– ದುಡ್ಡಿನಾಸೆಗೆ ಹೆಂಡ್ತಿ ಕೊಂದು ಜೈಲಲ್ಲಿದ್ದಾನೆ
ಚಿಕ್ಕಮಗಳೂರು: ಮೇಲಾಧಿಕಾರಿಯ ನಕಲಿ ಸಹಿ ಮಾಡಿ ಸರ್ಕಾರದ 1.29 ಕೋಟಿಗೂ ಅಧಿಕ ಹಣವನ್ನ ಗುಳುಂ ಮಾಡಿದ್ದ ದ್ವಿತೀಯ ದರ್ಜೆ ಸಹಾಯಕನಿಗೆ ಜಿಲ್ಲೆಯ ತರೀಕೆರೆ ತಾಲೂಕಿನ ಜೆ.ಎಂ.ಎಫ್.ಸಿ. ನ್ಯಾಯಾಲಯ ಎರಡು ಕೋಟಿ ದಂಡ ಹಾಗೂ ಆರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.
ಶಿವಮೊಗ್ಗ ಮೂಲದ ಮೋಹನ್ನಿಗೆ ಶಿಕ್ಷೆ ವಿಧಿಸಲಾಗಿದೆ. 2009ರಲ್ಲಿ ತರೀಕೆರೆ ತಾಲೂಕಿನ ಅರಣ್ಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಅಧಿಕಾರಿಗಳ ಸಹಿಯನ್ನ ನಕಲಿ ಮಾಡಿ 1 ಕೋಟಿ 29 ಲಕ್ಷ 8 ಸಾವಿರದ 451 ರೂಪಾಯಿ ಹಣವನ್ನ ವಂಚಿಸಿ ಮೋಸ ಮಾಡಿದ್ದನು. ಈ ಹಣವನ್ನ ತನ್ನ ಹೆಂಡತಿ ಅಕೌಂಟ್ಗೆ ಟ್ರಾನ್ಸ್ ಫರ್ ಮಾಡಿದ್ದ.
Advertisement
Advertisement
ಪತ್ನಿ ಸರ್ಕಾರದ ಹಣವನ್ನ ಹೀಗೆ ದುರುಪಯೋಗ ಮಾಡಿಕೊಳ್ಳಬಾರದೆಂದು ಪತಿಯ ವಿರುದ್ಧವೇ ತಿರುಗಿ ಬಿದ್ದಿದ್ದರು. ಆದರೆ ಸರ್ಕಾರದ ಹಣದ ಆಸೆಗೆ ಪತ್ನಿಯ ಕೊಲೆ ಮಾಡಿದ್ದನು. ಮೋಹನ್ ಪತ್ನಿಯನ್ನ ಕೊಲೆ ಮಾಡಿದ್ದ ಕೇಸಲ್ಲಿ ಈಗಾಗಲೇ ಶಿವಮೊಗ್ಗದ ಜೈಲಿನಲ್ಲಿದ್ದಾನೆ. ಯಾವಾಗ ಸರ್ಕಾರದ ಹಣ ದುರುಪಯೋಗವಾಯ್ತೋ ಆಗ ಅರಣ್ಯ ಇಲಾಖೆಯ ಆರ್ಎಫ್ಓ ತರೀಕೆರೆ ಠಾಣೆಯಲ್ಲಿ ದೂರು ನೀಡಿದ್ದರು.
Advertisement
Advertisement
ಪ್ರಕರಣ ದಾಖಲಿಸಿಕೊಂಡ ತರೀಕೆರೆ ಪೊಲೀಸರು ಮೋಹನ್ ಬಗ್ಗೆ ಮಾಹಿತಿ ಕಲೆ ಹಾಕಿದ ಸಬ್ ಇನ್ಸ್ಪೆಕ್ಟರ್ ಶರಣಪ್ಪ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನಪ್ಪ ಆರೋಪಿ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದರು. 2009 ರಿಂದ ಸುದೀರ್ಘ ವಿಚಾರಣೆ ನಡೆಸಿದ ತರೀಕೆರೆ ಜೆಎಂಎಫ್ಸಿ ನ್ಯಾಯಾಲಯ ಮೋಹನ್ ಗೆ ಎರಡು ಕೋಟಿ ದಂಡ ಹಾಗೂ ಆರು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಮೋಹನ್ ಸರ್ಕಾರಕ್ಕೆ ದಂಡದ ರೂಪವಾಗಿ ಎರಡು ಕೋಟಿ ಹಣವನ್ನ ನೀಡದ್ದಿದ್ದರೆ ಮತ್ತೆ ಮೂರು ವರ್ಷಗಳ ಕಾಲ ಹೆಚ್ಚಿನ ಜೈಲು ಶಿಕ್ಷೆ ವಿಧಿಸುವಂತೆ ನ್ಯಾಯಾಲಯ ಆದೇಶಿಸಿದೆ. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ್ದ ಜೆಎಂಎಫ್ಸಿ ನ್ಯಾಯಾಲಯದ ಹಿರಿಯ ಸಿಜೆಎಂಸಿ ನಂಜೇಗೌಡರವರು ಆರೋಪಿಗೆ ಎರಡು ಕೋಟಿ ದಂಡ ಹಾಗೂ ಆರು ವರ್ಷ ಜೈಲು ಶಿಕ್ಷೆಯನ್ನ ಪ್ರಕಟಿಸಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಗೋವಿಂದರಾಜ್ ಅವರು ವಾದ ಮಂಡಿಸಿದ್ದರು. ಸರ್ಕಾರದ ಕಣ್ಣಿಗೆ ಮಣ್ಣೆರಚಿ ಹಣ ಮಾಡೋ ಭ್ರಷ್ಟ ಅಧಿಕಾರಿಗಳಿಗೆ ಈ ತೀರ್ಪು ಚಳಿ-ಜ್ವರ ತರಿಸುವಂತದ್ದಾಗಿರೋದರಲ್ಲಿ ಯಾವುದೇ ಅನುಮಾನವಿಲ್ಲ. ನಾಲ್ಕು ಜನರಿಗೆ ಇಂತಹ ತೀರ್ಪು ಕೊಟ್ಟರೆ ಉಳಿದವರು ನೆಟ್ಟಗಾಗುತ್ತಾರೆ ಅನ್ನೋದು ಸ್ಥಳೀಯರ ಅಭಿಪ್ರಾಯವಾಗಿದೆ.