟದ ಬಳಿ ಭಕ್ತರಿಗೆ ಸಂಪೂರ್ಣ ನಿಷೇಧ
ಮಂಗಳೂರು: ಪಶ್ಚಿಮ ಘಟ್ಟದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟ ಮುಳುಗುವ ಭೀತಿ ಎದುರಾಗಿದೆ.
Advertisement
ನೇತ್ರಾವತಿ ನದಿ ನೀರು ತುಂಬಿ ಹರಿಯುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಸ್ನಾನಘಟ್ಟದ ಮೇಲ್ಬಾಗದವರೆಗೂ ನೇತ್ರಾವತಿ ನದಿ ನೀರು ಬರುತ್ತಿದೆ. ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿರುವುದರಿಂದ ನೇತ್ರಾವತಿ ಸ್ನಾನ ಘಟ್ಟದ ಬಳಿ ಭಕ್ತರಿಗೆ ಸಂಪೂರ್ಣವಾಗಿ ನಿಷೇಧ ಹೇರಲಾಗಿದೆ. ಪಶ್ಚಿಮ ಘಟ್ಟದಲ್ಲಿ ಇದೇ ರೀತಿ ಮಳೆ ಮುಂದುವರೆದರೆ ಸ್ನಾನಘಟ್ಟ ಸಂಪೂರ್ಣವಾಗಿ ಮುಳುಗಡೆಯಾಗುವ ಸಾಧ್ಯತೆ ಇದೆ. ಈ ಕುರಿತು ಮೆಚ್ಚೆಚ್ಚರಿಕೆ ವಹಿಸಲಾಗಿದ್ದು, ಸ್ನಾನ ಘಟ್ಟದ ಬಳಿ ಯಾರನ್ನೂ ಬಿಡಲಾಗುತ್ತಿಲ್ಲ.
Advertisement
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದ್ದು, ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಚಿಕ್ಕಮಗಳೂರು, ಕೊಡಗು, ಉಡುಪಿ, ಉತ್ತರ ಕನ್ನಡ, ಧಾರವಾಡ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆ ಕಟ್ಟೆಚ್ಚರ ವಹಿಸಲಾಗಿದೆ.
Advertisement
Advertisement
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಹಿನ್ನೆಲೆ ಮಲೆನಾಡು ಹಾಗೂ ಕರಾವಳಿ ಭಾಗದ ಜಿಲ್ಲೆಗಳನ್ನು ರೆಡ್ ಅಲರ್ಟ್ ಎಂದು ಘೋಷಣೆ ಮಾಡಲಾಗಿದೆ. ಕಂದಾಯ ಸಚಿವ ಆರ್.ಅಶೋಕ್ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, 11 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಮಳೆ ಪರಿಸ್ಥಿತಿ, ಮಳೆ ಮುನ್ಸೂಚನೆ ಹಾಗೂ ಜಲಾಶಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ವೇಳೆ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳನ್ನು ರೆಡ್ ಅಲರ್ಟ್ ಎಂದು ಘೋಷಿಸುವಂತೆ ಸೂಚನೆ ನೀಡಿದ್ದಾರೆ. ಕೊಡಗು, ಧಾರವಾಡ, ಬೆಳಗಾವಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಧ್ಯದಲ್ಲೇ ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ತಂಡಗಳನ್ನು ಕಳುಹಿಸಿ ಕೊಡಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ ಮಳೆಯಿಂದ ಹಾನಿಗೊಳಗಾದವರಿಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.